ಜೆಡಿಎಸ್–ಕಾಂಗ್ರೆಸ್‌ ನಾಯಕರ ಒಗ್ಗಟ್ಟು ಪ್ರದರ್ಶನ

ಬುಧವಾರ, ಏಪ್ರಿಲ್ 24, 2019
32 °C

ಜೆಡಿಎಸ್–ಕಾಂಗ್ರೆಸ್‌ ನಾಯಕರ ಒಗ್ಗಟ್ಟು ಪ್ರದರ್ಶನ

Published:
Updated:

ಮೈಸೂರು: ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಇಲ್ಲಿ ಭಾನುವಾರ ಒಗ್ಗಟ್ಟು ಪ್ರದರ್ಶಿಸುವ ಮೂಲಕ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ಒಕ್ಕೊರಲಿನಿಂದ ನುಡಿದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಶಾಸಕರಾದ ತನ್ವೀರ್‌ಸೇಠ್, ಯತೀಂದ್ರ ಸಿದ್ದರಾಮಯ್ಯ, ಅಶ್ವಿನ್‌ಕುಮಾರ್, ಅನಿಲ್‌ಚಿಕ್ಕಮಾದು, ಮಹದೇವ್, ವಿಧಾನಪರಿಷತ್ ಸದಸ್ಯರಾದ ಧರ್ಮಸೇನ, ಮರಿತಿಬ್ಬೇಗೌಡ, ಕಾಂಗ್ರೆಸ್‌ ಮುಖಂಡರಾದ ಡಾ.ಎಚ್.ಸಿ.ಮಹದೇವಪ್ಪ, ಎಂ.ಕೆ.ಸೋಮಶೇಖರ್, ಜೆಡಿಎಸ್ ಮುಖಂಡ ಪ್ರೊ.ಕೆ.ಎಸ್.ರಂಗಪ್ಪ ಸೇರಿದಂತೆ ಹಲವು ಮುಖಂಡರು ಜತೆಯಾಗಿ ಪತ್ರಿಕಾಗೋಷ್ಠಿ ನಡೆಸಿದರು.

‌‘ನಾಳೆಯಿಂದಲೇ ಜಂಟಿಯಾಗಿ ಪ್ರಚಾರ ಕಾರ್ಯ ಆರಂಭಿಸುತ್ತೇವೆ. ಬೂತ್‌ಮಟ್ಟದ ಕಾರ್ಯಕರ್ತರಲ್ಲಿರುವ ಗೊಂದಲವನ್ನು ಪರಿಹರಿಸುತ್ತೇವೆ’ ಎಂದು ಎಚ್.ವಿಶ್ವನಾಥ್ ಹೇಳಿದರು.‌

ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ:

ಸಚಿವ ಸಾ.ರಾ.ಮಹೇಶ್ ಮಾತನಾಡಿ, ‘ಎರಡೂ ಪಕ್ಷದ ಕಾರ್ಯಕರ್ತರ ಮನಸ್ಸುಗಳನ್ನು ಒಂದು ಮಾಡುವುದು ಕಷ್ಟ. ಆದರೆ, ಮೈತ್ರಿ ಧರ್ಮದ ಪಾಲನೆ ಸದ್ಯದ ಸಂದರ್ಭದಲ್ಲಿ ಅನಿವಾರ್ಯವೂ ಆಗಿದೆ. ಹೀಗಾಗಿ, ಮೈತ್ರಿಧರ್ಮದ ವಿರುದ್ಧ ಕೆಲಸ ಮಾಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ. ಕಾಂಗ್ರೆಸ್ ಸಹ ಇದೇ ರೀತಿ ಶಿಸ್ತು ಕ್ರಮಕ್ಕೆ ಮುಂದಾಗಬೇಕು’ ಎಂದು ಹೇಳಿದರು.

13ರಂದು ಕೆ.ಆರ್.ನಗರಕ್ಕೆ ರಾಹುಲ್ ಗಾಂಧಿ

ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏ‍ಪ್ರಿಲ್ 13ರಂದು ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನ 12ರಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಜಂಟಿಯಾಗಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ 2 ಕಡೆ ಸಮಾವೇಶ ನಡೆಸುವರು ಎಂದು ಮಾಹಿತಿ ನೀಡಿದರು.

‘ಗರಂ’ ಆಗಿಯೇ ಇದ್ದ ಜಿ.ಟಿ.ದೇವೇಗೌಡ:

ಜಂಟಿ ಪತ್ರಿಕಾಗೋಷ್ಠಿಗೂ ಮುನ್ನ ಸಚಿವ ಜಿ.ಟಿ.ದೇವೇಗೌಡ ಕೋಪದಿಂದ ಕಾರ್ಯಕರ್ತರ ಮೇಲೆ ಕೂಗಾಡಿದರು. ನಂತರ, ಮಾತನಾಡಿದ ಅವರು ಕಾರ್ಯಕರ್ತರು ಶಿಸ್ತು ಕಲಿಯಲಿ ಎಂದು ರೇಗುತ್ತೇನೆ. ಯಾವುದೇ ಪಕ್ಷಕ್ಕೂ ಶಿಸ್ತು ಮುಖ್ಯ ಎಂದು ಸಮಜಾಯಿಷಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !