ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾನಪದ ಎದೆ ಬಡಿತವಿದ್ದಂತೆ’

ಜಾನಪದ ಅರಿವು–ಒಂದು ದಿನದ ಶಿಬಿರದಲ್ಲಿ ಡಾ.ರಾಮೇಗೌಡ ಅಭಿಮತ
Last Updated 30 ಜೂನ್ 2019, 14:47 IST
ಅಕ್ಷರ ಗಾತ್ರ

ಮೈಸೂರು: ‘ಜಾನಪದ ಎದೆ ಬಡಿತವಿದ್ದಂತೆ. ಉಸಿರಾಟವಿದ್ದಂತೆ. ನಿರಂತರವಾಗಿ ಎಲ್ಲರೊಳಗೂ ಹಾಸುಹೊಕ್ಕಿರುತ್ತದೆ’ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಡಾ.ರಾಮೇಗೌಡ ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಮೈಸೂರು ಜಿಲ್ಲಾ ಘಟಕ ಭಾನುವಾರ ನಗರದ ಮನೆಯಂಗಳದಲ್ಲಿ ಆಯೋಜಿಸಿದ್ದ ‘ಜಾನಪದ ಅರಿವು–ಒಂದು ದಿನದ ಶಿಬಿರ’ ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರತಿಯೊಬ್ಬರು ಒಂದಲ್ಲಾ ಒಂದು ಸಂಸ್ಕೃತಿಯ ಸಮೂಹಕ್ಕೆ ಸೇರಿದ್ದೇವೆ. ಜಾನಪದದ ಭಾಗವಾಗಿಯೇ ಜೀವಿಸುತ್ತಿದ್ದೇವೆ’ ಎಂದು ಹೇಳಿದರು.

‘1960, 70, 80ರ ದಶಕದಲ್ಲಿ ಜಾನಪದ ಕುರಿತಂತೆ ವೈಜ್ಞಾನಿಕ ಅಧ್ಯಯನ ನಡೆಯಿತು. ಆ ಸಂದರ್ಭವೇ ನಮ್ಮ ಸಮಕಾಲೀನರೆಲ್ಲರೂ; ಜಾನಪದವನ್ನು ಪ್ರಶ್ನಿಸದೆ ಒಪ್ಪಿಕೊಳ್ಳಬೇಕು. ಜನಪದಕ್ಕೆ ಸಂಬಂಧಿಸಿದ ಎಲ್ಲವೂ ಶುದ್ಧತನದ ಪ್ರತಿರೂಪ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದೆವು’ ಎಂಬುದನ್ನು ರಾಮೇಗೌಡ ನೆನಪಿಸಿಕೊಂಡರು.

‘ಭಾರತದ ಉಳಿವು, ಪರಂಪರೆ, ಸಂಸ್ಕೃತಿಯ ಉಳಿವು ಜಾನಪದದಿಂದ ಮಾತ್ರ ಸಾಧ್ಯ. ನಾವು ಎಲ್ಲಿಗೆ ಹೋದರೂ ಭಾರತೀಯರೇ ಆಗಿರುತ್ತೇವೆ ವಿನಾಃ ವಿದೇಶಿಯರಾಗಿರಲು ಸಾಧ್ಯವಿಲ್ಲ’ ಎಂದು ಜಾನಪದ ವಿದ್ವಾಂಸ ಹಿ.ಶಿ.ರಾಮಚಂದ್ರಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

‘‘ಜಾನಪದ ಅರಿವು’ ಕುರಿತ ಈ ಒಂದು ದಿನದ ಶಿಬಿರಕ್ಕೆ 49 ಜನರು ತಮ್ಮ ಹೆಸರು ನೋಂದಾಯಿಸಿದ್ದರು. ಹಾಜರಾದವರ ಸಂಖ್ಯೆ 12 ಅಷ್ಟೇ. ಇದರಿಂದ ಧೃತಿಗೆಡಬೇಕಿಲ್ಲ. ಪ್ರತಿಯೊಂದನ್ನು ನಾವು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಲೋಕಸಭಾ ಚುನಾವಣೆ ಪೂರ್ವ ಹಾಗೂ ಪ್ರಸ್ತುತ ಬಿಜೆಪಿ ಅಭ್ಯರ್ಥಿಗಳು, ಸಂಸದರಾಗಿ ಆಯ್ಕೆಯಾದವರು ನರೇಂದ್ರ ಮೋದಿ ಎಂಬ ಹೆಸರಿನ ಜಪವನ್ನೇ ನಡೆಸಿದ್ದರು.

ಮೋದಿ ಹೆಸರಿನ ನಾಮ ಬಲದಿಂದಲೇ ಬಹುತೇಕರು ಆಯ್ಕೆಯಾದರು. ದೇಶ ಕಟ್ಟಲು ಸಂಖ್ಯೆ ಬೇಕಿಲ್ಲ. ಸಮರ್ಥ ನಾಯಕನೊಬ್ಬ ಸಾಕು ಎಂಬುದನ್ನು ಇದು ಸಾಬೀತುಪಡಿಸಿತು. ಇದೇ ರೀತಿ ಜಾನಪದದ ಉಳಿವಿಗೆ ಬೆರಳೆಣಿಕೆಯ ಸಮರ್ಥರಷ್ಟೇ ಸಾಕು’ ಎಂದು ಹೇಳಿದರು.

‘ಜಾಗತೀಕರಣದ ಭರಾಟೆಯಲ್ಲಿ ಕೊಳ್ಳುಬಾಕ ಸಂಸ್ಕೃತಿ ಹೆಚ್ಚಿದೆ. ಈ ಮಾರುಕಟ್ಟೆ ಸಂಸ್ಕೃತಿ ಶಾಶ್ವತವಲ್ಲ. ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣ ಪಡೆಯುವ ಎಲ್ಲರಿಗೂ ಜಾನಪದ ತಿಳಿಸಬೇಕಿದೆ. ಮನದಟ್ಟಾಗುವ ರೀತಿ ಅರ್ಥೈಸಬೇಕಿದೆ. ನಗರದ ಜತೆಗೆ ಜಾನಪದ ಅರಸಿ ಹಳ್ಳಿಗಳಿಗೆ ಹೋಗಲೇಬೇಕಿದೆ’ ಎಂದು ರಾಮಚಂದ್ರಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT