ಶನಿವಾರ, ಸೆಪ್ಟೆಂಬರ್ 18, 2021
30 °C
ಮೈತ್ರಿ ನಾಯಕರ ಕಾಲೆಳೆದ ಕಮಲ ಪಡೆ

ಬಿಜೆಪಿಗೆ ಮತ: ಜಿಟಿಡಿ ಹೇಳಿಕೆ ಚರ್ಚೆಗೆ ಗ್ರಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು/ ಮೈಸೂರು: ‘ಮೈಸೂರು ಕ್ಷೇತ್ರದ ಕೆಲವು ಕಡೆಗಳಲ್ಲಿ ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿದ್ದಾರೆ’ ಎಂಬ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯವನ್ನು ಮುಂದಿಟ್ಟುಕೊಂಡು ಕಮಲ ಪಡೆ ಮೈತ್ರಿ ನಾಯಕರ ಕಾಲೆಳೆದಿದೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ‘ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ನಾನು ಪ್ರತಿನಿಧಿಸುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉದ್ಬೂರು ಒಳಗೊಂಡಂತೆ ಕೆಲವೆಡೆ ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿದ್ದಾರೆ’ ಎಂದರು.

‘ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಸ್ಥಳೀಯ ಮಟ್ಟದಲ್ಲಿ ಇರುವ ಜಿದ್ದಾಜಿದ್ದಿ ಲೋಕಸಭಾ ಚುನಾವಣೆಯಲ್ಲೂ ಮುಂದುವರಿದಿದೆ. ಮೈತ್ರಿ ವಿಚಾರದಲ್ಲಿ ಎರಡೂ ಪಕ್ಷಗಳಿಂದ ತಪ್ಪಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣೆ ಎದುರಿಸಿದ್ದರೆ, ಬಿಜೆಪಿಗೆ ಐದಕ್ಕಿಂತ ಹೆಚ್ಚು ಸ್ಥಾನ ಸಿಗುತ್ತಿರಲಿಲ್ಲ’ ಎಂದು ಅವರು ಪ್ರತಿಪಾದಿಸಿದರು.

‘ಯಾವ ಕ್ಷೇತ್ರಕ್ಕೆ ಯಾವ ಪಕ್ಷದ ಅಭ್ಯರ್ಥಿಯನ್ನು ಹಾಕಬೇಕು ಎಂಬ ಚರ್ಚೆ ಹಲವು ದಿನ ನಡೆಯಿತು. ಎರಡೂ ಪಕ್ಷಗಳ ಮುಖಂಡರಿಗೆ ಹೊಂದಾಣಿಕೆ ಸಾಧಿಸಲು ಬಹಳ ಸಮಯ ತೆಗೆದುಕೊಂಡಿತು. ತಳಮಟ್ಟದ ಕಾರ್ಯಕರ್ತರನ್ನು ಸಂಪೂರ್ಣವಾಗಿ ಜತೆಯಾಗಿಸಲು ಯಾರಿಗೂ ಆಗಿಲ್ಲ. ಲೋಕಸಭೆ ಚುನಾವಣೆಗೆ ಎರಡು ತಿಂಗಳು ಇರುವಾಗಲೇ ಈ ಕೆಲಸ ಮಾಡಿದ್ದರೆ ಹೆಚ್ಚು ಅನುಕೂಲ ಆಗುತಿತ್ತು’ ಎಂದು ಅಭಿಪ್ರಾಯಪಟ್ಟರು.

‘ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸರ್ಕಾರ ಸುಭದ್ರವಾಗಿದೆ’ ಎಂದು ಅವರು ಹೇಳಿದರು.

ಕೆ‍ಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯಿಸಿ, ‘ಜಿ.ಟಿ ದೇವೇಗೌಡ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಮೈತ್ರಿ ಮಾಡಿಕೊಳ್ಳುವಾಗ ತಡವೇನೂ ಆಗಿರಲಿಲ್ಲ. ಅಂದರೆ ಯಾವ ರೀತಿ ಅವರು ಕೆಲಸ ಮಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ’ ಎಂದರು.

‘ನಾನು ಕಾಂಗ್ರೆಸ್ ವಕ್ತಾರನಲ್ಲ. ಕೇವಲ ಕಾರ್ಯಕರ್ತ ಹಾಗೂ ಸಚಿವ. ನನ್ನ ವಿಷಯಕ್ಕೆ ಮಾತ್ರ ಪ್ರತಿಕ್ರಿಯೆ ನೀಡಬಲ್ಲೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು. ‘ಪ್ರತಿಯೊಬ್ಬರೂ ಮೈತ್ರಿ ಧರ್ಮ ಪಾಲನೆ ಮಾಡಲೇಬೇಕು. ನಾವಂತೂ ಪಾಲನೆ ಮಾಡಿದ್ದೇವೆ. ಅವರೂ ಪಾಲಿಸಿದ್ದಾರೆ ಎಂಬ ವಿಶ್ವಾಸವಿದೆ’ ಎಂದರು.

ಕಾಂಗ್ರೆಸ್‌ ನಾಯಕರಿಂದಲೂ ನೆರವು: ಬಿಜೆಪಿ
‘ಜಿ.ಟಿ. ದೇವೇಗೌಡರು ಸತ್ಯ ಹೇಳಿದ್ದಾರೆ. ಈ ಸಲ ಜಾತಿ, ಪಕ್ಷ ಹಾಗೂ ಹಣ ಮೀರಿ ಚುನಾವಣೆ ನಡೆದಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯಿಸಿದರು.

‘ಮಂಡ್ಯದಲ್ಲಿ ಕಾಂಗ್ರೆಸ್‌ ನಾಯಕರು ಬಹಿರಂಗವಾಗಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ. ಹಾಸನದಲ್ಲಿ ಸಹ ಬೆಂಬಲ ಸಿಕ್ಕಿದೆ. ತುಮಕೂರಿನಲ್ಲಿ ಕೂಡ ಕೆಲವರು ಒಳಗೊಳಗೆ ಹಾಗೂ ಕೆಲವರು ಬಾಹ್ಯವಾಗಿ ಬೆಂಬಲ ಕೊಟ್ಟಿದ್ದಾರೆ. ಸಚಿವರು ಅಲ್ಲದೆ, ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕರು ಕೂಡ ಕೆಲವು ಕ್ಷೇತ್ರದಲ್ಲಿ ಸಹಾಯ ಮಾಡಿದ್ದಾರೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ದೇಶ ಕಟ್ಟಲು ಅವರೆಲ್ಲ ಸಹಾಯ ಮಾಡಿದ್ದಾರೆ ಎಂದು ಭಾವಿಸಬೇಕು. ನಮಗೆ ಸಣ್ಣ ರಾಜಕೀಯ ಗೊತ್ತಿಲ್ಲ. ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲು ನೆರವು ನೀಡಿದ್ದಾರೆ’ ಎಂದರು.

*
ಜೆಡಿಎಸ್‌ ಕಾರ್ಯಕರ್ತರು ಮಾತ್ರವಲ್ಲ ಕಾಂಗ್ರೆಸ್‌ ಕಾರ್ಯಕರ್ತರು ಸಹ ನನಗೆ ಮತ ಹಾಕಿದ್ದಾರೆ. ಇದರಿಂದಾಗಿ ನಮ್ಮ ಪಕ್ಷ ಮೈಸೂರಿನಲ್ಲಿ ಗೆಲುವು ಸಾಧಿಸಲಿದೆ. 
-ಪ್ರತಾಪಸಿಂಹ, ಬಿಜೆಪಿ ಅಭ್ಯರ್ಥಿ 

*
ಕೆಲ ಗ್ರಾಮಗಳಲ್ಲಿ ವ್ಯತ್ಯಾಸ ಉಂಟಾಗಿರಬಹುದು. ಫಲಿತಾಂಶದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಸಮಯಾವಕಾಶ ಸಿಕ್ಕಿದ್ದರೆ ಅವರನ್ನೂ ವಿಶ್ವಾಸಕ್ಕೆ ಪಡೆಯಬಹುದಿತ್ತು.
-ಸಿ.ಎಚ್‌.ವಿಜಯಶಂಕರ್‌, ಕಾಂಗ್ರೆಸ್ ಅಭ್ಯರ್ಥಿ.

*
ಅವರ ಮಾತಿನಲ್ಲೇ ದ್ವಂದ್ವ ವ್ಯಕ್ತವಾಗಿದೆ. ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿಲ್ಲ ಅಂತ ಕಾಣಿಸುತ್ತಿದೆ. ಮೈತ್ರಿ ಸರ್ಕಾರದಲ್ಲಿ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ.
-ದಿನೇಶ್ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು