ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕನೇ ದಿನವೂ ಕರಗದ ಜನ

ಸಾಮೂಹಿಕ ವಿವಾಹ, ರಥೋತ್ಸವ ಮುಗಿದರೂ ಕಳೆಗುಂದದ ಸುತ್ತೂರು ಜಾತ್ರೆ
Last Updated 25 ಜನವರಿ 2020, 11:36 IST
ಅಕ್ಷರ ಗಾತ್ರ

ಮೈಸೂರು: ಸುತ್ತೂರಿನಲ್ಲಿ ನಡೆಯುತ್ತಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ 4ನೇ ದಿನವಾದ ಶುಕ್ರವಾರವೂ ಸಾವಿರಾರು ಮಂದಿ ಭಾಗಿಯಾದರು.

ಸಾಮೂಹಿಕ ವಿವಾಹ, ದನಗಳಜಾತ್ರೆ ಹಾಗೂ ರಥೋತ್ಸವದ ದಿನಗಳಂದು ಜನದಟ್ಟಣೆ ಸಾಮಾನ್ಯ. ಆದರೆ, ಇವುಗಳು ಮುಗಿದ ನಂತರವೂ ಜಾತ್ರೆ ಕಳೆಗುಂದಿಲ್ಲ. ತನ್ನ ಎಂದಿನ ಆಕರ್ಷಣೆಯೊಂದಿಗೆ ಜಾತ್ರೆ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ.

ಕೃಷಿ ವಿಚಾರ ಸಂಕಿರಣದಲ್ಲಿದ್ದ ಎಲ್ಲ ಕುರ್ಚಿಗಳೂ ಭರ್ತಿಯಾಗಿದ್ದವು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಜನರು ಇಲ್ಲಿಂದ ಕದಲಲಿಲ್ಲ. ಊಟದ ಸಮಯ ಬಂದರೂ ವಿಷಮುಕ್ತ ಕೃಷಿ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದು ವಿಶೇಷ ಎನಿಸಿತು.

ಕೃಷಿ ಮೇಳದಲ್ಲಿ ಸಿರಿಧಾನ್ಯಗಳು ಹಾಗೂ ವಿದೇಶಿ ಸೂಪರ್ ಫುಡ್ ಬೆಳೆಗಳಾದ ಚಿಯಾ, ಕ್ವಿನೊವಾ ಹಾಗೂ ಟೆಫ್ ಬೆಳೆಗಳ ಪ್ರಾತ್ಯಕ್ಷಿಕೆ ಹಲವರನ್ನು ಸೆಳೆಯಿತು. 150 ಬೆಳೆಗಳು ಹಾಗೂ ವಿವಿಧ ತಳಿಗಳ ತಾಂತ್ರಿಕ ಮಾಹಿತಿಗಳನ್ನು ರೈತರು ಪಡೆದುಕೊಂಡರು.

ಹಸು, ಕುರಿ, ಮೇಕೆ ಹಾಗೂ ಕೋಳಿಗಳ ದೇಸಿ ಹಾಗೂ ಸುಧಾರಿತ ತಳಿಗಳ ಪ್ರದರ್ಶನ, ವಿವಿಧ ಜಾತಿಯ ಮೀನು ತಳಿಗಳ ಮಾಹಿತಿ ಮನಸೂರೆಗೊಂಡಿತು. ನೂರಕ್ಕೂ ಅಧಿಕ ಮಳಿಗೆಗಳಲ್ಲಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಇತ್ತು.

ಗೃಹೋಪಯೋಗಿ ವಸ್ತುಗಳ ಮಳಿಗೆಗಳ ಮುಂದೆ ಜನಜಾತ್ರೆ‌‌

ಜನರು ಹೆಚ್ಚಾಗಿ ಗೃಹೋಪಯೋಗಿ ವಸ್ತುಗಳ ಮಳಿಗೆಗಳಲ್ಲಿ ಖರೀದಿ ಭರಾಟೆಯಲ್ಲಿ ತೊಡಗಿದ್ದರು. ಒನಕೆ, ರಾಗಿಕಲ್ಲು, ಸೇರಿದಂತೆ ಅಪರೂಪ ಎನಿಸುವ ಹಳೆಯ ವಸ್ತುಗಳ ಮಾರಾಟವೂ ಇತ್ತು.

ಚೈನಾ ಆಟಿಕೆಗಳ ಅಂಗಡಿಗಳು ಹೆಚ್ಚಾಗಿದ್ದವು. ಮಕ್ಕಳು ಈ ಆಟಿಕೆಗಳತ್ತ ಆಕರ್ಷಿತರಾಗಿದ್ದರು. ಇದರ ಜತೆಗೆ, ಮಕ್ಕಳಿಗೆಂದೇ ನಿರ್ಮಾಣವಾಗಿದ್ದ ‘ಮಿನಿ ಅಮ್ಯೂಸ್‌ಮೆಂಟ್ ಪಾರ್ಕ್‌’ ಸೂಜಿಗಲ್ಲಿನಂತೆ ಸೆಳೆಯಿತು. ವಿವಿಧ ಬಗೆಯ ಆಟೋಟಗಳಲ್ಲಿ ಅವರು ಭಾಗವಹಿಸಿದರು.

ಸಂಜೆ ವೇಳೆಗೆ ನಡೆದ ಮಹದೇಶ್ವರ ಕೊಂಡೋತ್ಸವದಲ್ಲಿ ನೂರಾರು ಮಂದಿ ಭಾಗಿಯಾದರು. ಲಿಂಗಧೀರರು, ಹರಕೆ ಹೊತ್ತವರು ನಿಗಿನಿಗಿ ಕೆಂಡವನ್ನು ಬರಿಗಾಲಿನಲ್ಲಿ ಹಾಯುವ ಸೇರಿದ್ದ ಜನರನ್ನು ಚಕಿತಗೊಳಿಸಿದರು.

ರಾತ್ರಿ ಮಹದೇಶ್ವರರ ಮುತ್ತಿನ ಪಲ್ಲಕ್ಕಿ ಉತ್ಸವ, ಗುರುಬ್ರಹ್ಮೋತ್ಸವ ಹಾಗೂ ಜಂಗಮೋತ್ಸವಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT