ಭಾನುವಾರ, ಡಿಸೆಂಬರ್ 15, 2019
25 °C

ವಿದೇಶಕ್ಕೆ ಹೋಗುವುದು ಅಫೆನ್ಸ್ ಏನ್ರಿ?ನನಗೆ ವೈಯಕ್ತಿಕ ಬದುಕು ಇಲ್ವಾ:ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ವಿದೇಶಕ್ಕೆ ಹೋಗುವುದು ಅಫೆನ್ಸ್ ಏನ್ರಿ? ನನಗೇನೂ ವೈಯಕ್ತಿಕ ಬದುಕು ಇಲ್ವಾ? ಎಲ್ಲವನ್ನೂ ನಿಮ್ಮ ಮುಂದೆ ಹೇಳಿ ಹೋಗಬೇಕೇ? ವಿದೇಶಕ್ಕೆ ಹೋಗುವುದು ತಪ್ಪು ಎನ್ನುವುದಾದರೆ ಹಾಗೆ ಬರೆದುಕೊಳ್ಳಿ’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇಲ್ಲಿ ಶನಿವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಸ್ನೇಹಿತರ ಮನೆಯಲ್ಲಿ ಮದುವೆ ಇದೆ, ಹೀಗಾಗಿ, ವಿದೇಶಕ್ಕೆ ಹೋಗುತ್ತಿದ್ದೇನೆ’ ಎಂದರು.‌

ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಲೆಕ್ಕಕ್ಕೆ ಸಿಗದ ಮೊತ್ತದ ಬಗ್ಗೆ ಬಿಜೆಪಿ ಮಾಡಿರುವ ಆರೋಪ‍ ಕುರಿತು ಪ್ರತಿಕ್ರಿಯಿಸಿ, ‘ಎಲ್ಲಾ ಸರ್ಕಾರಗಳ ಅವಧಿಯಲ್ಲಿ ಲೆಕ್ಕಕ್ಕೆ ಸಿಗದ ಮೊತ್ತ ಇದ್ದೇ ಇರುತ್ತದೆ. ಹಾಗಾದರೆ 2010–11, 2011–12, 2012–13ರಲ್ಲಿ ಯಾರು ಮುಖ್ಯಮಂತ್ರಿ ಆಗಿದ್ದರು? ಆಗಲೂ ಸಾವಿರಾರು ಕೋಟಿ ಮೊತ್ತಕ್ಕೆ ಲೆಕ್ಕ ಸಿಕ್ಕಿರಲಿಲ್ಲ. ಬಜೆಟ್‌ ಗಾತ್ರ ಹೆಚ್ಚಿದಂತೆ ಈ ಮೊತ್ತ ಹೆಚ್ಚುತ್ತಾ ಹೋಗುತ್ತದೆ. ಮಹಾ ಲೆಕ್ಕ ಪರಿಶೋಧಕರ (ಸಿಎಜಿ) ವರದಿಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರದ್ದು ತಪ್ಪು ಗ್ರಹಿಕೆ. ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಆರ್ಥಿಕ ಸಮತೋಲನ ಕಾಪಾಡಿಕೊಂಡು ಬಂದಿದ್ದೇವೆ’ ಎಂದು ತಿಳಿಸಿದರು.

‘ಪಾಪ ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಲೋಕಸಭಾ ಚುನಾವಣೆ ಒಳಗಡೆ ಮುಖ್ಯಮಂತ್ರಿ ಆಗದಿದ್ದರೆ ಮತ್ತೆಂದೂ ಆಗುವುದಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ, ಹೇಗಾದರೂ ಮಾಡಿ ಮುಖ್ಯಮಂತ್ರಿ ಆಗಲು ಶಾಸಕರನ್ನು ಖರೀದಿ ಮಾಡಲು ಓಡಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪಂಚರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ತೆಲಂಗಾಣ, ಮಿಜೋರಾಂನಲ್ಲಿ ಕಠಿಣ ಪೈಪೋಟಿ ಇದೆ. ಈ ಫಲಿತಾಂಶವು ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ’ ಎಂದರು.

‘ಮೊದಲೇ ನಿಗದಿ ಆಗಿದ್ದ ಪ್ರವಾಸ’

ಸ್ನೇಹಿತರೊಬ್ಬರ ಮಗಳ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ, ಇದೇ 10ರಿಂದ 14ರವರೆಗೆ ಮಲೇಷ್ಯಾ ತೆರಳಲಿದ್ದಾರೆ. ಆದರೆ, ವಿಧಾನಮಂಡಲ ಅಧಿವೇಶನದ ಮೊದಲ ವಾರ ಅವರು ಗೈರಾಗುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

‘ಅಧಿವೇಶನ ನಡೆಯುವ ದಿನ ನಿಗದಿಯಾಗುವುದಕ್ಕಿಂತಲೂ ಮೊದಲೇ ಸಿದ್ದರಾಮಯ್ಯ ಅವರು ಮಲೇಷ್ಯಾಕ್ಕೆ ಪ್ರವಾಸ ಕೈಗೊಳ್ಳುವುದು ನಿಗದಿಯಾಗಿತ್ತು. ಹೀಗಾಗಿ, ಅಧಿವೇಶನದಲ್ಲಿ ಭಾಗವಹಿಸುವುದರಿಂದ ದೂರ ಉಳಿಯಲು ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆ ಎಂಬ ಮಾತಿನಲ್ಲಿ ವಾಸ್ತವಾಂಶ ಇಲ್ಲ’ ಎಂದು ಅವರ ಆಪ್ತ ಮೂಲಗಳು ಹೇಳಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು