ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಹಲಸಿನ ಹಬ್ಬ

ಆ.3–4ಕ್ಕೆ ತರಹೇವಾರಿ ಹಲಸಿನ ಅನಾವರಣ
Last Updated 29 ಜುಲೈ 2019, 19:45 IST
ಅಕ್ಷರ ಗಾತ್ರ

ಮೈಸೂರು: ಮೊದಲ ಬಾರಿಗೆ ಅರಮನೆ ನಗರಿಯಲ್ಲಿ ನಡೆಯಲಿರುವ ಹಲಸಿನ ಹಬ್ಬಕ್ಕೆ ಮೈಸೂರು ಸಜ್ಜುಗೊಳ್ಳುತ್ತಿದೆ. ಆ. 3, 4ರಂದು ನಗರದ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಈ ಹಬ್ಬ ನಡೆಯಲಿದ್ದು, ಸಿದ್ಧತೆಗಳು ಬಿರುಸುಗೊಂಡಿವೆ.

ಹಲಸಿನ ಐಸ್‌ ಕ್ರೀಂ, ಹಲಸಿನ ಜಾಫಿ (ಹಲಸಿನ ಬೀಜದ ಕಾಫಿ), ಹಲಸಿನ ಹೋಳಿಗೆ, ಬೀಜದ ವಡೆ, ಹಿಟ್ಟಿನ ರೊಟ್ಟಿ, ಹಲ್ವ, ಚಿಪ್ಸ್... ಹಲಸಿನ ಕಬಾಬ್‌, ವೆಜಿಟೇರಿಯನ್ ಮಟನ್‌ (ಹಲಸಿನ ಸಸ್ಯಹಾರಿ ಮಾಂಸ), ಪಲಾವ್, ಬಿರಿಯಾನಿ, ಹಪ್ಪಳ... ಹಲಸಿನ ಹಬ್ಬದಲ್ಲಿ ಸಿಗಲಿರುವ ಹಲಸಿನಿಂದಲೇ ತಯಾರಿಸಿದ ತಿನಿಸುಗಳಿವು.

ರಾಜ್ಯದ ವಿವಿಧೆಡೆ ಖ್ಯಾತಿ ಗಳಿಸಿರುವ ಹಲಸಿನ ಹಣ್ಣುಗಳು, ಬೇರೆ ಬೇರೆ ಜಾತಿಯ ಹಲಸಿನ ತಳಿಗಳು, ವಿವಿಧ ಸಂಘ–ಸಂಸ್ಥೆಗಳು ಹಲಸಿನ ಮಾರುಕಟ್ಟೆಗಾಗಿ ಮೌಲ್ಯವರ್ಧನೆಗೊಳಿಸಿ ತಯಾರಿಸಿದ ನಾನಾ ಬಗೆಯ ಹಲಸಿನ ಉತ್ಪನ್ನಗಳು ಕೂಡ ಈ ಹಬ್ಬದಲ್ಲಿ ದೊಕಲಿರುವುದು ವಿಶೇಷ.

ಸಹಜ ಸಮೃದ್ಧ ಕೃಷಿ ಸಂಸ್ಥೆ ಹಾಗೂ ಮೈಸೂರು ರೋಟರಿ ಕ್ಲಬ್‌ ಸಹಭಾಗಿತ್ವದಲ್ಲಿ ಹಲಸಿನ ಹಬ್ಬ ಆಯೋಜನೆಗೊಂಡಿದೆ. ರಾಜ್ಯವೂ ಸೇರಿದಂತೆ ನೆರೆಯ ಕೇರಳದ ಹಲಸಿನ ಬೆಳೆಗಾರರು, ಮೌಲ್ಯವರ್ಧಿತ ಗುಂಪುಗಳನ್ನು ಮೈಸೂರಿಗರಿಗೆ ಪರಿಚಯಿಸುವ ಯತ್ನ ಇದಾಗಿದೆ ಎಂದು ಸಹಜ ಸಮೃದ್ಧ ನಿರ್ದೇಶಕ ಜಿ.ಕೃಷ್ಣಪ್ರಸಾದ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಬರದಲ್ಲೂ ಬದುಕಿ, ಹಣ್ಣನ್ನು ನೀಡುವ ಬೆಳೆ ಹಲಸು. ಆರಂಭದ ಒಂದೆರೆಡು ವರ್ಷ ಹಲಸಿನ ಗಿಡಕ್ಕೆ ಕಾಳಜಿ ಮಾಡಿದರೆ ಸಾಕು. ಅಲ್ಲಿಂದ ಮುಂದಕ್ಕೆ ಪ್ರಕೃತಿಯ ಎಲ್ಲವನ್ನೂ ಸಹಿಸಿಕೊಂಡು ಗಿಡ, ಮರವಾಗಿ ಹಣ್ಣನ್ನು ನೀಡಲಿದೆ’ ಎನ್ನುತ್ತಾರೆ ಜಿ.ಕೃಷ್ಣಪ್ರಸಾದ್‌.

‘ಹಣ್ಣಿನ ಕೃಷಿಯೂ ಈಚೆಗಿನ ವರ್ಷಗಳಲ್ಲಿ ಕಷ್ಟದಾಯಕವಾಗಿದೆ. ಬೇಸಿಗೆಗಳು ಮರೆಯಲಾರದ ಪಾಠ ಕಲಿಸುತ್ತಿವೆ. ಇಂತಹ ಹೊತ್ತಲ್ಲಿ ರೈತರಿಗೆ ನೆರವಾಗಲಿಕ್ಕಾಗಿ ಈ ಹಬ್ಬ ಆಯೋಜಿಸಿದ್ದೇವೆ. ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಯ ಒಣಭೂಮಿ ರೈತರ ಪಾಲಿಗೆ ಹಲಸು ಭವಿಷ್ಯದಲ್ಲಿ ಅತ್ಯುತ್ತಮ ಬೆಳೆಯಾಗಲಿದೆ’ ಎಂದು ಅವರು ಹೇಳಿದರು.

ಹಲಸು ನೆಟ್ಟು–ಬರ ಅಟ್ಟು

‘ಹಲಸು ನೆಟ್ಟು–ಬರ ಅಟ್ಟು’ ಎಂಬ ಘೋಷ ವಾಕ್ಯದೊಂದಿಗೆ ಹಬ್ಬ ಆಯೋಜನೆಗೊಂಡಿದೆ. ಆ.3ರ ಶನಿವಾರ ಹಬ್ಬಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದೆ. ರಾಜ್ಯದ ವಿವಿಧೆಡೆ ಹಲಸನ್ನು ಬೆಳೆಯಾಗಿ ಮಾರ್ಪಾಡು ಮಾಡಿಕೊಂಡ ಬೆಳೆಗಾರರು, ತುಮಕೂರಿನ ಅಪರೂಪದ ‘ಸಿದ್ದು’ ತಳಿ ಹಲಸನ್ನು ದೇಶಕ್ಕೆ ಪರಿಚಯಿಸಿದ ಡಾ.ಕರುಣಾಕರನ್, ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಡಾ.ಎಂ.ಆರ್.ದಿನೇಶ್‌ ಭಾಗಿಯಾಗಿ ಸ್ಥಳೀಯ ರೈತರಿಗೆ ಹಲಸಿನ ಮಹತ್ವದ ಬಗ್ಗೆ ತಿಳಿಸಲಿದ್ದಾರೆ.

ಹಬ್ಬದ ಎರಡನೇ ದಿನವಾದ ಭಾನುವಾರ ಮಧ್ಯಾಹ್ನ 12ಕ್ಕೆ ಹಲಸಿನ ಅಡುಗೆ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಆಯೋಜಿಸಲಾಗಿದೆ. ಆಸಕ್ತರು ಶಿವರುದ್ರ–8867252979 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT