ಬುಧವಾರ, ಸೆಪ್ಟೆಂಬರ್ 22, 2021
29 °C
ಕತೆಗಾರ, ಅನುವಾದಕ ಡಾ.ಕೃಷ್ಣಮೂರ್ತಿ ಚಂದರ್ ಅಭಿಮತ

ಗಿರೀಶ ಕಾರ್ನಾಡ ಪ್ರಭಾವಶಾಲಿ ಲೇಖಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಗಿರೀಶ ಕಾರ್ನಾಡ ಪ್ರಭಾವಶಾಲಿ ಲೇಖಕ. ಉದಾರ ಮನಸ್ಸಿನಿಂದ ಈ ಜಗತ್ತನ್ನು ನೋಡಿದವರು’ ಎಂದು ಕತೆಗಾರ, ಅನುವಾದಕ ಡಾ.ಕೃಷ್ಣಮೂರ್ತಿ ಚಂದರ್ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಆವರಣದಲ್ಲಿ ಭಾನುವಾರ ಮುಸ್ಸಂಜೆ ಸಾಹಿತ್ಯ ಅಕಾಡೆಮಿ ಹಾಗೂ ಚಕೋರ–101 ಕವಿ ಕಾವ್ಯ ವಿಚಾರ ವೇದಿಕೆ ವತಿಯಿಂದ ನಡೆದ ‘ಗಿರೀಶ ಕಾರ್ನಾಡ ಅಕ್ಷರ ಲೋಕದಲ್ಲಿ..!’ ಸಮಾರಂಭದಲ್ಲಿ ಮಾತನಾಡಿದ ಅವರು, ಕಾರ್ನಾಡ ಪುರಾಣ, ಜನಪದ, ಚರಿತ್ರೆಯನ್ನು ಪ್ರಧಾನವನ್ನಾಗಿಸಿಕೊಂಡು ರಚಿಸಿದ ನಾಟಕಗಳು ಶ್ರೇಷ್ಠ ಕೃತಿಗಳಾಗಿ ಹೊರಹೊಮ್ಮಿವೆ ಎಂದರು.

‘ಅಗ್ನಿ ಮತ್ತು ಮಳೆ ಕಾರ್ನಾಡರ ಸರ್ವ ಶ್ರೇಷ್ಠ ಕೃತಿ ನನ್ನ ಪಾಲಿಗೆ. ಜ್ಞಾನ ಪರಿಧಿಯ ವಿಸ್ತರಣೆಗೆ ಒತ್ತು ಕೊಡುವಂತಹದ್ದು. ದೇಶದ ಪರಿಕಲ್ಪನೆಯನ್ನು ವಿಸ್ತರಿಸಲಿದೆ. ದೇಶ–ಕಾಲದ ಪರಿಕಲ್ಪನೆಯನ್ನು ಒಟ್ಟಿಗೆ ತರುವ ಯತ್ನವನ್ನು ಗಿರೀಶ ತಮ್ಮ ಈ ಕೃತಿಯಲ್ಲಿ ನಡೆಸಿದ್ದಾರೆ. ಈ ಎರಡೂ ಪರಿಕಲ್ಪನೆಗಳನ್ನು ಸಾಧ್ಯವಾದಷ್ಟು ವಿಸ್ತರಿಸಿ, ಎರಡನ್ನೂ ಹತ್ತಿರಕ್ಕೆ ತಂದ ಸಾಧನೆಗೈದಿದ್ದಾರೆ’ ಎಂದು ಚಂದರ್ ಹೇಳಿದರು.

‘ಯಯಾತಿ, ಹಯವದನ, ಅಗ್ನಿ ಮತ್ತು ಮಳೆ ಕೃತಿಗಳನ್ನು ಪುರಾಣಕ್ಕೆ ಸಂಬಂಧಿಸಿದಂತೆ ಕಾರ್ನಾಡ ರಚಿಸಿದ್ದು, ಇವು ಸಾರ್ವತ್ರಿಕವಾಗಿವೆ. ಪುರಾಣ ಸಂಬಂಧಿತ ಕೃತಿಗಳಿಗೆ ಕಾಲದ ಪರಿಕಲ್ಪನೆಯಿರಲ್ಲ. ಈ ಯತ್ನವನ್ನು ನಡೆಸಲುಬಾರದು. ರಾಮಾಯಣ, ಮಹಾಭಾರತಕ್ಕೆ ಕಾಲ ಬೇಕಿಲ್ಲ. ನಮ್ಮಲ್ಲಿ ಪುರಾಣ ಜನಜನಿತವಾಗಿವೆ. ಜನರೊಟ್ಟಿಗೆ ಜೀವಂತವಾಗಿವೆ. ಒಂದೊಂದು ಪ್ರದೇಶವೂ ಒಂದೊಂದು ಪುರಾಣದ ಹಿನ್ನೆಲೆ ಹೊಂದಿದೆ. ಆದರೆ ವಿದೇಶಗಳಲ್ಲಿ ಪುರಾಣ ಗ್ರಂಥಾಲಯಗಳಿಗೆ ಮಾತ್ರ ಮೀಸಲಾಗಿದೆ. ಪುಸ್ತಕಕ್ಕೆ ಸೀಮಿತವಾಗಿದೆ. ಜನರಿಂದ ದೂರವಿದೆ’ ಎಂದು ಕೃಷ್ಣಮೂರ್ತಿ ತಿಳಿಸಿದರು.

‘ತಲೆದಂಡ, ತುಘಲಕ್, ಟಿಪ್ಪುಸುಲ್ತಾನ್ ಚರಿತ್ರೆ ಕೇಂದ್ರೀಕೃತ ನಾಟಕ ಕೃತಿಗಳು. ಇವು ಸಮಕಾಲೀನತೆಯನ್ನು ಬಿಂಬಿಸುತ್ತವೆ. ಕಾರ್ನಾಡ ಬರೆದ ಕೊನೆಯ ಮೂರು ನಾಟಕಗಳು ಸಾಮಾನ್ಯ ನಾಟಕಗಳಾಗಿದ್ದವು’ ಎಂದು ಹೇಳಿದರು.

ಡಾ.ಎಂ.ಎ.ಕನಕಮಾಲಿನಿ ತಿಂಗಳ ಚಕೋರ ಕವಿತೆ ಓದಿದರು. ಡಾ.ಶಿವಕುಮಾರ ಕಾರೇಪುರ, ಅಶೋಕಪುರಂ ಕೆ.ಗೋವಿಂದರಾಜು, ಡಾ.ದೊಡ್ಡೇಗೌಡ ಬಿ.ಸಿ. ಡಾ.ಕುಶಾಲ ಬರಗೂರು, ಬಿ.ಎನ್.ಮಾರುತಿಪ್ರಸನ್ನ, ಎ.ಎಸ್.ಗೋವಿಂದೇಗೌಡ ಕಾರ್ನಾಡರ ಸಾಹಿತ್ಯ ಸಂವಾದದಲ್ಲಿ ಭಾಗಿಯಾಗಿದ್ದರು. ದಿನೇಶ್ ಅಘಲಯ ಪ್ರತಿಕ್ರಿಯಿಸಿದರು. ನೀ.ಗೂ.ರಮೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭ ಆರಂಭಕ್ಕೂ ಮುನ್ನ ಒಂದು ನಿಮಿಷ ಮೌನಾಚರಿಸಲಾಯಿತು. ಆನಂದ ಎಚ್‌.ಸಿ. ಹೊಸ ಅಗ್ರಹಾರ ನಿರೂಪಿಸಿದರು. ಸಂಧ್ಯಾರಾಣಿ ಎಂ.ಎಸ್.ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು