ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ರಾವಸ್ಥೆಯಲ್ಲಿ ರಾಜ್ಯ ಸರ್ಕಾರ

Last Updated 29 ಜನವರಿ 2018, 7:16 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯದಲ್ಲಿ ಉಡಾಫೆ, ಅಹಂಕಾರ ಹಾಗೂ ಸದಾ ನಿದ್ರಾವಸ್ಥೆಯಲ್ಲಿರುವ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಶಾಸಕ ಸುರೇಶ್‌ಕುಮಾರ್ ಟೀಕಿಸಿದರು. ನಗರದ ಎನ್‌ಡಿವಿ ಹಾಸ್ಟೆಲ್‌ ಮೈದಾನದಲ್ಲಿ ಶಿವಮೊಗ್ಗ ನಗರ ಬಿಜೆಪಿಯಿಂದ ಭಾನುವಾರ ಏರ್ಪಡಿಸಿದ್ದ ನವಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ಸರ್ಕಾರ ಕೈಗೊಂಡ ಸಾಧನಾ ಸಮಾವೇಶಲ್ಲಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲಿಲ್ಲ. ಬದಲಾಗಿ ಮೋದಿ, ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷವನ್ನು ಬಯ್ಯುವುದಕ್ಕೆ ಸಾಧನಾ ಸಮಾವೇಶ ನಡೆಸಿದೆ. ಮೋದಿ ದುಡ್ಡಲ್ಲಿ ಸಿದ್ದರಾಮಯ್ಯ ಜಾತ್ರೆ ನಡೆಸುತ್ತಿದ್ದಾರೆ. 4 ವರ್ಷ 2 ತಿಂಗಳ ಅವಧಿಯಲ್ಲಿ 3,615 ರೈತರ ಆತ್ಮಹತ್ಯೆಗಳು, 6,521 ಕೊಲೆಗಳು, 4,759 ನಾಪತ್ತೆ ಪ್ರಕರಣಗಳು, 5,783 ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳೇ ಸಿದ್ದರಾಮಯ್ಯನವರ ಸಾಧನೆಯಾಗಿದೆ ಎಂದು ಹೇಳಿದರು.

ಅಮಿತ್‌ ಷಾ ಅವರನ್ನು ಕನ್ನಡಿಗರೇ ಎಂದು ಕೇಳುವ ಸಿದ್ದರಾಮಯ್ಯ ಅವರು ರಾಜ್ಯದ ಹಲವೆಡೆ ಕ್ಯಾಂಟೀನ್‌ ತೆರೆದು ಅದಕ್ಕೆ ಇಂದಿರಾ ಎಂದು ಹೆಸರಿಡಲು ಇಂದಿರಾ ಅವರೇನು ಕನ್ನಡಿಗರೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಇದೀಗ ಪರಿವರ್ತನೆಯ ಕಾಲ ಬಂದಿದೆ. ಪರಿವರ್ತನಾ ಯಾತ್ರೆಗೆ ಸಿಗುತ್ತಿರುವ ಜನಬೆಂಬಲವೇ ಇದಕ್ಕೆ ಉತ್ತಮ ನಿದರ್ಶನ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿರುವ ಉಡಾಫೆಯ ಸರ್ಕಾರವನ್ನು ಕಿತ್ತಾಕಿ, ಜನರ ಭಾವನೆಗಳಿಗೆ ಸ್ಪಂದಿಸುವ ಸರ್ಕಾರ ತರಲು ಎಲ್ಲರೂ ಕಟಿಬದ್ಧರಾಗಬೇಕು ಎಂದರು.

ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸತತ 83 ದಿನಗಳು ರಾಜ್ಯದ 223 ಕ್ಷೇತ್ರಗಳಲ್ಲಿ ಸುಮಾರು 10,800 ಕಿ.ಮೀ ಪ್ರವಾಸ ಮಾಡಿ ಪರಿವರ್ತನಾ ಸಮಾವೇಶ ನಡೆಸಿರುವುದು ರಾಜ್ಯದ ದಾಖಲೆಯಾಗಿದೆ. ಪರಿವರ್ತನಾ ಸಮಾವೇಶದ ಸಮಾರೋಪ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಸಮಾವೇಶಕ್ಕೆ ಸುಮಾರು 6 ರಿಂದ 7 ಲಕ್ಷ ಜನರನ್ನು ಸೇರಿಸಬೇಕು ಎನ್ನುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ಅಂದು ರಾಜ್ಯದ ಚುನಾವಣಾ ಪ್ರಚಾರ ಆರಂಭವಾಗಲಿದ್ದು, ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಅಲ್ಲದೆ ಬೂತ್‌ಗಳ ಸಬಲೀಕರಣ ಆಗಬೇಕು ಎನ್ನುವ ಉದ್ದೇಶದಿಂದ ರಾಜ್ಯದ 224 ಕ್ಷೇತ್ರಗಳಲ್ಲೂ ನವಶಕ್ತಿ ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಕೆ.ಎಸ್‌.ಈಶ್ವರಪ್ಪ, ಎಸ್‌.ರುದ್ರೇಗೌಡ, ಆರ್‌.ಕೆ.ಸಿದ್ದರಾಮಣ್ಣ, ಗಿರೀಶ್‌ ಪಟೇಲ್‌, ಚನ್ನಬಸಪ್ಪ, ಡಿ.ಎಸ್.ಅರುಣ್‌, ಎಂ.ಶಂಕರ್‌, ಜ್ಞಾನೇಶ್ವರ್, ರಾಜಶೇಖರ್, ಮಹೇಶ್ವರಪ್ಪ, ಚೇತನ್‌ರಾಜ್, ನಾಗರಾಜ್‌, ಎನ್‌.ಜೆ.ರಾಜಶೇಖರ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT