ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿಶ್ವವಿದ್ಯಾಲಯ: ಪಠ್ಯವಿಲ್ಲದೆ ಕಲಿಕೆ, ಬೋಧನೆಗೆ ತೊಂದರೆ

2 ತಿಂಗಳಾದರೂ ಪೂರೈಸದ ಮೈಸೂರು ವಿಶ್ವವಿದ್ಯಾಲಯ
Last Updated 13 ಜುಲೈ 2022, 22:30 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪದವಿ ಕೋರ್ಸ್‌ಗಳ 2ನೇ ಸೆಮಿಸ್ಟರ್ ಕನ್ನಡ ಭಾಷಾ ಮತ್ತು ಐಚ್ಛಿಕ ಕನ್ನಡ ಪಠ್ಯಪುಸ್ತಕಗಳ ಮುದ್ರಣ ಇನ್ನೂ ಪೂರ್ಣಗೊಂಡಿಲ್ಲ. ಪಠ್ಯವಿಲ್ಲದಿದ್ದರಿಂದ ಕಲಿಕೆಯಲ್ಲಿ ತೊಡಗಲು ವಿದ್ಯಾರ್ಥಿಗಳಿಗೆ ಮತ್ತು ಬೋಧಿಸಲು ಪ್ರಾಧ್ಯಾಪಕರಿಗೆ ತೊಂದರೆ ಆಗುತ್ತಿದೆ.

ತರಗತಿ ಅರಂಭವಾಗಿ ಎರಡು ತಿಂಗಳು ಮುಗಿಯುತ್ತಾ ಬಂದಿದ್ದರೂ ಕಲಿಕಾ ಸಾಮಗ್ರಿ ಒದಗಿಸುವ ಕೆಲಸವಾಗಿಲ್ಲ. ಇದು ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವಂತಾಗಿದೆ. ಇದರೊಂದಿಗೆ ಪಠ್ಯಪುಸ್ತಕ ಮುದ್ರಣದಂತಹ ಅಗತ್ಯ ಸಿದ್ಧತೆಯನ್ನೂ ಮಾಡಿಕೊಳ್ಳದೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೆ ತರಾತುರಿಯಲ್ಲಿ ಮುಂದಾಗಿರುವುದೇಕೆ ಎನ್ನುವ ಪ್ರಶ್ನೆಯೂ ಮೂಡಿದ್ದು, ಕಾಲೇಜುಗಳ ಹಂತದಲ್ಲಿ ಚರ್ಚೆಗೀಡಾಗಿದೆ.

ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡಿರುವ ವಿಶ್ವವಿದ್ಯಾಲಯದ ಪದವಿ ಕಾಲೇಜುಗಳಲ್ಲಿ ಬಿಎ, ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎ. ಹಾಗೂ ಬಿ.ಸಿ.ಎ. ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಬಹುತೇಕ ವಿದ್ಯಾರ್ಥಿಗಳು ಕನ್ನಡವನ್ನು ಅಭ್ಯಾಸ ಮಾಡಬೇಕು. ಈ ಪದವಿ ಕೋರ್ಸ್‌ಗಳಿಗೆ ಪ್ರತ್ಯೇಕವಾಗಿ ಕನ್ನಡ ಪಠ್ಯಪುಸ್ತಕವನ್ನು ನೀಡಬೇಕು. ಇದಕ್ಕೆ ಆದ್ಯತೆ ಕೊಟ್ಟಿಲ್ಲದಿರುವುದು ಪ್ರಾಧ್ಯಾಪಕರ ಅಸಮಾಧಾನಕ್ಕೂ ಕಾರಣವಾಗಿದೆ.

ಅಂತರ್ಜಾಲದಲ್ಲಿ ಪಡೆದು!

ಕೆಲವರು ಜನಪ್ರಿಯ ಕವಿಗಳ ಪದ್ಯಗಳಿಗಾಗಿ ಅಂತರ್ಜಾಲದ ಮೊರೆ ಹೋಗಿದ್ದಾರೆ. ಪಠ್ಯಪುಸ್ತಕ ಒದಗಿಸುವವರೆಗೆ, ಪಿಡಿಎಫ್‌ ಸಾಮಗ್ರಿಯನ್ನು ಒದಗಿಸುವ ಕಾಳಜಿಯನ್ನೂ ವಿಶ್ವವಿದ್ಯಾಲಯದಿಂದ ತೋರಲಾಗಿಲ್ಲ. ಆದ್ದರಿಂದ, ನಿಗದಿತ ತರಗತಿಗಳಲ್ಲಿ ಏನನ್ನು ಬೋಧಿಸಬೇಕು ಎಂಬ ಪ್ರಶ್ನೆಯು ಪ್ರಾಧ್ಯಾಪಕರದಾಗಿದೆ. ಬಿ.ಎಸ್ಸಿ. ಪದವಿ ವಿದ್ಯಾರ್ಥಿಗಳಿಗಷ್ಟೆ ಪಿಡಿಎಫ್‌ ರೂಪದಲ್ಲಿ ಪಠ್ಯವನ್ನು ಒದಗಿಸಲಾಗಿದೆ.

‘ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ಒದಗಿಸುವುದು ವಿಶ್ವವಿದ್ಯಾಲಯದ ಪ್ರಾಥಮಿಕ ಕರ್ತವ್ಯ. ಅದನ್ನೂ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿರುವುದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪ್ರಸಾರಾಂಗವನ್ನೇ ಇಟ್ಟುಕೊಂಡಿದ್ದರೂ ವಿ.ವಿಯವರು ಪಠ್ಯಪುಸ್ತಕ ಮುದ್ರಿಸಿಕೊಡಲು ವಿಳಂಬ ಮಾಡುತ್ತಿರುವುದೇಕೆ ಎನ್ನುವುದು ತಿಳಿಯುತ್ತಿಲ್ಲ. ವಿಶ್ವವಿದ್ಯಾಲಯದವರನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರಗಳು ಬರುತ್ತಿವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಗೈಡ್ ಕೂಡ ಸಿಗುತ್ತಿಲ್ಲ

‘ಕನ್ನಡ ಪಠ್ಯಪುಸ್ತಕದಲ್ಲಿ 5 ಪದ್ಯಗಳು, 4 ಕಥೆ ಹಾಗೂ 3 ಲೇಖನಗಳಿರುತ್ತವೆ ಎಂದಷ್ಟೆ ಶೀರ್ಷಿಕೆ ಸಹಿತ ತಿಳಿಸಲಾಗಿದೆ. ಜಿ.ಎಸ್. ಶಿವರುದ್ರಪ್ಪ ಅವರ ‘ಸಂಕಲ್ಪ’ ಪದ್ಯವನ್ನು ಗೂಗಲ್‌ನಲ್ಲಿ ಪಡೆದು ಬೋಧಿಸಿದ್ದೇವೆ. ಕೆಲವು ಲೇಖನಗಳು ಸಿಗುವುದಿಲ್ಲ. ಪಠ್ಯದ ಬದಲಿಗೆ ಮೊಬೈಲ್‌ ಫೋನ್‌ ಇಟ್ಟುಕೊಂಡು ಪಾಠ ಮಾಡಬೇಕಾಗಿದೆ. ಪಠ್ಯ ಸಿಗುವುದು ಯಾವಾಗ ಎಂದು ವಿದ್ಯಾರ್ಥಿಗಳು ನಮ್ಮನ್ನು ಕೇಳುತ್ತಿದ್ದಾರೆ. ಅವರಿಗೆ ಏನೆಂದು ಉತ್ತರಿಸುವುದೋ ತಿಳಿಯದಾಗಿದೆ. ಪಠ್ಯಕ್ರಮ ಬಾರದಿರುವುದರಿಂದಾಗಿ ಗೈಡ್ ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ’ ಎನ್ನುತ್ತಾರೆ ಅವರು.

‘ಜಾಲತಾಣದಲ್ಲಿ ಸಿಕ್ಕ ಸಂಪನ್ಮೂಲವನ್ನು ನಾವು ಬೋಧಿಸಿರುತ್ತೇವೆ ಎಂದಿಟ್ಟುಕೊಳ್ಳಿ, ಪಠ್ಯಕ್ರಮ ಬಂದಾಗ ವ್ಯತ್ಯಾಸವಿದ್ದರೆ ವಿದ್ಯಾರ್ಥಿಗಳಿಗೆ ಗೊಂದಲ ಆಗುತ್ತದೆಯಲ್ಲವೇ? ಆಗ, ಮತ್ತೊಮ್ಮೆ ಪಾಠ ಮಾಡಲಾಗುತ್ತದೆಯೇ? ಹೋದ ಸೆಮಿಸ್ಟರ್‌ನಲ್ಲೂ ಕೊನೆ ಕ್ಷಣದಲ್ಲಿ ಪಠ್ಯಪುಸ್ತಕ ಪೂರೈಸಲಾಗಿತ್ತು. ಸಕಾಲಕ್ಕೆ ಪಠ್ಯ ಸಿಗದಿದ್ದರಿಂದ ಸಾವಿರಾರು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ವಿಶ್ವವಿದ್ಯಾಲಯದವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎನ್ನುವ ಮನವಿ ಅವರದು.

ಎನ್‌ಇಪಿ ಅನುಷ್ಠಾನಗೊಂಡಿರುವುದರಿಂದ, ಹಳೆಯ ಪಠ್ಯಕ್ರಮ ಬೋಧಿಸುವುದಕ್ಕೂ ಆಗದಂತಹ ಸ್ಥಿತಿ ಇದೆ.

ಅನುಕೂಲ ಮಾಡಿಕೊಡಲಿ

ಕನ್ನಡ ಪಠ್ಯಪುಸ್ತಕ ಕೇಳಿಕೊಂಡು ವಿದ್ಯಾರ್ಥಿಗಳು ನಿತ್ಯವೂ ಬರುತ್ತಿದ್ದಾರೆ. ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ವಿ.ವಿಯವರು ಕೂಡಲೇ ಕ್ರಮ ವಹಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಲಿ.

– ಪ್ರಭು, ಪುಸ್ತಕಗಳ ವ್ಯಾಪಾರಿ, ಗುಂಡ್ಲುಪೇಟೆ

ಹಲವು ದಿನಗಳಾಗಿವೆ

ಪಠ್ಯಪುಸ್ತಕಗಳ ಮುದ್ರಣಕ್ಕಾಗಿ ಪ್ರಸಾರಾಂಗಕ್ಕೆ ಕಳುಹಿಸಿ ಹಲವು ದಿನಗಳಾಗಿವೆ. ಈ ವಾರದಲ್ಲಿ ಸಿದ್ಧವಾಗಿ ವಿದ್ಯಾರ್ಥಿಗಳ ಕೈಸೇರಬಹುದು.

–ಡಾ.ವಿಜಯಕುಮಾರಿ ಎಸ್. ಕರಿಕಲ್, ಅಧ್ಯಕ್ಷರು, ಕನ್ನಡ ಅಧ್ಯಯನ ಮಂಡಳಿ

ತಲುಪಿಸಲು ಕ್ರಮ

ಕನ್ನಡ ಪ್ರಾಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವುದು ಗಮನಕ್ಕೆ ಬಂದಿದೆ. ಹೀಗಾಗಿ, ವಿಶೇಷ ಕಾಳಜಿ ವಹಿಸಿದ್ದೇನೆ. ಇನ್ನೊಂದು ವಾರದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ತಲುಪಿಸಲು ಕ್ರಮ ವಹಿಸಲಾಗುವುದು.

–ಪ್ರೊ.ಎಂ.ಎಸ್. ಶೇಖರ್, ನಿರ್ದೇಶಕರು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT