ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಕಷ್ಟ ಎನಿಸಲಿಲ್ಲ; ಸರಳ–ಸುಲಭ

ಆತಂಕ–ಭಯದಿಂದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಪ್ರವೇಶಿಸಿದರು; ನಿರಾಳರಾಗಿ ಖುಷಿಯಿಂದ ಹೊರಬಂದರು...
Last Updated 19 ಜುಲೈ 2021, 13:13 IST
ಅಕ್ಷರ ಗಾತ್ರ

ಮೈಸೂರು: ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟ ಎಂದೇ ಪರಿಗಣಿಸಲ್ಪಟ್ಟಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಸೋಮವಾರ ಜಿಲ್ಲೆಯಾದ್ಯಂತ ಸುಗಮವಾಗಿ ನಡೆಯಿತು.

ಕೋರ್ ವಿಷಯಗಳಾದ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿದ್ದ 37,536 ವಿದ್ಯಾರ್ಥಿಗಳಲ್ಲಿ, 37,339 ವಿದ್ಯಾರ್ಥಿಗಳು ತಮಗೆ ನಿಗದಿ ಪಡಿಸಿದ್ದ ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿಕೊಂಡು ಪರೀಕ್ಷೆ ಬರೆದರು.

237 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಒಂದೊಂದು ಕೊಠಡಿಯಲ್ಲಿ 10ರಿಂದ 12 ವಿದ್ಯಾರ್ಥಿಗಳಿಗಷ್ಟೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು.

ಬೆಳಿಗ್ಗೆ 8.30ಕ್ಕೆ ಪರೀಕ್ಷಾ ಕೇಂದ್ರಗಳು ಬಾಗಿಲು ತೆರೆದಿದ್ದವು. 10.30ರ ತನಕವೂ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಅವಕಾಶವಿತ್ತು. ಬಹುತೇಕ ಕಡೆ ಪೋಷಕರೇ ತಮ್ಮ ವಾಹನಗಳಲ್ಲಿ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ಪರೀಕ್ಷೆ ಮುಗಿದ ಬಳಿಕ ಜೊತೆಯಲ್ಲೇ ವಾಪಸ್‌ ಮನೆಗೆ ಕರೆದೊಯ್ದ ಚಿತ್ರಣ ಗೋಚರಿಸಿತು.

ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ನಿಯಮ ಪಾಲಿಸಲಾಯಿತು. ಥರ್ಮಲ್‌ ಸ್ಕ್ರೀನಿಂಗ್‌, ಪಲ್ಸ್ ಆಕ್ಸಿಮೀಟರ್‌ ಮೂಲಕ ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ತಪಾಸಣೆ, ಸ್ಯಾನಿಟೈಸರ್‌ ಮೂಲಕ ಕೈ ಸ್ವಚ್ಛಗೊಳಿಸುವಿಕೆ, ಕನಿಷ್ಠ ಅಂತರ ಕಾಪಾಡಿಕೊಳ್ಳುವಿಕೆಯನ್ನು ಕಡ್ಡಾಯಗೊಳಿಸಲಾಗಿತ್ತು.

ಕೆಲವೊಂದು ಪರೀಕ್ಷಾ ಕೇಂದ್ರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಲಾಗಿತ್ತು. ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯ ಪ್ರವೇಶ ದ್ವಾರದಲ್ಲೇ ಬಲೂನ್‌ ಕಟ್ಟಿ ವಿದ್ಯಾರ್ಥಿಗಳಿಗೆ ಅಭೂತಪೂರ್ವ ಸ್ವಾಗತ ಕೋರಲಾಗಿತ್ತು. ಒಳಭಾಗದಲ್ಲೂ ವಿಶೇಷ ಅಲಂಕಾರವಿತ್ತು.

ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ಪರೀಕ್ಷಾ ಕೇಂದ್ರಗಳನ್ನು ತಳಿರು–ತೋರಣದಿಂದ ಅಲಂಕರಿಸಲಾಗಿತ್ತು. ನಂಜನಗೂಡು ತಾಲ್ಲೂಕಿನ ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ಹಬ್ಬದ ವಾತಾವರಣ ಸೃಷ್ಟಿಸಲಾಗಿತ್ತು. ಪೊಲೀಸ್‌ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿತ್ತು. 200 ಮೀಟರ್‌ ಸುತ್ತಳತೆ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಿದ್ದು ಕಂಡು ಬಂದಿತು.

ಬೆಳಿಗ್ಗೆ ಪರೀಕ್ಷೆಯ ಆತಂಕ ಹಾಗೂ ಕೋವಿಡ್‌ನ ಭಯದಿಂದಲೇ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಅಸಂಖ್ಯಾತ ವಿದ್ಯಾರ್ಥಿಗಳು, ಮಧ್ಯಾಹ್ನ ಖುಷಿ ಖುಷಿಯಿಂದ ಮನೆಗೆ ಮರಳಿದರು. ಸ್ನೇಹಿತರೊಟ್ಟಿಗೆ ಪರೀಕ್ಷೆಯ ಸಂಭ್ರಮವನ್ನು ಹಂಚಿಕೊಂಡರು. ತಮಗಾಗಿ ಪರೀಕ್ಷಾ ಕೇಂದ್ರದ ಹೊರಭಾಗದಲ್ಲಿ ಕಾತರದಿಂದ ಕಾದಿದ್ದ ಪೋಷಕರೊಟ್ಟಿಗೂ ಪರೀಕ್ಷೆ ಬರೆದ ಖುಷಿಯನ್ನು ವಿನಿಮಯ ಮಾಡಿಕೊಂಡು ಸಂತಸಪಟ್ಟರು.

ಪರೀಕ್ಷೆ ಆರಂಭಕ್ಕೂ ಮುನ್ನ ಸಂಘ–ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಪರೀಕ್ಷಾ ಕೇಂದ್ರಗಳ ಮುಂಭಾಗ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಶುಭ ಹಾರೈಸಿದರು. ಕೆಲವರು ಮಾಸ್ಕ್‌ ವಿತರಿಸಿದರು. ಸ್ಯಾನಿಟೈಸರ್‌ ಹಾಕಿದ ಚಿತ್ರಣವೂ ಕಂಡು ಬಂದಿತು.

ನೂರಕ್ಕೆ ನೂರು...
‘ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯದ ಪರೀಕ್ಷೆಯೇ ಸರಳ–ಸುಲಭವಾಗಿತ್ತು ಎಂದರೇ, ಭಾಷಾ ವಿಷಯದ ಪರೀಕ್ಷೆಯ ಆತಂಕವಿಲ್ಲ. ಸುಲಭವಾಗಿ ಬರೆಯುತ್ತೇವೆ. ನೂರಕ್ಕೆ ನೂರು ಖಚಿತ’ ಎಂದು ಸದ್ವಿದ್ಯಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಮಾ ‘ಪ್ರಜಾವಾಣಿ’ ಬಳಿ ವಿಶ್ವಾಸ ವ್ಯಕ್ತಪಡಿಸಿದರು.

‘ಪರೀಕ್ಷಾ ಕೇಂದ್ರಕ್ಕೆ ಬರುವಾಗ ಭಯವಿತ್ತು. ಒಎಂಆರ್‌ ಶೀಟ್‌ ಕೈಗೆ ಸಿಕ್ಕ ಬಳಿಕ ಎಲ್ಲಿಯೂ ಕಷ್ಟ ಎನಿಸಲಿಲ್ಲ. ನಮ್ಮಲ್ಲಿದ್ದ ಭಯವೇ ಮಾಯವಾಯಿತು’ ಎಂದು ವಿದ್ಯಾರ್ಥಿನಿ ಎಸ್‌.ಪೂರ್ವಿ ತಿಳಿಸಿದರು.

‘ಎರಡು ತಿಂಗಳಷ್ಟೇ ಶಾಲೆಗೆ ಹೋಗಿದ್ದು. ಉಳಿದಿದ್ದೆಲ್ಲವೂ ಆನ್‌ಲೈನ್‌. ಸಾಕಷ್ಟು ತಯಾರಿ ನಡೆಸಿದ್ದರಿಂದ ಸಮಸ್ಯೆಯಾಗಲಿಲ್ಲ. ಶಾಲೆಯ ಶಿಕ್ಷಕ ವರ್ಗವೂ ನಮಗೆ ಸಾಥ್‌ ನೀಡಿತ್ತು’ ಎಂದು ವಿದ್ಯಾರ್ಥಿನಿ ಬಿ.ಗಾನವಿ ಹೇಳಿದರು.

‘ಮೊದಲ ಬಾರಿಗೆ ಒಎಂಆರ್‌ ಶೀಟ್‌ ಬಳಸಿದೆವು. ಮೂರು ಗಂಟೆ ಅವಧಿಯಲ್ಲಿ ಎಲ್ಲದಕ್ಕೂ ಉತ್ತರಿಸಿದೆವು. ನೇರ ಪ್ರಶ್ನೆಗೆ ನೇರ ಉತ್ತರ. ಪರೀಕ್ಷೆ ತುಂಬಾ ಸುಲಭವಾಗಿತ್ತು’ ಎಂದು ವಿದ್ಯಾರ್ಥಿ ವಿಶ್ವಾಸ ತಿಳಿಸಿದರು.

ಕೋವಿಡ್‌ ಕೇರ್‌ನಲ್ಲಿ ಪರೀಕ್ಷೆ
ಕೆ.ಆರ್‌.ನಗರ ತಾಲ್ಲೂಕಿನ ಖಾಸಗಿ ಅಭ್ಯರ್ಥಿ ಸಿ.ಪ್ರಸನ್ನ (40) ಎಂಬುವರು ಮಂಡಕಳ್ಳಿಯ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಪರೀಕ್ಷೆ ಬರೆದರು.

‘ಭಾನುವಾರವೇ ಆಂಬುಲೆನ್ಸ್‌ ಮೂಲಕ ಮಂಡಕಳ್ಳಿಯ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಾಗಿದ್ದರು. ನಮ್ಮ ಇಲಾಖೆಯ ಅಧಿಕಾರಿಯೊಬ್ಬರನ್ನು ಅಲ್ಲಿಗೆ ನಿಯೋಜಿಸಿದ್ದೇವೆ. ಅಲ್ಲಿನ ವೈದ್ಯರು, ನರ್ಸ್‌ ಸಹಾಯದಿಂದ ಪರೀಕ್ಷೆ ಬರೆಸಿದ್ದೇವೆ’ ಎಂದು ಡಿಡಿಪಿಐ ಡಾ.ಪಾಂಡುರಂಗ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುರುವಾರದವರೆಗೂ ಅವರು ಕೋವಿಡ್‌ ಕೇರ್‌ ಸೆಂಟರ್‌ನಲ್ಲೇ ಇರುತ್ತಾರೆ. ಭಾಷಾ ವಿಷಯದ ಪರೀಕ್ಷೆ ಬರೆದ ಬಳಿಕ ಊರಿಗೆ ಮರಳುತ್ತಾರೆ’ ಎಂದು ಅವರು ಹೇಳಿದರು.

‘ಒಂದು ಸಾವಿರಕ್ಕೂ ಹೆಚ್ಚು ಖಾಸಗಿ ಅಭ್ಯರ್ಥಿಗಳು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ. ಅಂಧ ವಿದ್ಯಾರ್ಥಿಗಳು, ಶ್ರವಣ ದೋಷವುಳ್ಳವರು ಈ ಬಾರಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆದಿದ್ದಾರೆ’ ಎಂದು ಡಿಡಿಪಿಐ ಮಾಹಿತಿ ನೀಡಿದರು.

ಮೈಸೂರು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದವರ ಚಿತ್ರಣ

37,536:ಪರೀಕ್ಷೆಗೆ ನೋಂದಾಯಿಸಿದ್ದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ

37,339:ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ

197:ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ

237:ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ

9:ಅನಾರೋಗ್ಯ ಕಾರಣದಿಂದ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

1:ಕೋವಿಡ್ ಪಾಸಿಟಿವ್ ಎಂದು ಗುರುತಿಸಲ್ಪಟ್ಟು ಕೋವಿಡ್ ಕೇರ್ ಸೆಂಟರ್‌ನಲ್ಲಿ ಪರೀಕ್ಷೆ ಬರೆದ ಖಾಸಗಿ ವಿದ್ಯಾರ್ಥಿ

5:ಸರ್ಕಾರಿ ವಸತಿ ನಿಲಯಗಳಲ್ಲಿದ್ದು, ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ

242:ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡು ಪರೀಕ್ಷೆ ಬರೆದ ವಲಸೆ ವಿದ್ಯಾರ್ಥಿಗಳ ಸಂಖ್ಯೆ

ಆಧಾರ: ಸಾರ್ವಜನಿಕ ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT