ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರ ನಿರಭಿಮಾನದಿಂದ ಕುತ್ತು: ಸಮಾಜವಾದಿ ಪ.ಮಲ್ಲೇಶ್‌ ವಿಷಾದ

Last Updated 5 ನವೆಂಬರ್ 2018, 11:28 IST
ಅಕ್ಷರ ಗಾತ್ರ

ಮೈಸೂರು: ‘ಕನ್ನಡಿಗರ ನಿರಭಿಮಾನದಿಂದಲೇ ಭಾಷೆಯ ಅಭಿವೃದ್ಧಿಯಾಗದೇ ಇಂಗ್ಲಿಷ್‌ ನಮ್ಮನ್ನು ಅತಿಕ್ರಮಣ ಮಾಡುವಂತಾಗಿದೆ’ ಎಂದು ಸಮಾಜವಾದಿ ಪ.ಮಲ್ಲೇಶ್‌ ಹೇಳಿದರು.

ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಯ ಕನ್ನಡ ಸಹೃದಯ ಬಳಗದ ನೂತನ ಕಚೇರಿ ಉದ್ಘಾಟನೆ ಹಾಗೂ ಕನ್ನಡ ಹಬ್ಬ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡದ ಬಗ್ಗೆಕನ್ನಡಿಗರಿಗೆ ತಾತ್ಸಾರದ ಮನೋಭಾವವಿದೆ. ಪೋಷಕರಿಗೆ, ಮಕ್ಕಳಿಗೆ, ಶಿಕ್ಷಕರಿಗೆ, ಸರ್ಕಾರಕ್ಕೆ ಕನ್ನಡ ಬೇಡವಾಗಿದೆ. ಇಂಗ್ಲಿಷ್‌ ಎಂಬ ಭೂತ ಮನೆಯ ಒಳಗೆ ಬಂದು ಕುಳಿತಿದೆ. ಈ ಹೊತ್ತಿನಲ್ಲಿ ಕನ್ನಡ ಮೂಲೆಗುಂಪಾಗುತ್ತಿದೆ. ಇದರಿಂದ ಮನೆ, ಮನ, ಸಮಾಜದಲ್ಲಿ ಇಂಗ್ಲಿಷ್‌ ಕನ್ನಡದ ಕತ್ತು ಹಿಸುಕುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

‘ಕನ್ನಡಿಗರು ಹಲವು ದಶಕಗಳಿಂದ ಕನ್ನಡಪರ ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದಾರೆ. ಆದರೆ, ಹೋರಾಟದ ಸಾಧನೆ ಏನು ಎಂದು ಲೆಕ್ಕ ಹಾಕಿದರೆ ಉತ್ತರ ಶೂನ್ಯ. ಈ ಶೂನ್ಯ ಸಂಪಾದನೆಗೆ ಇಷ್ಟೊಂದು ಕಷ್ಟಪಡಬೇಕಿತ್ತೆ? ಕನ್ನಡದ ಮೂಲಕ ಜಗತ್ತಿನ ಯಾವ ಜ್ಞಾನವನ್ನು ಬೇಕಾದರೂ ಕಲಿತುಕೊಳ್ಳಬಹುದು. ಮಕ್ಕಳ ಸೃಜನಶೀಲತೆ ವೃದ್ಧಿಸುವುದು ಕನ್ನಡದಲ್ಲಿ ಕಲಿತಾಗ ಮಾತ್ರ’ ಎಂದು ಹೇಳಿದರು.

ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಈ ಹಿಂದಿನ ನಿರ್ದೇಶಕರ ಅವಧಿಯಲ್ಲಿ ಕನ್ನಡ ಸಂಘಟನೆಗಳ ಕತ್ತು ಹಿಸುಕಲಾಗಿತ್ತು. ತಾವು ಕನ್ನಡಿಗರೆಂದು ಹೇಳಿಕೊಳ್ಳಲು ಭಯಪಟ್ಟಿಕೊಳ್ಳುವ ಪರಿಸ್ಥಿತಿ ಇತ್ತು. ನಿರಂತರ ಹೋರಾಟಗಳ ಬಳಿಕ ಕನ್ನಡಕ್ಕೆ ಜಯ ಸಿಕ್ಕಿತು ಎಂದರು.

ಕನ್ನಡ ಸಹೃದಯ ಬಳಗದ ಅಧ್ಯಕ್ಷ ರಂಗಧಾಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಎರಡು ದಶಕಗಳಿಗೂ ಹೆಚ್ಚಿನ ಕಾಲದಿಂದ ಬಳಗವು ಕನ್ನಡಪರ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಇದೀಗ ಸಂಸ್ಥೆಯ ಸಂಶೋಧನಾ ಚಟುವಟಿಕೆಗಳನ್ನು ಕನ್ನಡದಲ್ಲಿ ತಿಳಿಸುವ ನಿಟ್ಟಿನಲ್ಲಿ ಕನ್ನಡ ತ್ರೈಮಾಸಿಕ ಪ್ರಕಟಣೆ ಶುರುವಾಗಿದೆ. ಕನ್ನಡ ಸ್ಮರಣ ಸಂಚಿಕೆಯೂ ಪ್ರಕಟಗೊಳ್ಳಲಿದೆ ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್‌.ಎಂ.ಎಸ್.ರಾಘವನ್ ಅಧ್ಯಕ್ಷತೆವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಬಳಗದ ಉಪಾಧ್ಯಕ್ಷ ಡಾ.ಕೆ.ವೆಂಕಟೇಶಮೂರ್ತಿ, ಕನ್ನಡ ಸಮನ್ವಯಾಧಿಕಾರಿ ಎಚ್‌.ಎಸ್.ಸತೀಶ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT