ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಬೂಸವಾರಿಯಲ್ಲಿ ಗೊರವರ ಕುಣಿತದ ವೈಭವ

ದಸರಾದಲ್ಲಿ ಪಾಲ್ಗೊಂಡಿರುವ ಚಾಮರಾಜನಗರ ಜಿಲ್ಲೆಯ ಕಲಾವಿದರ ತಂಡ
Last Updated 5 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ಮೈಸೂರು: ‘ಗೊರವಯ್ಯನಾಗಲು ದೀಕ್ಷೆ ಪಡೆಯಬೇಕು, ದೀಕ್ಷೆ ಪಡೆದ ಮೇಲೆ ಕಟ್ಟುನಿಟ್ಟಾಗಿ ಇರಬೇಕು. ಧೂಮಪಾನ, ಮದ್ಯಪಾನದಿಂದ ದೂರವಿರಬೇಕು. ಎದುರು ಬದುರು ಕೂತು ಊಟ ಮಾಡಬಾರದು, ಬರಿಗಾಲಲ್ಲಿ ನೃತ್ಯ ಮಾಡಬೇಕು. ಆಗ ಮಾತ್ರ ಗೊರವರ ಕುಣಿತಕ್ಕೆ ಅರ್ಥ ಬರುತ್ತದೆ...’

ಹನ್ನೆರಡು ವರ್ಷಗಳಿಂದ ಗೊರವರ ಕುಣಿತ ಕಲೆಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸುತ್ತಾ, ಪ್ರದರ್ಶಿಸುತ್ತಿರುವ ಚಾಮರಾಜನಗರ ಜಿಲ್ಲೆ ರಾಮಸಮುದ್ರದ ಕಲಾವಿದ ಪುಟ್ಟಸ್ವಾಮಿ ಕುಣಿತದ ನಿಯಮಗಳನ್ನು ವಿವರಿಸಿದ್ದು ಹೀಗೆ.

ದಸರಾ ಜಂಬೂಸವಾರಿಯಲ್ಲಿ 15 ವರ್ಷಗಳಿಂದ ಗೊರವರ ಕುಣಿತ ಪ್ರದರ್ಶಿಸುತ್ತಿರುವ ಶ್ರೀ ಪರಮೇಶ್ವರ ಜಾನಪದ ಗೊರವರ ಕುಣಿತ ಕಲಾ ಸಂಘದ ತಂಡದಲ್ಲಿ ಪುಟ್ಟಸ್ವಾಮಿಯೂ ಒಬ್ಬರಾಗಿದ್ದಾರೆ.

ಬುಲೇವಾರ್ಡ್‌ ರಸ್ತೆಯಲ್ಲಿ ಶನಿವಾರ ನಡೆದ ಚಿತ್ರಸಂತೆ ಉದ್ಘಾಟನಾ ಸಮಾರಂಭದಲ್ಲಿ ಗೊರವರ ಕುಣಿತದ ಮೂಲಕ ಈ ತಂಡ ಗಮನಸೆಳೆಯಿತು. ಕೊರಳಲ್ಲಿ ರುದ್ರಾಕ್ಷಿ ಮಾಲೆ, ಕಚ್ಚೆಪಂಚೆ, ಸೊಂಟಕ್ಕೆ ಕಂಬಳಿ ಸುತ್ತಿಕೊಂಡು ಕವಡೆಗಳಿಂದ ಅಲಂಕೃತಗೊಂಡ ಉಡುಪು ಧರಿಸಿದ ಗೊರವರು, ಡಮರುಗ ಬಾರಿಸುತ್ತ ಮಲ್ಲಿಕಾರ್ಜುನ ಸ್ವಾಮಿ ಕುರಿತ ಹಾಡು ಹೇಳುತ್ತಾ ಲಯಬದ್ಧವಾಗಿ ಹೆಜ್ಜೆ ಹಾಕುತ್ತಿದ್ದರೆ ರಸ್ತೆಯಲ್ಲಿ ಹೋಗುತ್ತಿದ್ದವರೂ ಒಂದು ಕ್ಷಣ ನಿಂತು ನೋಡುವಂತಿತ್ತು.

ಹತ್ತು ಜನರ ತಂಡ: ‘ರಾಜ್ಯಪ್ರಶಸ್ತಿ ಪುರಸ್ಕೃತ ಪುಟ್ಟಸ್ವಾಮಿಗೌಡ ಅವರು ನಮಗೆ ಗೊರವರ ಕುಣಿತ ಹೇಳಿಕೊಟ್ಟರು. ರಾಮಸಮುದ್ರದ 10 ಜನ ತಂಡದಲ್ಲಿದ್ದೇವೆ. ಯಾರೂ ಹೆಚ್ಚಿಗೆ ಓದಿಲ್ಲ. ಇದೇ ಕಲೆ ನಮಗೆ ಆಧಾರ. ಮದುವೆ, ಗೃಹಪ್ರವೇಶ, ಗಣೇಶೋತ್ಸವ ಹಾಗೂ ಸಮ್ಮೇಳನಗಳ ಮೆರವಣಿಗೆಗೆ ನಮಗೆ ಆಹ್ವಾನ ಬರುತ್ತದೆ’ ಎಂದರು ಕಲಾವಿದ ಸ್ವಾಮೇಶ್‌.

‘ಕುಣಿತಕ್ಕೆ ಮುನ್ನ ನಾವೇ ಮೇಕಪ್‌ ಮಾಡಿಕೊಳ್ಳುತ್ತೇವೆ, ಬಟ್ಟೆಗಳಿಗೆ ಕವಡೆಯನ್ನು ನಾವೇ ಹೊಲಿದುಕೊಳ್ಳುತ್ತೇವೆ. ಒಂದು ಸಾಲು, ಮೂರು ಸಾಲು ಹಾಗೂ ಸುತ್ತುವರಿದು ನೃತ್ಯ ಮಾಡುತ್ತೇವೆ. ಮುಡುಕುತೊರೆ ಮಲ್ಲಿಕಾರ್ಜುನನ್ನು ನೆನೆಯುತ್ತಾ ಹೆಜ್ಜೆ ಹಾಕುತ್ತೇವೆ. ನಾಲಗೆ ಹೊರ ಚಾಚಿ, ಡಮರುಗ ಬಾರಿಸುತ್ತೇವೆ’ ಎಂದು ಅವರು ನೃತ್ಯದ ಬಗ್ಗೆ ತಿಳಿಸಿದರು.

ಈ ತಂಡದಲ್ಲಿ 40 ವರ್ಷ ಮೀರಿದ ಕಲಾವಿದರೂ ಇದ್ದಾರೆ. ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹಾಗೂ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಮೆರವಣಿಗೆಯಲ್ಲೂ ಪ್ರದರ್ಶನ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಮಾಹಿತಿಗೆ: ಮೊ: 89703 80535 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT