ಗಂಭೀರ ಚರ್ಚೆ ಕನ್ನಡದಲ್ಲಿ ನಡೆಯಲಿ

7
ಸರೋದ್ ವಾದಕ ರಾಜೀವ್‌ ತಾರಾನಾಥ್ ಸಲಹೆ

ಗಂಭೀರ ಚರ್ಚೆ ಕನ್ನಡದಲ್ಲಿ ನಡೆಯಲಿ

Published:
Updated:
Deccan Herald

ಮೈಸೂರು: ಸಾಮಾಜಿಕ, ರಾಜಕೀಯ ಚರ್ಚೆಗಳು ಕನ್ನಡದಲ್ಲೂ ನಡೆಯಬೇಕು. ಆ ಮೂಲಕ ಅಂತರರಾಷ್ಟ್ರೀಯ ಮಟ್ಟಕ್ಕೂ ಕನ್ನಡ ಬೆಳೆಯಬೇಕು ಎಂದು ಸರೋದ್ ವಾದಕ ರಾಜೀವ್‌ ತಾರಾನಾಥ್ ತಿಳಿಸಿದರು.

ಮೈಸೂರು ಸಾಹಿತ್ಯ ಸಂಘವು ಭಾನುವಾರ ಹಮ್ಮಿಕೊಂಡಿದ್ದ ‘ಮೈಸೂರು ಸಾಹಿತ್ಯೋತ್ಸವ 2018’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಡುಗೆಮನೆ ಸಾಹಿತ್ಯದಿಂದ ಕನ್ನಡ ಹೊರಬರಬೇಕು. ಅನೇಕ ಸಾಮಾಜಿಕ ಸಮಸ್ಯೆಗಳು ನಮ್ಮ ಕಣ್ಣಮುಂದಿವೆ. ಅವನ್ನು ಪರಿಣಾಮಕಾರಿಯಾಗಿ ಈ ಸಮಾಜದ ಎದುರು ಬಿಡಿಸಿಡಬೇಕು ಎಂದು ಅವರು ತಿಳಿಸಿದರು.

ಕನ್ನಡದಲ್ಲಿ ಪದ ದಾರಿದ್ರ್ಯ ಹೆಚ್ಚುತ್ತಿದೆ. ಬಹುತೇಕ ಪದಗಳು ಸಂಸ್ಕೃತದಿಂದಲೇ ಕೂಡಿವೆ. ಇದನ್ನು ಕನ್ನಡಿಗರು ಗಂಭೀರವಾಗಿ ಪರಿಗಣಿಸಬೇಕು. ಪದಕೋಶ ಶ್ರೀಮಂತವಾದಷ್ಟೂ ಭಾಷೆ ಬೆಳೆಯುತ್ತದೆ. ಹೊಸ ಹೊಸ ಪದಗಳನ್ನು ಸೃಷ್ಟಿಸಬೇಕು. ನಂತರ, ಅವನ್ನು ಬಳಸಬೇಕು. ಆಗ ಭಾಷೆ ಅದರೊಂದಿಗೆ ಬೆಳೆಯುತ್ತದೆ ಎಂದು ಅವರು ಸಲಹೆ ನೀಡಿದರು.

‘ತಮಿಳರನ್ನು ಎಲ್ಲ ವಿಚಾರಗಳಲ್ಲಿ ಟೀಕಿಸುವುದು ಸರಿಯಲ್ಲ. ಅವರಿಂದ ಕಲಿಯುವುದು ಸಾಕಷ್ಟಿದೆ. ಅವರ ಭಾಷಾಪ್ರೇಮ ಅಗಾಧವಾದುದು. ಅದು ನಮಗೂ ಬರಬೇಕು. ಅವರಷ್ಟು ಹೊಸ ತಮಿಳು ಪದಗಳನ್ನು ಸೃಷ್ಟಿಸುವವರು ಬೇರಾರೂ ಇಲ್ಲ. ಅದು ನಮಗೆ ಮಾದರಿಯಾಗಿ ಕನ್ನಡ ಪದಕೋಶ ವೃದ್ಧಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತ ಸೋದರ ಭಾಷೆಗಳಲ್ಲವೇ ಅಲ್ಲ. ಇಂಗ್ಲಿಷ್ ಹಾಗೂ ಸಂಸ್ಕೃತಕ್ಕೆ ಸಾಕಷ್ಟು ಸಾಮ್ಯತೆ ಇದೆ. ಹಾಗಾಗಿ, ಕನ್ನಡದಲ್ಲಿ ಸಂಸ್ಕೃತ ಪದಗಳನ್ನು ಬೆರೆಸಿ ಬಳಸುವುದನ್ನು ಕಡಿಮೆ ಮಾಡಿ, ಅಚ್ಚಗನ್ನಡ ಬಳಕೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ರಾಜೀವ ಗಾಂಧಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿ.ಬೆಳ್ಳಿಯಪ್ಪ ಅಧ್ಯಕ್ಷತೆವಹಿಸಿದ್ದರು. ಸಂಘದ ಉಪಾಧ್ಯಕ್ಷ ಎಚ್‌.ಎಸ್‌.ಶಿವಣ್ಣ, ಕಾರ್ಯದರ್ಶಿ ರೆಜಿನಾಲ್ಡ್ ವೆಸ್ಲಿ ಭಾಗವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !