ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸಾಕ್ ಅಜ್ಜನ ಕನ್ನಡ ಸೇವೆ

Last Updated 11 ನವೆಂಬರ್ 2019, 19:39 IST
ಅಕ್ಷರ ಗಾತ್ರ

ಕನ್ನಡ ನಾಡು ನುಡಿಗಾಗಿ ನೂರಾರು ಮಂದಿ ದುಡಿಯುತ್ತಿದ್ದಾರೆ. ಅವರಲ್ಲಿ ಎಷ್ಟೋ ಜನ ಸೇವೆಯನ್ನು ಮಾಡುತ್ತಲೇ ಖ್ಯಾತನಾಮರಾಗಿದ್ದಾರೆ. ಕೆಲವರು ವಿವಿಧ ಕಾರಣಗಳಿಂದ ದೂರಸರಿದಿದ್ದಾರೆ. ಆದರೆ, ಆರ್ಥಿಕವಾಗಿ, ದೈಹಿಕವಾಗಿ ಸೋಲುತ್ತಲೇ ಇದ್ದರೂ ಈತ ಮಾತ್ರ 8 ವರ್ಷಗಳಿಂದ ನಿಸ್ವಾರ್ಥವಾಗಿ ಕನ್ನಡ ತಾಯಿಯ ಸೇವೆ ಮುಂದುವರಿಸುತ್ತಾ ಬಂದಿದ್ದಾರೆ.

ಅವರೇ ಗ್ರಂಥಪಾಲಕ ಸೈಯದ್‌ ಇಸಾಕ್‌.

ಸ್ವಂತ ಹಣದಿಂದ ಪುಟ್ಟ ಗ್ರಂಥಾಲಯವನ್ನು ಸ್ಥಾಪಿಸುವ ಮೂಲಕ ಜನರ ಜ್ಞಾನ ಭಂಡಾರ ಹೆಚ್ಚಲು ಕಾರಣ ಕರ್ತರಾಗಿರುವ 64ರ ವೃದ್ಧ ಇಸಾಕ್‌ ಅವರ ಕನ್ನಡಾಭಿಮಾನ ಇನ್ನಷ್ಟು ಹೆಚ್ಚಿದೆ. ಮಾತ್ರವಲ್ಲದೇ ಅನೇಕ ಪ್ರಶಸ್ತಿ, ಪುರಸ್ಕಾರಗಳೂ ಇವರನ್ನು ಅರಸಿಬಂದಿವೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಗ್ರಂಥಾಲಯ ಕ್ಷೇತ್ರದಲ್ಲಿ ಅನುಪಮ ಸೇವೆಗೆ ಕೊಡಮಾಡುವ ರಾಜ್ಯ ಪ್ರಶಸ್ತಿಯನ್ನು ಗ್ರಂಥಪಾಲಕರ ದಿನಾಚರಣೆ ಅಂಗವಾಗಿ 2017ರಲ್ಲಿ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿ ಸನ್ಮಾನಿಸಲಾಗಿದೆ. ಸುವರ್ಣ ವಾಹಿನಿಯಿಂದ ‘ಅಸಮಾನ್ಯ ಕನ್ನಡಿಗ’ ಪ್ರಶಸ್ತಿ ನೀಡಿದ್ದು, ಗೋಪಾಲಗೌಡ ಶಾಂತವೇರಿ ಸ್ಮಾರಕ ಆಸ್ಪತ್ರೆ, ಲಯನ್ಸ್ ಸಂಸ್ಥೆಗಳು ಆಚರಿಸಿದ ಕರ್ನಾಟಕ ರಾಜ್ಯೋತ್ಸವದಲ್ಲಿ ಸನ್ಮಾನಿಸಿವೆ.

ಮೂರೂವರೆ ವರ್ಷಗಳ ಹಿಂದೆ ರಾಜೀವನಗರ 2ನೇ ಹಂತದ ಅಲ್‌ಬದರ್ ಮಸೀದಿ ಸಮೀಪ ಅಮ್ಮರ್‌ ವೃತ್ತದ ಬಳಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಜಾಗದಲ್ಲಿ ತೆಂಗಿನ ಗರಿಗಳನ್ನು ಬಳಸಿ ನಿರ್ಮಿಸಿದ್ದ ಈ ಗ್ರಂಥಾಲಯ ಈಗ ಇನ್ನಷ್ಟು ದೊಡ್ಡದಾಗಿದೆ. ಪುಸ್ತಕಗಳ ಸಂಖ್ಯೆ 4 ಸಾವಿರಕ್ಕೆ ಹೆಚ್ಚಿದ್ದು ಬಹುಪಾಲು ಕನ್ನಡದವೇ ಆಗಿವೆ. ಇಂದಿಗೂ 17 ದಿನಪತ್ರಿಕೆಗಳನ್ನು ತರಿಸುತ್ತಿದ್ದಾರೆ. ಮಾತ್ರವಲ್ಲ, ಓದುಗರರ ಸಂಖ್ಯೆಯೂ ಹೆಚ್ಚಿದೆ.

10X10 ಅಡಿಯಲ್ಲಿದ್ದ ಗ್ರಂಥಾಲಯ ಈಗ 10X15 ಅಡಿಯಷ್ಟು ದೊಡ್ಡದಾಗಿದೆ. ಅರ್ಧಭಾಗಕ್ಕೆ ತಗಡಿನ ಸೂರು ಬಂದಿದ್ದರೆ ಇನ್ನರ್ಧ ಭಾಗ ತೆಂಗಿನ ಗರಿಯೇ ಇದೆ. ಅಲೆಮೆರಾವೂ ಗ್ರಂಥಾಲಯಕ್ಕೆ ಬಂದಿದ್ದು ಮೆರಗು ನೀಡುತ್ತಿದೆ. ಕುರ್‌ಅನ್‌, ಭಗವದ್‌ಗೀತೆ ಸೇರಿದಂತೆ ಟಿಪ್ಪು ಸುಲ್ತಾನ್, ಮಹಾತ್ಮ ಗಾಂಧಿ, ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರ ಕುರಿತ ಕನ್ನಡ ಪುಸ್ತಕಗಳು ಈಗ ಗ್ರಂಥಾಲಯಕ್ಕೆ ಸೇರಿವೆ.

ಮೊದಲಿಗಿಂತಲೂ ಹೆಚ್ಚು ಅಚ್ಚುಕಟ್ಟಾಗಿದೆ. ಕಲ್ಲುಗಳನ್ನೇ ಜೋಡಿಸಿ, ಸುಣ್ಣ ಬಳಿದು ಆಕರ್ಷಕವಾಗಿಸುವ ಮೂಲಕ ಓದುಗರಿಗೆ ಆಸನವನ್ನೂ ಮಾಡಿಕೊಟ್ಟಿದ್ದಾರೆ. ಒಂದು ಭಾಗದಲ್ಲಿ ಪುಸ್ತಕಗಳನ್ನು ಒಪ್ಪವಾಗಿ ಜೋಡಿಸಿದ್ದು, ಇನ್ನೊಂದು ಭಾಗದಲ್ಲಿ ದಿನಪತ್ರಿಕೆಗಳನ್ನು ನೇತುಹಾಕಲಾಗಿದೆ. ಸುತ್ತಲೂ ಇತಿಹಾಸದ ಮಹತ್ವ ಸಾರುವ ಚಿತ್ರಗಳನ್ನು, ಸ್ವಾತಂತ್ರ್ಯ ಹೋರಾಟಗರರ, ಸಾಹಿತಿಗಳ, ಸಾಧನೆ ಮಾಡಿದ ಚಲನಚಿತ್ರ ನಟರ, ಒಲಂಪಿಕ್‌ನಲ್ಲಿ ಪದಕಗಳಿಸಿದವರು ಸೇರಿದಂತೆ ಕ್ರೀಡಾ ಸಾಧಕರ ಚಿತ್ರಗಳನ್ನು ಹಾಕಿದ್ದಾರೆ. ಅಲ್ಲದೇ, ಅನೇಕ ಮಾಹಿತಿಗಳನ್ನು ಒಳಗೊಂಡಿರುವ ಪೇಪರ್‌ ಕಟಿಂಗ್ಸ್‌ಗಳನ್ನು ಸುಂದರವಾಗಿ ಅಳವಡಿಸಿದ್ದಾರೆ.

ವರ್ಷದ ಎಲ್ಲ ದಿನವೂ ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆ ವರೆಗೂ ತೆರೆದಿರುವ ಈ ಗ್ರಂಥಾಲಯಕ್ಕೆ ವಾರದ ದಿನಗಳಲ್ಲಿ ನಿತ್ಯವೂ 60 ರಿಂದ 80 ಜನ ಬಂದು ಪತ್ರಿಕೆ ಓದುತ್ತಾರೆ. ಶನಿವಾರ, ಭಾನುವಾರ ಇತರೇ ರಜಾ ದಿನಗಳಲ್ಲಿ ಸುತ್ತಮುತ್ತಲಿನ ಮಕ್ಕಳೂ ಸೇರಿದಂತೆ 120 ಜನ ಬಂದು ಪತ್ರಿಕೆ ಓದುತ್ತಾರೆ. ಅನೇಕ ಅಧಿಕಾರಿಗಳೂ ಬಂದು ಮೆಚ್ಚುಗೆ ಸೂಚಿಸಿದ್ದಾರೆ ಎಂದು ಅಭಿಪ್ರಾಯ ಪುಸ್ತಕವನ್ನು ಹೆಮ್ಮೆಯಿಂದ ತೋರಿಸುತ್ತಾರೆ.

ಮನೆಯ ಒಳಚರಂಡಿ ಪೈಪ್‌ಗಳನ್ನು ಸ್ವಚ್ಛಗೊಳಿಸುವ ವೃತ್ತಿ ಮಾಡುವ ಸೈಯದ್‌ ಇಸಾಕ್‌ ತಾವು ಬೆವರು ಹರಿಸಿ ದುಡಿದ ಹಣದ ಬಹುಪಾಲನ್ನು ಗ್ರಂಥಾಲಯದ ನಿರ್ವಹಣೆಗೇ ವ್ಯಯಿಸುತ್ತಿದ್ದಾರೆ.

‘ಯಾವುದಾದರೂ ಮನೆಯ ಚರಂಡಿ ಪೈಪ್‌ ಕಟ್ಟಿದಾಗ ಅದನ್ನು ಸ್ವಚ್ಛಗೊಳಿಸುವ ಅವರು ₹ 300ರಿಂದ 400 ಪಡೆಯುತ್ತಾರೆ. ಈ ಕೆಲಸವಿಲ್ಲದ ದಿನಗಳಲ್ಲಿ ಕಟ್ಟಡ ಕಾರ್ಮಿಕನಾಗಿ, ಜಲ್ಲಿ ಒಡೆಯುವ ಕೆಲಸ ಮಾಡಿ ಸಣ್ಣ ಆದಾಯಗಳಿಸುತ್ತೇನೆ. ಗ್ರಂಥಾಲಯ ನಿರ್ವಹಣೆಗೆ ಮಾಸಿಕವಾಗಿ ₹6000 ವ್ಯಯಿಸುತ್ತೇನೆ’ ಎನ್ನುತ್ತಾರೆ ಇಸಾಕ್‌.

ಸುಂದರ ಉದ್ಯಾನ:ಗ್ರಂಥಾಲಯಕ್ಕೆ ಬರುವವರ ಮನಸ್ಸನ್ನು ಉಲ್ಲಾಸಿತಗೊಳಿಸಲು ಆವರಣದ ಸುತ್ತಲೂ ಅಲಂಕಾರಿಕ ಗಿಡಗಳನ್ನು ನೆಡುವ ಮೂಲಕ ಚಿಕ್ಕದಾದ ಉದ್ಯಾನವನ್ನೂ ನಿರ್ಮಿಸಿದ್ದಾರೆ. ಲೋಕಾಭಿರಾಮವಾಗಿ ಚರ್ಚೆ ನಡೆಸುವವರಿಗೆ ಗ್ರಂಥಾಲಯದ ಪಕ್ಕದಲ್ಲೇ ಕಲ್ಲು ಬೆಂಚಿನ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಕೆಲ ವರ್ಷಗಳ ಹಿಂದೆ ನೆಟ್ಟಿದ್ದ ಕದಳಿ ಗಿಡಗಳು ಫಲಕೊಡುತ್ತಿದ್ದರೆ, ಇನ್ನು ಕೆಲವು ಬಣ್ಣ ಬಣ್ಣದ ಹೂವುಗಳನ್ನು ಬಿಟ್ಟು ನಳನಳಿಸುತ್ತಿವೆ. ಉದ್ಯಾನದ ಸುತ್ತಲೂ ಅಳವಡಿಸಿರುವ ಫಲಕಗಳಲ್ಲಿ ಬರೆದಿರುವ ಗಾದೆ ಮಾತುಗಳು, ನಾಣ್ಣುಡಿಗಳು ಓದುಗರರನ್ನು ಆಕರ್ಷಿಸುತ್ತಿವೆ.

ಅನೇಕ ರಾಷ್ಟ್ರೀಯ ಹಬ್ಬಗಳನ್ನೂ ಸ್ವಂತ ಖರ್ಚಿನಲ್ಲಿ ಸಡಗರದಿಂದ ಆಚರಿಸುತ್ತಾರೆ. ಆ ದಿನಗಳಲ್ಲಿ ದೊಡ್ಡ ದೊಡ್ಡ ಫಲಕಗಳನ್ನು ಹಾಕುವ ಮೂಲಕ ಅದರ ಮಹತ್ವವನ್ನು ಸಾರುತ್ತಿದ್ದಾರೆ.

’ನನ್ನ ಮಾತೃಭಾಷೆ ಉರ್ದು ಆಗಿದ್ದರೂ ಮಾತನಾಡುವುದು ಕನ್ನಡವನ್ನೇ. ಈ ಭಾಷೆ ನನಗೆ ನೆಲೆಕೊಟ್ಟಿದೆ. ಈಗ ಗೌರವವನ್ನೂ ತಂದುಕೊಟ್ಟಿದೆ. ಅದರ ಋಣ ತೀರಿಸಲು ಬದುಕಿರುವವ ವರೆಗೂ ಕನ್ನಡ ಸೇವೆ ಮಾಡುತ್ತೇನೆ‘ ಎಂದು ಅವರು ಹೇಳುತ್ತಿದ್ದರೆ, ಗ್ರಂಥಾಲಯದ ಮುಂದೆ 30 ಅಡಿ ಎತ್ತರದಲ್ಲಿ ಹಾರಾಡುತ್ತಿರುವ ಕನ್ನಡ ಧ್ವಜ ಪಟ ಪಟನೆ ಹಾರುತ್ತಾ ಸಂತಸ ವ್ಯಕ್ತಪಡಿಸಿದಂತೆ ಭಾಸವಾಗುತ್ತದೆ.

’ಉರ್ದು ಭಾಷಿಕರೇ ಹೆಚ್ಚಾಗಿರುವ ಈ ಸ್ಥಳದಲ್ಲಿ ಕನ್ನಡವನ್ನು ಬೆಳೆಸುವ ನನ್ನ ಉದ್ದೇಶ ಈಡೇರುತ್ತಿದೆ. ಇಲ್ಲಿ ಮೂರ್ನಾಲ್ಕು ಉರ್ದು ಪತ್ರಿಕೆಗಳನ್ನು ಇಟ್ಟಿದ್ದರೂ ಕನ್ನಡ ಪತ್ರಿಕೆಗಳನ್ನೇ ಹೆಚ್ಚಾಗಿ ಓದುತ್ತಾರೆ. ಇಂತಹ ಸ್ಥಳದಲ್ಲಿ ಕನ್ನಡ ಪರ ಸಂಘಟನೆಗಳು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎನ್ನುವ ಇಸಾಕ್‌, ದಾನಿಗಳ ಸಹಾಯದಿಂದ ನನ್ನ ಗ್ರಂಥಾಲಯ ಪುಸ್ತಕಗಳನ್ನು ಕಾಣುವಂತಾಗಿದೆ. ಈ ಸಣ್ಣ ಗ್ರಂಥಾಲಯವನ್ನು ನಡೆಸಲು ನಾನು ಯಾರಲ್ಲೂ ಹಣವನ್ನು ಕೇಳುವುದಿಲ್ಲ. ಬದಲಿಗೆ ಪುಸ್ತಕಗಳನ್ನು ಅಪೇಕ್ಷಿಸುತ್ತೇನೆ ಎನ್ನುತ್ತಾರೆ.

ಪುಸ್ತಕ ದಾನಿಗಳು ಸಂಪರ್ಕಿಸಲು– 9901266487.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT