ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ರಾಜನಂತೆ, ನಾವು ಪ್ರಜೆಗಳಷ್ಟೇ: ಜಗ್ಗಿ ವಾಸುದೇವ್

ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗಸ್ವಾಮೀಜಿ ಅವರೊಂದಿಗೆ ಚರ್ಚೆ
Last Updated 25 ಮಾರ್ಚ್ 2021, 8:25 IST
ಅಕ್ಷರ ಗಾತ್ರ

ಮೈಸೂರು: ‘ಈಗ ರಾಜ್ಯಸರ್ಕಾರ ರಾಜನಂತಿದೆ. ನಾವು ಪ್ರಜೆಗಳಾಗಿದ್ದೇವೆ. ಚುನಾವಣೆ ಬಂದರೆ ಎಲ್ಲರೂ ಪ್ರಜೆಗಳಾಗುತ್ತಾರೆ. ಆಗ ಮಾತನಾಡಬಹುದು. ರಾಜ್ಯ ಸರ್ಕಾರ ರಾಜನಂತಾಗಿರುವ ಈ ಹೊತ್ತಿನಲ್ಲಿ ಅವರೊಂದಿಗೆ ಏನು ಮಾತನಾಡುವುದು’ ಎಂದು ಈಶಾ ಫೌಂಡೇಷನ್ನಿನ ಸಂಸ್ಥಾಪಕ ಜಗ್ಗಿ ವಾಸುದೇವ್ ಪ್ರಶ್ನಿಸಿದರು.

ಇಲ್ಲಿನ ಸುತ್ತೂರು ಮಠಕ್ಕೆ ಗುರುವಾರ ಅವರು ಭೇಟಿ ನೀಡಿದ್ದ ವೇಳೆ ಸುದ್ದಿಗಾರರು ಕೇಳಿದ, ‘ತಮಿಳುನಾಡಿನ ದೇವಾಲಯಗಳನ್ನು ಮುಕ್ತಗೊಳಿಸಿ’ (ಫ್ರೀ ಟಿ.ಎನ್ ಟೆಂಪಲ್ಸ್) ಎಂಬ ಆನ್‌ಲೈನ್‌ ಅಭಿಯಾನವನ್ನು ಕರ್ನಾಟಕದಲ್ಲೇಕೆ ಪ್ರಾರಂಭ ಮಾಡಬಾರದು’ ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

ತಮಿಳುನಾಡಿನ 44 ಸಾವಿರ ದೇಗುಲಗಳ ಪೈಕಿ 12 ಸಾವಿರ ದೇಗುಲದಲ್ಲಿ ಒಂದೇ ಒಂದು ಪೂಜೆ ನಡೆದಿಲ್ಲ. 37 ಸಾವಿರ ದೇಗುಲಗಳಲ್ಲಿ ಒಬ್ಬರೇ ಇದ್ದು, ಅವರೇ ಪೂಜೆ ಮತ್ತು ನಿರ್ವಹಣೆ ಮಾಡುತ್ತಿದ್ದಾರೆ. 1,500 ಅಮೂಲ್ಯ ವಿಗ್ರಹಗಳು ಕಾಣೆಯಾಗಿವೆ ಎಂದು ಅಲ್ಲಿನ ಸರ್ಕಾರವೇ ಹೈಕೋರ್ಟ್‌ಗೆ ಮಾಹಿತಿ ಸಲ್ಲಿಸಿದೆ. ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಒಟ್ಟು 9 ಸಾವಿರ ಮೂರ್ತಿಗಳು ಕಳವಾಗಿದ್ದು, ಅವುಗಳ ಜಾಗದಲ್ಲಿ ಹೊಸ ಮೂರ್ತಿ ಇಡಲಾಗಿದೆ ಎಂದು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸರ್ಕಾರಗಳು ದೇವಾಲಯವನ್ನು ಒಂದು ವ್ಯವಹಾರವಾಗಿ ನೋಡುತ್ತಿದೆ. ಇದು ಹೀಗೆಯೇ ಮುಂದುವರಿದರೆ ಮುಂದಿನ 50 ವರ್ಷಗಳಲ್ಲಿ ದೇವಾಲಯಗಳೇ ಇಲ್ಲದಿರುವ ಸ್ಥಿತಿ ನಿರ್ಮಾಣವಾಗಬಹುದು. ಹಾಗಾಗಿ, ಆನ್‌ಲೈನ್‌ ಅಭಿಯಾನ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

‘ಕಾವೇರಿ ಕೂಗು’ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕೋವಿಡ್ ಮಧ್ಯೆಯೂ 1.10 ಕೋಟಿ ಸಸಿಗಳನ್ನು ಕಳೆದ ವರ್ಷ ರೈತರ ಜಮೀನುಗಳಲ್ಲಿ ನೆಡಲಾಯಿತು. ಮುಂದಿನ ವರ್ಷ 3.50 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಸುತ್ತೂರು ಸ್ವಾಮೀಜಿ ಅವರನ್ನು ಭೇಟಿ ಮಾಡಿ ಒಂದು ವರ್ಷವಾಗಿತ್ತು. ಹಾಗಾಗಿ, ಅವರನ್ನು ಭೇಟಿ ಮಾಡಲೆಂದು ಬಂದೆ. ಬೇರೆ ಯಾವುದೇ ಉದ್ದೇಶ ಇದರಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇಲ್ಲಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಜಗ್ಗಿ ವಾಸುದೇವ್, ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅವರೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT