ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಸಂಪುಟ ಪುನರ್‌ರಚನೆ, ಬಿರುಸುಗೊಂಡ ಲಾಬಿ

ದೆಹಲಿಯಲ್ಲೇ ಬೀಡುಬಿಟ್ಟ ಎಚ್‌.ವಿಶ್ವನಾಥ್‌; ಮೈಸೂರು ಜಿಲ್ಲೆಗೆ ಸಿಗಲಿದೆಯೇ ಸಚಿವ ಸ್ಥಾನ?
Last Updated 19 ಸೆಪ್ಟೆಂಬರ್ 2020, 3:39 IST
ಅಕ್ಷರ ಗಾತ್ರ

ಮೈಸೂರು: ಸಚಿವ ಸಂಪುಟ ಪುನರ್‌ರಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವದೆಹಲಿಯಲ್ಲಿ ಕಸರತ್ತು ಆರಂಭಿಸಿದ ಬೆನ್ನಿನಲ್ಲೇ, ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲು ಬಿಜೆಪಿ ಹಿರಿಯ ಶಾಸಕರ ಲಾಬಿಯೂ ಬಿರುಸುಗೊಂಡಿದೆ.

ಮೈಸೂರು ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂಬ ಕೂಗು ಇದೀಗ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ. ಈ ಭಾಗದ ಶಾಸಕರು ಯಡಿಯೂರಪ್ಪ ನಾಯಕತ್ವಕ್ಕೆ ನಿಷ್ಠೆ ವ್ಯಕ್ತಪಡಿಸಿದ್ದು, ಈ ಅವಧಿಯಲ್ಲಿ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂಬ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬೆಂಬಲವನ್ನು ನೀಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು, ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಪ್ರಮುಖ ಕಾರಣರಾದವರಲ್ಲಿ ಒಬ್ಬರಾದ ಅಡಗೂರು ಎಚ್‌.ವಿಶ್ವನಾಥ್, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರು ಕೂಡ ನವದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ.

ಪಕ್ಷದ ಮುಖಂಡರ ಸಲಹೆಯನ್ನು ಧಿಕ್ಕರಿಸಿ ಹುಣಸೂರು ಉಪ ಚುನಾವಣೆಗೆ ಸ್ಪರ್ಧಿಸಿದ ವಿಶ್ವನಾಥ್ ಪರಾಭವಗೊಂಡಿದ್ದರು. ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಘೋಷಣೆಯಾಗದಿದ್ದಾಗ, ‘ಹಳ್ಳಿಹಕ್ಕಿ’ಯ ರಾಜಕೀಯ ಜೀವನವೇ ಅಂತ್ಯವಾಯಿತು ಎಂಬ ವಿಶ್ಲೇಷಣೆಯೇ ಎಲ್ಲೆಡೆ ಕೇಳಿಬಂದಿತ್ತು.

ಈ ಎಲ್ಲವನ್ನೂ ಹುಸಿಗೊಳಿಸಿದ ವಿಶ್ವನಾಥ್, ಸಾಹಿತ್ಯ ಕೋಟಾದಡಿ ವಿಧಾನಪರಿಷತ್‌ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದರು. ಇದೀಗ ಸಚಿವ ಸ್ಥಾನಕ್ಕಾಗಿ ಲಾಬಿ ಬಿರುಸುಗೊಳಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಟಿಪ್ಪು ಸುಲ್ತಾನ್ ವಿಷಯದಲ್ಲಿ ಎಚ್.ವಿಶ್ವನಾಥ್ ನೀಡಿದ್ದ ಹೇಳಿಕೆಯು ಸಚಿವ ಸ್ಥಾನಕ್ಕೆ ಮುಳುವಾಗಲಿದೆಯಾ? ‘ಬಾಂಬೆ ಡೇಸ್’ ನೆರವಿಗೆ ಬರಲಿದೆಯಾ? ಯಡಿಯೂರಪ್ಪ ಮಾತು ಉಳಿಯಲಿದೆಯಾ? ಎಂಬ ಚರ್ಚೆ ಕಮಲ ಪಾಳೆಯದ ಅಂಗಳದಲ್ಲಿ ಬಿರುಸಿನಿಂದ ನಡೆದಿದೆ. ಬೆಂಬಲಿಗರು, ಆಪ್ತರು ಸಚಿವ ಸ್ಥಾನಕ್ಕಾಗಿ ಲಾಬಿ ಬಿರುಸುಗೊಳಿಸಿದ್ದರೆ, ವಿರೋಧಿಗಳು ತಪ್ಪಿಸಲು ಹರಸಾಹಸ ನಡೆಸಿದ್ದಾರೆ ಎನ್ನಲಾಗಿದೆ.

ಕೊಟ್ಟರೆ ಸಂತೋಷ: ರಾಮದಾಸ್
‘ನಾನೂ ಹಿರಿಯ ಶಾಸಕ. ಸಚಿವ ಸ್ಥಾನ ಕೊಟ್ಟರೆ ಸಂತೋಷದಿಂದ ನಿಭಾಯಿಸುವೆ. ಕೊಡದಿದ್ದರೆ ಶಾಸಕನಾಗಿ ನನ್ನ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವೆ. ಪಕ್ಷ ಸೂಚಿಸಿದ ಜವಾಬ್ದಾರಿ ನಿರ್ವಹಿಸುವೆ’ ಎಂದು ಶಾಸಕ ಎಸ್‌.ಎ.ರಾಮದಾಸ್ ತಿಳಿಸಿದರು.

‘ಮನೆಗೆ ಬಂದ ಅತಿಥಿಗಳಿಗೆ ಊಟ ಬಡಿಸಬೇಕಿತ್ತು. ತಾಯಿ ಆ ಕೆಲಸ ಮಾಡಿದ್ದಾಳೆ. ಇದೀಗ ಮನೆಯ ಮಕ್ಕಳಿಗೂ ಊಟ ಬಡಿಸುವಳು ಎಂಬ ನಿರೀಕ್ಷೆ ನನ್ನದು. ತಾಯಿ ಎಂದಿಗೂ ಅನ್ಯಾಯ ಮಾಡಲ್ಲ ಎಂಬ ನಂಬಿಕೆ ನನಗಿದೆ’ ಎಂದು ಹೇಳಿದರು.

ಸಂಪುಟ ವಿಸ್ತರಣೆ ಕಷ್ಟ
‘ವಿಧಾನ ಮಂಡಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಈ ಹೊತ್ತಲ್ಲಿ ಪುನರ್‌ರಚನೆ, ವಿಸ್ತರಣೆ ನಡೆಯಬಹುದಾ? ಸಾಧ್ಯವಾ? ವಿರೋಧ ಪಕ್ಷಗಳ ವಿರೋಧ ಎದುರಿಸುವುದೋ ಸ್ವಪಕ್ಷೀಯ ಆಂತರಿಕ ಬೇಗುದಿ ನಿವಾರಿಸುವುದೋ ಎಂಬೆಲ್ಲ ಸವಾಲುಗಳಿವೆ. ಆದ್ದರಿಂದ ಸಂಪುಟ ವಿಸ್ತರಣೆ, ಪುನರ್‌ ರಚನೆ ನಡೆಯೋದು ಕಷ್ಟ’ ಎಂದು ಹೆಸರು ಬಹಿರಂಗಗೊಳಿಸಲಿಚ್ಛಿಸದ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT