ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಚಾಮರಾಜ ಒಡೆಯರ್‌ ಜನ್ಮಶತಮಾನೋತ್ಸವ: ಜು.18ರಂದು ಉದ್ಘಾಟನೆ

Last Updated 28 ಜೂನ್ 2019, 11:36 IST
ಅಕ್ಷರ ಗಾತ್ರ

ಮೈಸೂರು: ಜಯಚಾಮರಾಜ ಒಡೆಯರ್‌ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಮೈಸೂರು ರಾಜವಂಶಸ್ಥರು ನಿರ್ಧರಿಸಿದ್ದು, ಸಕಲ ಸಿದ್ಧತೆ ನಡೆಸಿದ್ದಾರೆ.

ಜನ್ಮಶತಮಾನೋತ್ಸವ ಕಾರ್ಯಕ್ರಮಗಳಿಗೆ ಜು.18 ರಂದು ಚಾಲನೆ ಲಭಿಸಲಿದೆ. ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಅರಮನೆಯ ದರ್ಬಾರ್‌ ಹಾಲ್‌ನಲ್ಲಿ ಸಮಾರಂಭ ನಡೆಯಲಿದ್ದು, 18 ರಂದು ಬೆಳಿಗ್ಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಉದ್ಘಾಟಿಸಲಿದ್ದಾರೆ. ಬೆಂಗಳೂರಿನಲ್ಲೂ ಜು.20 ರಂದು ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಯಚಾಮರಾಜ ಒಡೆಯರ್‌ 1919ರ ಜುಲೈ 18 ರಂದು ಜನಿಸಿದ್ದರು. 1974ರ ಸೆಪ್ಟೆಂಬರ್‌ 23 ರಂದು ಅವರು ನಿಧನರಾಗಿದ್ದರು.

ಸರ್ಕಾರ ಸ್ಪಂದಿಸುತ್ತಿಲ್ಲ: ರಾಜವಂಶಸ್ಥರಿಗೆ ಸೇರಿದ ಜಾಗಗಳಿಗೆ ಸಂಬಂಧಿಸಿದ ವ್ಯಾಜ್ಯ ಬಗೆಹರಿಸಲು ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಪ್ರಮೋದಾದೇವಿ ಅಸಮಾಧಾನ ವ್ಯಕ್ತಪಡಿಸಿದರು.

‘ಮೈಸೂರಿನ ದೊಡ್ಡಕೆರೆ ಮೈದಾನದ ಜಾಗ ಅರಮನೆಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿ ಎಂಟು ವರ್ಷಗಳೇ ಕಳೆದಿವೆ. ಆದರೆ ಸರ್ಕಾರ ಇನ್ನೂ ಖಾತೆ ಮಾಡಿಸಿಕೊಟ್ಟಿಲ್ಲ. ಇದು ನ್ಯಾಯಾಲಯದ ತೀರ್ಪಿನ ಉಲ್ಲಂಘನೆಯಾಗಿದೆ’ ಎಂದರು.

ಈ ಹಿಂದೆ ಅಧಿಕಾರದಲ್ಲಿದ್ದವರು ಒಂದು ರೀತಿಯಲ್ಲಿ ತೊಂದರೆ ಕೊಟ್ಟರು. ಈಗ ಇರುವವರಿಂದಲೂ ತೊಂದರೆ ಆಗುತ್ತಿದೆ. ಹೊಸ ರಾಜಕಾರಣಿಗಳು ಬರುತ್ತಾರೆ. ಅವರಿಗೆ ಹಳೆಯ ವಿಷಯಗಳು ಗೊತ್ತಿರುವುದಿಲ್ಲ. ಯಾರಿಂದಲೋ ಸಲಹೆಗಳನ್ನು ಪಡೆಯುತ್ತಾರೆ ಎಂದು ತಿಳಿಸಿದರು.

‘ನಾನು ರಾಜಕೀಯವನ್ನು ಚೆನ್ನಾಗಿ ಆರ್ಥ ಮಾಡಿಕೊಳ್ಳಬಲ್ಲೆ. ಆದರೆ ರಾಜಕೀಯ ಮಾಡಲು ಬರುವುದಿಲ್ಲ. ಆದ್ದರಿಂದ ರಾಜಕೀಯಕ್ಕೆ ಸೇರುವುದಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT