ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ತಂತ್ರಾಂಶ ವರದಿ ಪರಿಷ್ಕಾರಕ್ಕೆ ಕರೆ

ಗಳಗನಾಥ ಮತ್ತು ನಾ.ಶ್ರೀ.ರಾಜಪುರೋಹಿತ ಸಂಶೋಧಕ ಪ್ರಶಸ್ತಿ ಪ್ರದಾನ
Last Updated 27 ಆಗಸ್ಟ್ 2019, 8:56 IST
ಅಕ್ಷರ ಗಾತ್ರ

ಮೈಸೂರು: ಕನ್ನಡ ತಂತ್ರಾಂಶ ಸಲಹಾ ಸಮಿತಿಯ ವರದಿ ಸಮಗ್ರವಾಗಿ ಅನುಷ್ಠಾನಗೊಳ್ಳಬೇಕು ಹಾಗೂ ಅದು ಹೊಸ ಕಾಲಕ್ಕೆ ತಕ್ಕಂತೆ ಪರಿಷ್ಕಾರಗೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ ತಿಳಿಸಿದರು.‌

ಗಳಗನಾಥ ಮತ್ತು ನಾ.ಶ್ರೀ.ರಾಜಪುರೋಹಿತ ಪ್ರತಿಷ್ಠಾನ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಇಲ್ಲಿ ಸೋಮವಾರ ನಡೆದ ಗಳಗನಾಥ ಮತ್ತು ನಾ.ಶ್ರೀ.ರಾಜಪುರೋಹಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಅವರ ನೇತೃತ್ವದ ಸಮಿತಿ 2010ರಲ್ಲೇ ಅತ್ಯುತ್ತಮ ವರದಿ ನೀಡಿದೆ. ಅದರಲ್ಲಿ ಶೇ 50ರಷ್ಟು ಅನುಷ್ಠಾನವಾಗಿದೆ. ಉಳಿದದ್ದು ಜಾರಿಗೊಳ್ಳಬೇಕಿದೆ. ಈ ವರದಿ ಇನ್ನಷ್ಟು ಪರಿಷ್ಕಾರಗೊಂಡು ಜಾರಿಯಾದರೆ ಖಂಡಿತ ತಂತ್ರಾಂಶದಲ್ಲಿ ಕನ್ನಡ ಗಟ್ಟಿಯಾಗುತ್ತದೆ ಎಂದರು.

‌ಯೂನಿಕೋಡ್‌ ಶಿಷ್ಟತೆ, ಇದರಲ್ಲಿ ಫಾಂಟ್‌ಗಳ ಸಮಸ್ಯೆ ಕುರಿತು ಇನ್ನಷ್ಟು ಸಂಶೋಧನೆಗಳು ಆಗಬೇಕಿದೆ. ಮೈಸೂರು ವಿಶ್ವವಿದ್ಯಾನಿಲಯ ಈ ನಿಟ್ಟಿನಲ್ಲಿ ಮುಂದಾಳತ್ವ ವಹಿಸಿಕೊಂಡು ಅಡಿ ಇಟ್ಟರೆ, ಖಂಡಿತ ಹೊಸ ಕಾಲದಲ್ಲಿ ಕನ್ನಡ ಬದುಕುತ್ತದೆ ಎಂದು ಅಭಿಪ್ರಾಯಪಟ್ಟರು.

ಗಳಗನಾಥರು ಬದುಕಿದ್ದಾಗ ಮರಾಠಿ ಮತ್ತು ತಮಿಳಿನಿಂದ ಕನ್ನಡಕ್ಕೆ ಅಪಾಯ ಇತ್ತು. ಆದರೆ, ಈಗ ಆಂಗ್ಲ ಭಾಷೆಯಿಂದ ದೊಡ್ಡ ಗಂಡಾಂತರವೇ ಇದೆ. ಹಾಗಾಗಿ, ಗಳನಾಥರು ಮಾಡಿದ ಅಂದಿನ ಕಾರ್ಯ ಇಂದಿಗೂ ಪ್ರಸ್ತುತ ಎನಿಸಿದೆ ಎಂದರು.

ಸಾಹಿತಿ ಡಾ.ಬಿ.ಎಲ್.ವೇಣು ಅವರಿಗೆ 2018ರ ‘ಕಾದಂಬರಿ ಪಿತಾಮಹಾ ಗಳಗನಾಥ’ ಪ್ರಶಸ್ತಿ ಹಾಗೂ ಸಂಶೋಧಕ ಡಾ.ಎ.ವಿ.ನರಸಿಂಹಮೂರ್ತಿ ಅವರಿಗೆ ‘ನಾ.ಶ್ರೀ.ರಾಜಪುರೋಹಿತ ಸಂಶೋಧಕ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹ 50 ಸಾವಿರ ಚೆಕ್, ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ಒಳಗೊಂಡಿದೆ.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಕೃತ ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅವರು ಗಳಗನಾಥ ಅವರನ್ನು ಕುರಿತು ಹಾಗೂ ಸಾಹಿತಿ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ನಾ.ಶ್ರೀ. ರಾಜಪುರೋಹಿತ ಅವರನ್ನು ಕುರಿತು ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎನ್.ಎಂ.ತಳವಾರ, ಇತಿಹಾಸ ತಜ್ಞ ಡಾ.ಎನ್.ಎಸ್.ರಂಗರಾಜು, ಕನ್ನಡ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT