ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಪುರ: ರಸ್ತೆ ಬದಿ ಕೋಳಿ ತ್ಯಾಜ್ಯ

ಮೂಗು ಮುಚ್ಚಿಕೊಂಡು ಓಡಾಡುವ ಜನ; ಕಸದ ತೊಟ್ಟಿಗಳ ನಿರ್ವಹಣೆ ಕೊರತೆ
Last Updated 16 ಡಿಸೆಂಬರ್ 2021, 4:06 IST
ಅಕ್ಷರ ಗಾತ್ರ

ಜಯಪುರ: ಹೋಬಳಿ ವ್ಯಾಪ್ತಿಯ ಗ್ರಾಮಗಳ ಮುಖ್ಯರಸ್ತೆಯ ಬದಿಗಳ ಅಂಗಡಿ, ಹೋಟೆಲ್‌, ಬೇಕರಿ ಹಾಗೂ ಕೋಳಿ ಮಾಂಸದಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೈಸೂರು– ಮಾನಂದವಾಡಿ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಸುರಿಯಲಾಗುತ್ತಿದೆ. ಕಸ ದುರ್ವಾಸನೆ ಬೀರುತ್ತಿರುವುದರಿಂದ ಈ ಭಾಗದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಕೆಂಚಲಗೂಡು, ಡಿ.ಸಾಲುಂಡಿ, ಜಯಪುರ, ಹಾರೋಹಳ್ಳಿ, ಗುಜ್ಜೇಗೌಡನಪುರ ಗ್ರಾಮಗಳಲ್ಲಿ ಕಸದ ಸಮಸ್ಯೆ ತಲೆದೋರಿದೆ.

ಧನಗಹಳ್ಳಿ, ಜಯಪುರ, ಹಾರೋ ಹಳ್ಳಿ, ಉದ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಕಸದ ತೊಟ್ಟಿಗಳನ್ನು ನಿರ್ಮಿಸಲಾಗಿತ್ತು. ಆದರೆ, ಕಸದ ತೊಟ್ಟಿಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗಳು ಮರೆತಿವೆ. ಜನರು ಎಲ್ಲೆಂದರಲ್ಲಿ ಕಸ ಸುರಿಯುತ್ತಿದ್ದಾರೆ.

ಉದ್ಬೂರು ಗ್ರಾಮದ ಬಾರ್‌ಗಳು ಮತ್ತು ಹೋಟೆಲ್‌ ಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ರಸ್ತೆಬದಿ ಇರುವ ಕೆರೆ ಪಕ್ಕದಲ್ಲಿ ಸುರಿಯಲಾಗುತ್ತಿದೆ. ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯ ನಿವಾಸಿ ಬಸವರಾಜು ಆಗ್ರಹಿಸಿದರು.

ಎಲ್ಲೆಂದರಲ್ಲಿ ಕಸ ಸುರಿಯುವವರಿಗೆ ದಂಡ ವಿಧಿಸಬೇಕು. ಜತೆಗೆ ಕಾನೂನು ಕ್ರಮ ಜರುಗಿಸಬೇಕು. ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದು ಜಯಪುರ ಗ್ರಾಮಸ್ಥ ಅರ್ಜುನ್ ಆಗ್ರಹಿಸಿದರು.

ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಕ್ರಮ: ‘ಗ್ರಾಮಗಳಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಜನರು ರಸ್ತೆ ಬದಿ ಕಸ ಹಾಕದಂತೆ ಎಚ್ಚರಿಕೆ ಫಲಕಗಳನ್ನು ಹಾಕಲಾಗುವುದು. ಕಸ ವಿಲೇವಾರಿ ಮಾಡಲು ತಾಲ್ಲೂಕು ಆಡಳಿತದಿಂದ ಪ್ರತಿ ಗ್ರಾ.ಪಂ.ಗೆ ಒಂದೊಂದು ಆಟೊ ನೀಡಲಾಗಿದೆ. ಸ್ಥಳೀಯ ಮಟ್ಟದಲ್ಲಿ ಪೌರಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಛತೆಗೆ ಒತ್ತು ನೀಡಲಾಗಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ಪ್ರತಿ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನುಷ್ಯರ ಮೇಲೆ ನಾಯಿಗಳ ದಾಳಿ’
ಕೋಳಿ ತ್ಯಾಜ್ಯ ಗಬ್ಬುನಾರುತ್ತಿದ್ದು, ದುರ್ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ತ್ಯಾಜ್ಯವನ್ನು ತಿನ್ನಲು ಬರುವ ನಾಯಿಗಳು ಮನುಷ್ಯರ ಮೇಲೆ ದಾಳಿ ನಡೆಸುತ್ತಿವೆ. ಸೊಳ್ಳೆ ಮತ್ತು ನೊಣಗಳ ಕಾಟವೂ ವಿಪರೀತವಾಗಿದೆ. ಪ್ರತಿ ಗ್ರಾಮ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಬೇಕು. ಹಲವೆಡೆ ಕೆರೆಗಳ ಪಕ್ಕದಲ್ಲಿ ಕಸ ಸುರಿಯುತ್ತಿರುವುದರಿಂದ ಜಾನುವಾರುಗಳು ಪ್ಲಾಸ್ಟಿಕ್ ತಿನ್ನುತ್ತಿವೆ. ಕಸ ವಿಲೇವಾರಿಗಾಗಿ ಪ್ರತಿ ಗ್ರಾ.ಪಂ ಮಟ್ಟದಲ್ಲಿ ಘಟಕಗಳನ್ನು ಸ್ಥಾಪಿಸಬೇಕು ಎಂದು ಜಯಪುರ ಹೋಬಳಿ ವಿಕಾಸ ವೇದಿಕೆ ಅಧ್ಯಕ್ಷ ದಾರಿಪುರ ಡಿ.ಚಂದ್ರಶೇಖರ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT