ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನೂ ಮಾಡಲಾಗದಿದ್ದರೆ ವರದಿ ಸುಟ್ಟು ಹಾಕಿ: ಎ.ಜೆ.ಸದಾಶಿವ ಆಕ್ರೋಶ

'ಒಳ ಮೀಸಲಾತಿ ವರದಿ ತಿರಸ್ಕರಿಸಿ ಇಲ್ಲವೇ ಪುರಸ್ಕರಿಸಿ'
Last Updated 24 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಮೈಸೂರು:‘ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ನೀಡಿರುವ ವರದಿಯನ್ನು ಪುರಸ್ಕರಿಸಿ, ಇಲ್ಲವೇ ತಿರಸ್ಕರಿಸಿ. ಈ ಎರಡನ್ನೂ ಮಾಡಲಾಗದಿದ್ದರೆ ವರದಿಯ ಪ್ರತಿಯನ್ನೇ ಸುಟ್ಟು ಹಾಕಿ’ ಎಂದು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ‘ನೂರು ವರ್ಷಗಳ ಮೀಸಲಾತಿಯ ನಡಿಗೆ... ಒಂದು ಪರಿವೀಕ್ಷಣೆ’ ಕಾರ್ಯಕ್ರಮದ ಅಂಗವಾಗಿ ಶನಿವಾರ ನಡೆದ ‘ಮೀಸಲಾತಿ ವರ್ಗೀಕರಣ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ’ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ವರದಿಯಲ್ಲಿ ಹೇಳಿರುವುದೇ ನನಗೆ ಮರೆತು ಹೋಗಿದೆ. ಅಧಿಕಾರಕ್ಕೆ ಬಂದ ಎಲ್ಲ ಪಕ್ಷದ ಸರ್ಕಾರಗಳೂ ವರದಿ ನಿರ್ಲಕ್ಷಿಸಿವೆ. ದಲಿತ ಸಮುದಾಯ ಜಾಗೃತಗೊಂಡು, ಹೋರಾಟ ನಡೆಸದಿದ್ದರೆ ವರದಿ ಅನುಷ್ಠಾನಗೊಳ್ಳುವುದಿರಲಿ, ಬಹಿರಂಗಗೊಳ್ಳುವುದೇ ಇಲ್ಲ’ ಎಂದು ಹೇಳಿದರು.

‘ಆರು ವರ್ಷದ ಹಿಂದೆಯೇ ವರದಿ ನೀಡಿದ್ದೇನೆ. ಅದರಲ್ಲೇನಿದೆ ಎಂಬುದನ್ನು ತೆಗೆದುನೋಡುವ ಗೋಜಿಗೂ ಹೋಗಿಲ್ಲ. ವರದಿಗೆ ದೂಳು ಹಿಡಿದಿರಬಹುದು. ಮಾಡಿದ ₹ 15 ಕೋಟಿ ಖರ್ಚು ಹಾಗೂ ಮಾನವ ಶ್ರಮಕ್ಕೆ ಫಲವಿಲ್ಲದಾಗಿದೆ. ಒಂದೆಡೆ ಧರ್ಮ ಸಂಕಟ, ಮತ್ತೊಂದೆಡೆ ಕಾನೂನಿನ ಸಂಕಟ. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾನಿದ್ದೇನೆ. ನಾನು ಮಾತನಾಡಬಹುದಾ ಎಂಬುದೇ ಕಾಡುತ್ತಿದೆ’ ಎಂದರು.

‘ವರದಿ ಬಹಿರಂಗಗೊಳ್ಳದೇ ದಲಿತರನ್ನು ಅಂತರಪಿಶಾಚಿಗಳನ್ನಾಗಿಸಿದೆ. ನಿಮ್ಮಲ್ಲಿಗೆ ಬರುವ ಶಾಸಕರನ್ನು ಈ ಬಗ್ಗೆ ಕೇಳಿ. ಪರಿಶಿಷ್ಟ ಜಾತಿಯ ಶಾಸಕರು ಏನು ಮಾಡುತ್ತಿದ್ದಾರೆ? ಮಾತು–ಚರ್ಚೆಯಿಂದ ಪ್ರಯೋಜನವಿಲ್ಲ. ನಿಮ್ಮ ಶಕ್ತಿ ಒಗ್ಗೂಡಿಸಿ ಹೋರಾಟಕ್ಕಿಳಿಯಿರಿ’ ಎಂದು ಸದಾಶಿವ ಹೇಳಿದರು.

ಮೀಸಲಾತಿ ಕಾನೂನುಬದ್ಧವಾದರೆ; ಒಳಮೀಸಲಾತಿ ಏಕಲ್ಲ?: ‘ಮೀಸಲಾತಿ ಕಾನೂನು ಬದ್ಧವಾದರೆ, ಒಳಮೀಸಲಾತಿ ಕಾನೂನು ವಿರೋಧಿ ಹೇಗೆ ಆಗುತ್ತದೆ? ಕಾನೂನು ಕಾನೂನೇ. ಕಾನೂನು ಇದನ್ನು ವಿರೋಧಿಸುತ್ತದೆ ಎಂದಾದರೆ ಆ ಕಾನೂನೇ ಯಾರಿಗೂ ಬೇಕಿಲ್ಲ’ ಎಂದ ಎ.ಜೆ.ಸದಾಶಿವ, ಸಂಸದ ವಿ.ಶ್ರೀನಿವಾಸಪ್ರಸಾದ್ ಹೆಸರು ಪ್ರಸ್ತಾಪಿಸದೆ, ಒಳ ಮೀಸಲಾತಿ ಕುರಿತಂತೆ ಸಂಸದರು ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲೇ ಪರ–ವಿರೋಧ

ಸದಾಶಿವ ಅವರ ಮಾತು ಮುಗಿಯುತ್ತಿದ್ದಂತೆಯೇ, ಪೂರ್ವ ನಿಗದಿಯಂತೆ ಪ್ರತಿಕ್ರಿಯೆಗೆ ಅವಕಾಶ ಕೊಡಲಾಯಿತು. ಸಭಿಕರಿಂದ ಪರ–ವಿರೋಧ ಅಭಿಪ್ರಾಯ ವ್ಯಕ್ತವಾದವು. ಕೆಲವರು ಅನುಮಾನವನ್ನು ವ್ಯಕ್ತಪಡಿಸಿದರು.

ಬೆಂಗಳೂರಿನ ಡಾ.ಆರ್.ಎನ್‌.ರಾಜಾ ನಾಯ್ಕ್, ‘ ಈ ವರದಿ ಜನ ಹಾಗೂ ಸಂವಿಧಾನ ವಿರೋಧಿ’ ಎಂದು ಹೇಳುತ್ತಿದ್ದಂತೆಯೇ ಹಲವರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ, ವಾಗ್ವಾದವೂ ಶುರುವಾಯಿತು.

ಪರಿಸ್ಥಿತಿ ಗಂಭೀರವಾಗಿದ್ದನ್ನು ಗಮನಿಸಿದ ಸದಾಶಿವ ಅವರೇ ತಿಳಿಗೊಳಿಸಲು ಮುಂದಾದರು. ‘ಬಾಯ್ಮುಚ್ರೀ ಮೊದಲು. ದೇಶ ಕಟ್ಟೋರಾ ನೀವು? ಯಾವಾಗ ಉದ್ಧಾರವಾಗ್ತೀರಿ? ಇಷ್ಟವಿದ್ರೆ ಸ್ವೀಕರಿಸಿ, ಇಲ್ಲದಿದ್ರೇ ಬಿಡ್ರೀ...’ ಎಂದು ಗದರಿದರು.

ಹಲವು ಸಭಿಕರು, ‘ನಿಮ್ಮ ವರದಿ ಅವೈಜ್ಞಾನಿಕ‘ ಎಂದು ಜರಿದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಿಮ್ಮನ್ನು ಒಪ್ಪಿ ಎಂದು ಯಾರು ಕೇಳಿದ್ದು? ಮೊದಲು ವರದಿ ಬಹಿರಂಗಗೊಳ್ಳಲಿ. ನಂತರ ಮುಕ್ತ ಚರ್ಚೆ ನಡೆಯಲಿ. ಒಪ್ಪಿಗೆಯಾದಿದ್ದರೆ ತಿರಸ್ಕರಿಸಿ’ ಎಂದು ಹೇಳಿದರು.

*ಸಾಮಾಜಿಕ ತುಳಿತಕ್ಕೊಳಗಾದವರು ಕ್ರಾಂತಿಗೆ ಸಿದ್ಧರಾದಾಗಲೇ ನ್ಯಾಯ ಸಿಗುತ್ತದೆ. ಸರ್ಕಾರದ ನಿರ್ಧಾರಕ್ಕೆ ಕಾಯುವುದರಿಂದ ಪ್ರಯೋಜನವಿಲ್ಲ

-ಎ.ಜೆ.ಸದಾಶಿವ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT