ಶನಿವಾರ, ಜೂನ್ 25, 2022
25 °C

ಪಠ್ಯಪುಸ್ತಕ ಪರಿಷ್ಕರಣ ಸಮಿತಿ ವಿಸರ್ಜಿಸಿ: ಬಿಜೆಪಿ ಮುಖಂಡ ಎಚ್‌. ವಿಶ್ವನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯನ್ನು ವಿಸರ್ಜಿಸಿ, ಹಳೆಯ ಪಠ್ಯಕ್ರಮವನ್ನೇ ಮುಂದುವರಿಸಬೇಕು. ಮುಂದಿನ ವರ್ಷ ಹೊಸ ಪಠ್ಯಕ್ರಮವನ್ನು ವೈಜ್ಞಾನಿಕವಾಗಿ ರೂಪಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್ ಒತ್ತಾಯಿಸಿದರು.

‘ಶಾಲಾ ಶಿಕ್ಷಣವನ್ನು ಕೇಸರೀಕರಣ ಮಾಡಲೆಂದು ಬಿಜೆಪಿಗೆ ಅಧಿಕಾರ ಕೊಡಲಿಲ್ಲ. ಮುದ್ರಣಗೊಂಡಿರುವ ಪಠ್ಯಪುಸ್ತಕಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಹಿಂಪಡೆಯಬೇಕು. ಅದಕ್ಕಾಗಿ ₹ 35 ಕೋಟಿ ನಷ್ಟವಾದರೂ ಪರವಾಗಿಲ್ಲ, ಹಣಕ್ಕಿಂತ ಮಕ್ಕಳ ಮನಸ್ಸು ಮುಖ್ಯ’ ಎಂದು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.

‘ರೋಹಿತ್ ಚಕ್ರವರ್ತಿ ಪ್ರಾಧ್ಯಾಪಕ ಅಲ್ಲ. ಒಬ್ಬ ಖಾಸಗಿ ತರಬೇತುದಾರ. ಆತನೊಂದಿಗೆ ಇರುವ 9 ಮಂದಿಯಲ್ಲಿ 8 ಮಂದಿ ಒಂದೇ ಜಾತಿಗೆ ಸೇರಿದವರು. ಸಮಿತಿಯನ್ನು ಸುರೇಶ್‌ಕುಮಾರ್ ರಚಿಸಿದ್ದರು. ಈಗಿನ ಸಚಿವ ನಾಗೇಶ್ ಅವರಿಗೆ, ಪಾಪ, ಏನೂ ಅರ್ಥವಾಗುತ್ತಿಲ್ಲ’ ಎಂದು ಲೇವಡಿ ಮಾಡಿದರು.

‘ಬರಗೂರು ರಾಮಚಂದ್ರಪ್ಪ ಅಧ್ಯಕ್ಷರಾಗಿದ್ದಾಗ 27 ಉಪಸಮಿತಿಗಳಿದ್ದವು. ಈಗ 9 ಸದಸ್ಯರಿದ್ದಾರೆ. ಅವರ ಶೈಕ್ಷಣಿಕ ಹಿನ್ನೆಲೆಯೂ ಗೊತ್ತಿಲ್ಲ. ಜತೆಗೆ, ಒಬ್ಬ ಮಹಿಳೆಯೂ ಇಲ್ಲ. ಸಮಿತಿ ಜನತಾಂತ್ರಿಕವಾಗಿಲ್ಲ. ಕುವೆಂಪು, ಪಿ.ಲಂಕೇಶ್ ಅವರನ್ನು ಬಿಟ್ಟು ಚಕ್ರವರ್ತಿ ಸೂಲಿಬೆಲೆಯನ್ನು ಮಕ್ಕಳು ಓದಬೇಕಿದೆ. ದೇವನೂರ ಮಹಾದೇವ ಅವರೊಂದಿಗೆ ಮಾತನಾಡುವೆ ಎಂದು ಶಿಕ್ಷಣ ಸಚಿವರು ಹೇಳುತ್ತಾರೆ. ಇದೇನು ಪಂಚಾಯಿತಿ ನ್ಯಾಯವೇ’ ಎಂದು ಪ್ರಶ್ನಿಸಿದರು.

‘ಪಂಜಾಬ್ ಆರೋಗ್ಯ ಸಚಿವ ಒಂದು ಪರ್ಸೆಂಟ್ ಲಂಚ ಕೇಳಿದರು ಎಂದು ಜೈಲಿಗೆ ಕಳಿಸಲಾಗಿದೆ. ನಮ್ಮಲ್ಲಿ ಶೇ 40ರಷ್ಟು ಕಮಿಷನ್ ಎಂಬ ಆರೋಪವಿದೆ. ನಂಬಿಕೆಯೇ ಹೋಗುತ್ತಿರುವ ಸಂದರ್ಭದಲ್ಲಿ ನಂಬಿಕೆಯ ಆಶಾಕಿರಣ ಮೂಡಿಸಿರುವುದಕ್ಕೆ ಅರವಿಂದ ಕೇಜ್ರಿವಾಲ್ ಅವರಿಗೆ ಅಭಿನಂದನೆ’ ಎಂದು ಹರಿಹಾಯ್ದರು.

‘ವಿಜಯೇಂದ್ರ ಅವರಿಗೆ ಟಿಕೆಟ್ ಸಿಗದೇ ಇದ್ದುದರಿಂದ ಪಕ್ಷಕ್ಕೆ ಒಳ್ಳೆಯದಾಗಿದೆ. ಅವರೊಬ್ಬರು ಇಲ್ಲ ಎಂದರೆ ಪಕ್ಷವೇನು ಮುಳುಗಿ ಹೋಗಲ್ಲ. ನಿಜಕ್ಕೂ ಅವರಿಗೆ ಶಕ್ತಿ ಇದ್ದರೆ ಸಿದ್ದರಾಮಯ್ಯ ವಿರುದ್ಧ ಗೆದ್ದು ಬರಲಿ’ ಎಂದು ಸವಾಲೆಸೆದರು.

‘ದುರ್ಯೋಧನ, ದುಶ್ಯಾಸನರಂತಹವರಿಗೆ ಪಾಠ ಕಲಿಸಲೆಂದು ನಾವು ವಿವಿಧ ಪಕ್ಷಗಳಿಂದ ಹೊರ ಬಂದೆವು. ಈಗ ಜನರು ತಪ್ಪು ಮಾಡಿದಿರಿ ಎನ್ನುತ್ತಿದ್ದಾರೆ. ಇದು ಪಶ್ಚಾತ್ತಾಪವೋ, ತಾಪವೋ ಎಂಬುದು ಮುಂದೆ ಗೊತ್ತಾಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು