ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕುಗಳಲ್ಲಿ ಕನ್ನಡ ಜಾರಿಯಾಗಲಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್‌.ಜಿ.ಸಿದ್ಧರಾಮಯ್ಯ ಒತ್ತಾಯ
Last Updated 17 ಡಿಸೆಂಬರ್ 2018, 15:50 IST
ಅಕ್ಷರ ಗಾತ್ರ

ಮೈಸೂರು: ಬ್ಯಾಂಕುಗಳಲ್ಲಿ ಸಮರ್ಪಕ ರೀತಿಯಲ್ಲಿ ಕನ್ನಡದ ಜಾರಿಯಾಗಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್‌.ಜಿ.ಸಿದ್ಧರಾಮಯ್ಯ ಒತ್ತಾಯಿಸಿದರು.

ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕನ್ನಡ ಸಹೃದಯ ಬಳಗವು ಸೋಮವಾರ ಹಮ್ಮಿಕೊಂಡಿದ್ದ ‘ಕನ್ನಡ ಹಬ್ಬ 2018’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಭಾರತದ ಸಂವಿಧಾನದ ಪ್ರಕಾರ ತ್ರಿಭಾಷಾ ಸೂತ್ರ ಎಲ್ಲೆಡೆ ಪಾಲನೆಯಾಗಬೇಕು. ಆದರೆ, ಬ್ಯಾಂಕುಗಳಲ್ಲಿ ದ್ವಿಭಾಷಾ ಪಾಲನೆಯಷ್ಟೇ ಆಗುತ್ತಿದೆ. ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಗಳಷ್ಟೇ ಬಳಕೆಯಲ್ಲಿವೆ. ಈ ಜಾಗದಲ್ಲಿ ಕನ್ನಡವೂ ಸೇರಬೇಕು. ಬ್ಯಾಂಕುಗಳ ಚಲನ್ ಇತ್ಯಾದಿ ಅರ್ಜಿಗಳಲ್ಲಿ ಕನ್ನಡವೂ ಇರಬೇಕು ಎಂದು ಅವರು ಒತ್ತಾಯಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲಿನ ಬ್ಯಾಂಕುಗಳಲ್ಲಿ ಸಮಸ್ಯೆ ಹೆಚ್ಚಿದೆ. ಬ್ಯಾಂಕುಗಳಲ್ಲಿ ಕನ್ನಡ ಬಾರದ ಸಿಬ್ಬಂದಿ ಇದ್ದಾರೆ. ಹಳ್ಳಿಗಾಡುಗಳಲ್ಲಿ ಕನ್ನಡ ಬಿಟ್ಟು ಬೇರಾವ ಭಾಷೆಯೂ ಬಾರದ ಸ್ಥಿತಿ ಇರುತ್ತದೆ. ಹಾಗಾಗಿ, ಕನ್ನಡವನ್ನೇ ಬಳಸಬೇಕು. ಪರಭಾಷಾ ಸಿಬ್ಬಂದಿ ಕನ್ನಡ ಕಲಿತುಕೊಳ್ಳಬೇಕು ಎಂದು ಮನವಿ ಮಾಡಿದರು.

ಕೇಂದ್ರಾಡಳಿತ ಸಂಸ್ಥೆಗಳಲ್ಲಿ ತ್ರಿಭಾಷಾ ಸೂತ್ರ ಬಳಕೆಯಲ್ಲಿದೆ. ರಾಜ್ಯ ಸರ್ಕಾರದ ಸಂಸ್ಥೆಗಳಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಬಳಕೆಯಲ್ಲಿ. ಇಂಗ್ಲಿಷ್ ಸಹ ಬಳಕೆಯಾಗುತ್ತಿದೆ. ಸಿಎಫ್‌ಟಿಆರ್‌ಐ, ಡಿಎಫ್‌ಆರ್‌ಎಲ್‌ ಮಾದರಿಯ ಸಂಸ್ಥೆಗಳಲ್ಲಿ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಗಳ ಬಳಕೆಸಮರ್ಪಕವಾಗಿ ಆಗುತ್ತಿವೆ. ಕೆಲವು ವರ್ಷಗಳ ಕಾಲ ಮಾತ್ರ ಸಿಎಫ್‌ಟಿಆರ್‌ಐನಲ್ಲಿ ಕನ್ನಡ ಬಳಕೆಗೆ ತೊಂದರೆಯಾಗಿತ್ತು. ಈಗ ಈ ಸಮಸ್ಯೆ ಬಗೆಹರಿದಿದೆ ಎಂದು ಮೆಚ್ಚುಗೆಯಿಂದ ಹೇಳಿದರು.

ಕರ್ನಾಟಕದಲ್ಲಿನ ಎಲ್ಲ ಭಾಷೆಗಳ ಸಂರಕ್ಷಣೆ ಉತ್ತಮವಾಗಿದೆ. ಕೊಡವ, ತುಳು, ಕೊಂಕಣಿ, ಬ್ಯಾರಿ ಭಾಷೆಗಳ ಸಂರಕ್ಷಣೆ ಆಗುತ್ತಿದೆ. ಕೇಂದ್ರ ಸರ್ಕಾರವು ಇದನ್ನು ಮಾದರಿಯಲ್ಲಿ ಸ್ವೀಕರಿಸಿ ದೇಶದ ಎಲ್ಲ ಭಾಷೆಗಳನ್ನೂ ಸಮಾನವಾಗಿ ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಕನ್ನಡ ಕಲಿತ ಸಿಎಫ್‌ಟಿಆರ್‌ಐನ ಕನ್ನಡೇತರ ಸಿಬ್ಬಂದಿಗೆ ಪ್ರಮಾಣಪತ್ರಗಳನ್ನು ನಿರ್ದೇಶಕ ಡಾ.ಕೆ.ಎಸ್‌.ಎಂ.ಎಸ್‌.ರಾಘವರಾವ್ ವಿತರಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಮುರುಳೀಧರ ಅತಿಥಿಯಾಗಿದ್ದರು. ಕನ್ನಡ ಸಹೃದಯ ಬಳಗದ ಅಧ್ಯಕ್ಷ ರಂಗಧಾಮಯ್ಯ, ಉಪಾಧ್ಯಕ್ಷ ಡಾ.ಕೆ.ವೆಂಕಟೇಶಮೂರ್ತಿ, ಪ್ರಧಾನ ಕಾರ್ಯದರ್ಶಿ ಡಾ.ಆರ್‌.ಚೇತನ್, ಸಂಚಾಲಕ ಬಸವರಾಜ ಮುಂದಲಮನಿ, ನಿರ್ದೇಶಕರಾದ ಎಸ್‌.ಶಿವಪ್ಪ, ಕೆಂಪೇಗೌಡ, ಎನ್‌.ಚಂದ್ರಶೇಖರ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT