ಬುಧವಾರ, ಜನವರಿ 22, 2020
18 °C
ವಾಸ್ತು ಮೊರೆ ಹೋದ ಜೆಡಿಎಸ್‌ ಅಭ್ಯರ್ಥಿ

ಉಪಚುನಾವಣೆ| ಹೋಮ-ಹವನ, ವಾಸ್ತುವಿಗೆ ಮೊರೆ ಹೋದ ಅಭ್ಯರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್‌.ಪೇಟೆ:  ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸಿ. ನಾರಾಯಣಗೌಡ ಅವರ ಮನೆಯಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆವರೆಗೂ ಹೋಮ, ಹವನ ಜರುಗಿದವು.

ನಾರಾಯಣಗೌಡರ ಪತ್ನಿ ದೇವಿಕಾ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆದವು. ಬೆಳಿಗ್ಗೆ ಪಟ್ಟಣದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಕುಟುಂಬ ಸಮೇತರಾಗಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಮತಗಟ್ಟೆ
ಯಲ್ಲಿ ಮತ ಹಾಕಿದರು.

ನಾರಾಯಣಗೌಡರು ಚಪ್ಪಲಿ ಬಿಟ್ಟು, ಮತಯಂತ್ರಕ್ಕೆ ನಮಸ್ಕಾರ ಮಾಡಿ ಮತ ಹಾಕಿದ್ದು ವಿಶೇಷವಾಗಿತ್ತು.

ವಾಸ್ತು ಮೊರೆ ಹೋದ ಜೆಡಿಎಸ್‌ ಅಭ್ಯರ್ಥಿ: ಜೆಡಿಎಸ್‌ ಅಭ್ಯರ್ಥಿ ಬಿ.ಎಲ್‌.ದೇವರಾಜು ಅವರ ಹುಟ್ಟೂರು ಬಂಡಿಹೊಳೆ ಮತಗಟ್ಟೆಯಲ್ಲಿ ಬೆಳಿಗ್ಗೆಯೇ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತ್ತು. ಆದರೆ, ದೇವರಾಜು 40 ನಿಮಿಷಗಳವರೆಗೆ ಮತಗಟ್ಟೆ ಮುಂದೆಯೇ ಕಾದು ಕುಳಿತು ಮೊದಲು ಮತ ಚಲಾಯಿಸಿದರು.

ವಾಸ್ತು ಸರಿ ಇಲ್ಲ ಎಂಬ ಕಾರಣ ನೀಡಿ ಮತಯಂತ್ರ ತಿರುಗಿಸಿ ಇಡುವಂತೆ ಚುನಾವಣಾ ಸಿಬ್ಬಂದಿಗೆ ಅವರು ಮನವಿ ಮಾಡಿದರು. ಸಿಬ್ಬಂದಿಯೂ ಅವರ ಮನವಿಯನ್ನು ಪುರಸ್ಕರಿಸಿ ಮತಯಂತ್ರ ತಿರುಗಿಸಿಟ್ಟರು.

ಇದೇ ಮತಗಟ್ಟೆಯ ಸಾಲಿನಲ್ಲಿ ನಿಂತಿದ್ದ ವೃದ್ಧೆಯೊಬ್ಬರು ಬಳಲಿಕೆಯಿಂದ ಕುಸಿದು ಬಿದ್ದರು. ಚುನಾವಣಾ ಸಿಬ್ಬಂದಿ ಅವರನ್ನು ಉಪಚರಿಸಿದರು.

ಮದುಮಗನಿಂದ ಮತದಾನ: ಕೊಮ್ಮೇನಹಳ್ಳಿ ಗ್ರಾಮದ ಮದುಮಗ ಮುತ್ತುರಾಜ್‌ ತಮ್ಮ ವಿವಾಹಕ್ಕೆ ಕೆಲವೇ ನಿಮಿಷ ಮೊದಲು ಚೌಡೇನಹಳ್ಳಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. ಅಪ್ಪನಹಳ್ಳಿ ಗ್ರಾಮದ ಶತಾಯುಷಿ ಸಣ್ಣಮ್ಮ (107) ಮೊಮ್ಮಕ್ಕಳೊಂದಿಗೆಮತಗಟ್ಟೆಗೆ ಬಂದು ಮತ ಹಾಕಿದರು.

ಕೆಬಿಸಿ ಪುತ್ರಿ ಅಸಮಾಧಾನ: ಮತಗಟ್ಟೆ ಸಂಖ್ಯೆ 138ರ ಮತದಾರರ ಪಟ್ಟಿಯ ಕೊನೆಯಲ್ಲಿ ಮತ ಸಂಖ್ಯೆ 1,131 ಎಂದು ನಮೂದಾಗಿತ್ತು. ಆದರೆ ನಿಜವಾಗಿ 1,079 ಹೆಸರುಗಳಿದ್ದವು. ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಪುತ್ರಿ ಅಂಶು, ಈ ದೋಷವನ್ನು ಸರಿಪಡಿಸುವಂತೆ ತಹಶೀಲ್ದಾರ್‌ ಅವರನ್ನು ಕೋರಿದರು. ಈ ವೇಳೆ ಸರಿಪಡಿಸಲು ಸಾಧ್ಯವಿಲ್ಲ ಎಂಬ ಉತ್ತರ ಬಂದಿದ್ದಕ್ಕಾಗಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹಣ ಹಂಚಿಕೆ ವಿಡಿಯೊ ವೈರಲ್‌

(ಮೈಸೂರು ವರದಿ): ಹುಣಸೂರು ವಿಧಾನಸಭಾ ಕ್ಷೇತ್ರದ ಹೊಸರಾಮೇನಹಳ್ಳಿಯಲ್ಲಿ, ಮಹಿಳೆಯೊಬ್ಬರು ಇತರ ನಾಲ್ವರು ಮಹಿಳೆಯರಿಗೆ ಹಣ ಹಂಚುತ್ತಿರುವ ವಿಡಿಯೊ ಗುರುವಾರ ಸ್ಥಳೀಯವಾಗಿ ಹರಿದಾಡಿದೆ.

ಸ್ಕೂಟರ್‌ನಲ್ಲಿ ಬಂದ ಮಹಿಳೆ ಡಿಕ್ಕಿಯಿಂದ ಹಣ ತೆಗೆದು ನಾಲ್ಕು ಮಂದಿಗೆ ಹಂಚುವರು. ಹಣ ಪಡೆದ ಮಹಿಳೆಯರು ಎಣಿಸಿ ತಮ್ಮ ಪರ್ಸ್‌ ಹಾಗೂ ವ್ಯಾನಿಟಿ ಬ್ಯಾಗ್‌ಗೆ ಹಾಕುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಹುಣಸೂರು ವಿಧಾನಸಭೆ ವ್ಯಾಪ್ತಿಯ ಬಿಳಿಕೆರೆಯಲ್ಲೂ ಮತದಾರರಿಗೆ ಹಣ ಹಂಚಿರುವ ಆರೋಪ ಕೇಳಿಬಂದಿದೆ.

ಮತ ಖಾತರಿ: ಯುವಕನ ಬಂಧನ

ಕೆ.ಆರ್‌.ಪೇಟೆ: ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕಿರುವ ಬಗ್ಗೆ ವಿವಿ ಪ್ಯಾಟ್‌ನ ಮತ ಖಾತರಿ ಚಿತ್ರವನ್ನು ಬಹಿರಂಗಗೊಳಿಸಿದ, ತಾಲ್ಲೂಕಿನ ಕರೋಟಿ ಗ್ರಾಮದ ಯುವಕನೊಬ್ಬನನ್ನು ಬಂಧಿಸಲಾಗಿದೆ.

ಕರೋಟಿ ಅನಿಲ್‌ಗೌಡ, ವಿವಿಪ್ಯಾಟ್‌ನಲ್ಲಿ ಬರುವ ಮತ ಖಾತರಿ ಚಿತ್ರವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ನಂತರ ಆ ಚಿತ್ರವನ್ನು ವಾಟ್ಸ್‌ಆ್ಯಪ್‌ ಸ್ಟೇಟಸ್‌, ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದ. ಇದು ಎಲ್ಲೆಡೆ ಹರಿದಾಡುತ್ತಿದ್ದಂತೆ ಚುನಾವಣಾಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು