ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023ಕ್ಕೆ ಅಧಿಕಾರ ಹಿಡಿಯಲಿದೆ ಜೆಡಿಎಸ್‌– ಎಚ್.ಡಿ.ದೇವೇಗೌಡ ವಿಶ್ವಾಸ

ಸಾಲಿಗ್ರಾಮ ತಾಲ್ಲೂಕು ಆಡಳಿತ ಕಚೇರಿ ಉದ್ಘಾಟನೆ
Last Updated 15 ಜನವರಿ 2022, 6:20 IST
ಅಕ್ಷರ ಗಾತ್ರ

ಸಾಲಿಗ್ರಾಮ: ಹೊಸ ತಾಲ್ಲೂಕು ರಚನೆಗೊಂಡ ಬಳಿಕ ಸಾಲಿಗ್ರಾಮ ಪಟ್ಟಣದಲ್ಲಿ ನಿರ್ಮಿಸಿರುವ ತಾಲ್ಲೂಕು ಆಡಳಿತ ಕಚೇರಿಯನ್ನು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಶುಕ್ರವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಾ.ರಾ.ಮಹೇಶ್ ಅವರು ಸಾಲಿಗ್ರಾಮವನ್ನು ಹೊಸ ತಾಲ್ಲೂಕು ಕೇಂದ್ರ ಮಾಡಲು ಬಹಳ ಶ್ರಮಿಸಿದ್ದರು. ಅದರ ಫಲವೇ ಇಂದು ತಾಲ್ಲೂಕು ಕಚೇರಿ ಉದ್ಘಾಟನೆಗೊಂಡಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಳಿದ ಸರ್ಕಾರಿ ಕಚೇರಿಗಳು ಪ್ರಾರಂಭಗೊಳ್ಳುತ್ತವೆ. ಇದರಿಂದ ತಾಲ್ಲೂಕಿನ ಗಡಿ ಭಾಗದ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಹೊಸ ತಾಲ್ಲೂಕು ರಚನೆಯಿಂದ ಈ ಭಾಗದ ಜನರ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ’ ಎಂದು ಹರ್ಷ ವ್ಯಕ್ತಪಡಿಸಿದರು.

‘ಸಂಕ್ರಾಂತಿ ದಿನ ಹನುಮಂತನಿಗೆ ವಿಶೇಷ ಪೂಜೆಯನ್ನು ಮಾಡಿಸಿ ಸಂಕಲ್ಪ ಮಾಡಿರುವೆ. ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವ ತನಕ ನಾನು ವಿಶ್ರಾಂತಿ ಪಡೆಯುವುದಿಲ್ಲ. ರಾಜ್ಯದಲ್ಲಿ 2023ಕ್ಕೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾ.ರಾ.ಮಹೇಶ್‌ ಕೈ ಬಲಪಡಿಸಿ: ‘ಅಭಿವೃದ್ಧಿ ವಿಚಾರದಲ್ಲಿ ಶಾಸಕ ಸಾ.ರಾ.ಮಹೇಶ್ ಬೇರೆ ಶಾಸಕರಿಗೆ ಮಾದರಿಯಾಗಿದ್ದಾರೆ. ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಹಗಲಿರುಳು ಶ್ರಮಿಸುತ್ತಿರುವ ಸಾ.ರಾ.ಮಹೇಶ್ ಅವರ ಕೈ ಬಲಪಡಿಸಬೇಕು. ಜನರ ಸೇವೆ ಮಾಡುವ ಜನಪ್ರತಿನಿಧಿಗಳಿಗೆ ಎಲ್ಲರೂ ಶಕ್ತಿ ತುಂಬಬೇಕು’ ಎಂದು ಮನವಿ ಮಾಡಿದರು.

ಶಾಸಕ ಸಾ.ರಾ.ಮಹೇಶ್ ಮಾತನಾಡಿ, ‘ನಾನು ರಾಜಕೀಯಕ್ಕೆ ಬಂದು ಅಧಿಕಾರ ಪಡೆದಿರುವುದು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಆಶೀರ್ವಾದದಿಂದ. ನಾನು ಇರುವ ತನಕ ಜೆಡಿಎಸ್ ಪಕ್ಷದ ಸಂಘಟನೆಗೆ ಹಾಗೂ ಕ್ಷೇತ್ರದ ಜನರ ಸೇವೆಗೆ ಶ್ರಮಿಸುತ್ತೇನೆ’ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್‌. ಮಂಜೇಗೌಡ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ, ಚಿಕ್ಕನಾಯಕನಹಳ್ಳಿ ವಾಸು, ಗೋಪಾಲ, ಎಂ.ಟಿ.ಕುಮಾರ್, ಮಾಜಿ ಮೇಯರ್ ಚಿನ್ನಿರವಿ, ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಎಸ್.ಆರ್. ರಾಮೇಗೌಡ, ಸಾಲಿಗ್ರಾಮ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಪ್ರೇಮಕುಮಾರ್‌ ಜೈನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಿಕಾ, ಉಪಾಧ್ಯಕ್ಷೆ ಸುಧಾ ರೇವಣ್ಣ, ತಹಶೀಲ್ದಾರ್ ಸಂತೋಷ್, ಪಿಡಿಒ ಮಂಜುನಾಥ್, ಗೇಟಿ ಪ್ರಕಾಶ್ ಇದ್ದರು.

‘ರಸ್ತೆಯಲ್ಲಿ ನಗಾರಿ ಬಾರಿಸಿದರೆ ನ್ಯಾಯ ಸಿಗುವುದಿಲ್ಲ’

‘ಮೇಕೆದಾಟು ಯೋಜನೆಗೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವಾಗ ಕಾಂಗ್ರೆಸ್ ನಾಯಕರು ರಾಜಕೀಯ ಲಾಭ ಪಡೆದುಕೊಳ್ಳಲು ಬೀದಿಗಿಳಿದು ನಗಾರಿ ಬಾರಿಸಿದರೆ ತೀರ್ಪು ನಮ್ಮ ಪರವಾಗುತ್ತದೆಯೇ’ ಎಂದು ಎಚ್.ಡಿ.ದೇವೇಗೌಡ ಪ್ರಶ್ನಿಸಿದರು.

‘ಅಂತರ ರಾಜ್ಯ ನದಿ ನೀರಿನ ವಿಚಾರದಲ್ಲಿ ರಸ್ತೆಯಲ್ಲಿ ನಿಂತು ಹೋರಾಟ ಮಾಡಿದರೆ ಪ್ರಯೋಜನವಿಲ್ಲ. ಸಮಸ್ಯೆ ಕೂಡ ಬಗೆಹರಿಯುವುದಿಲ್ಲ. ಮೇಕೆದಾಟು ಪಾದಯಾತ್ರೆಯನ್ನು ತಡೆಗಟ್ಟಲು ಬಿಜೆಪಿ ನೇತೃತ್ವದ ಸರ್ಕಾರ ವಿಫಲವಾಗಿದ್ದರಿಂದ ಕೋರ್ಟ್‌ ಮಧ್ಯ ಪ್ರವೇಶ ಮಾಡಬೇಕಾಯಿತು. ಪಾದಯಾತ್ರೆ ಮಾಡುವುದು ಅಥವಾ ನಿಲ್ಲಿಸುವುದು ಮುಖ್ಯವಲ್ಲ. ಬದಲಿಗೆ ರಾಜ್ಯದ ಜನತೆಗೆ ನ್ಯಾಯ ಕೊಡಿಸುವುದು ಮುಖ್ಯ’ ಎಂದು ಹೇಳಿದರು.

‘ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದಾಗ ಮಾಡಿರುವ ಕರ್ಮಗಳ ಬಗ್ಗೆ ನಾನು ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಆದರೆ, 1962ರಲ್ಲಿ ಕಾವೇರಿ ವಿವಾದದ ಬಗ್ಗೆ ಹೋರಾಟ ಮಾಡಿದ ಮೊದಲ ರಾಜಕಾರಣಿ ಎಚ್.ಎಂ.ಚನ್ನಬಸಪ್ಪ. ನಂತರದ ದಿನಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಸೋತರು. ನಾನು ಗೆದ್ದು ವಿಧಾನಸಭೆ ಪ್ರವೇಶಿಸಿದ್ದೆ. ನಾನು ಎಂದೂ ಕಾವೇರಿ ಬಗ್ಗೆ ಹೋರಾಟ ಮಾಡಿಲ್ಲ’ ಎಂದು ತಿಳಿಸಿದರು.

***

ಕೋವಿಡ್ ಪ್ರಕರಣ ಹೆಚ್ಚುತ್ತಿರುವಾಗ ಸಾಲಿಗ್ರಾಮ ದಲ್ಲಿ ಅಧಿಕ ಜನರನ್ನು ಸೇರಿಸಿಕೊಂಡು ಕಾರ್ಯಕ್ರಮ ಮಾಡಿರುವೆ. ಮುಖ್ಯಮಂತ್ರಿಗೆ ಕ್ಷಮೆ ಕೋರುತ್ತೇನೆ.

–ಎಚ್.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT