ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶಿ ಕಾರಿಡಾರ್: ಅಹಲ್ಯಾ ಹೋಲ್ಕರ್‌ ಮರೆತ ಸರ್ಕಾರ

Last Updated 13 ಡಿಸೆಂಬರ್ 2021, 13:45 IST
ಅಕ್ಷರ ಗಾತ್ರ

ಮೈಸೂರು: ‘ವಾರಾಣಾಸಿಯಲ್ಲಿ‌ ಸೋಮವಾರ ಕಾಶಿ ವಿಶ್ವನಾಥ ದೇವಾಲಯದ ಉದ್ಘಾಟನೆ ವೇಳೆ, ದೇವಸ್ಥಾನವನ್ನು ಪುನರ್ ನಿರ್ಮಿಸಿದ್ದ ಇಂದೋರ್‌ನ ರಾಣಿ ಅಹಲ್ಯಾಬಾಯಿ ಹೋಲ್ಕರ್ ಅವರನ್ನೇ ಕೇಂದ್ರ ಸರ್ಕಾರ‌ ಮರೆತಿದ್ದು ಪ್ರಮಾದ’ ಎಂದು‌ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

’ಕ್ರೈಸ್ತರಿಗೆ ವ್ಯಾಟಿಕನ್, ಮುಸಲ್ಮಾನರಿಗೆ ಮೆಕ್ಕಾ ಇದ್ದಂತೆ ಹಿಂದೂಗಳಿಗೆ ಕಾಶಿ ಪವಿತ್ರ ಸ್ಥಳ. ಉತ್ತರ ಪ್ರದೇಶದಲ್ಲಿ ಒಂದೂವರೆ ಕೋಟಿ ಕುರುಬರಿದ್ದಾರೆ. ಶಿವನ‌ ಹೆಸರಿನಲ್ಲೇ ಆಡಳಿತ ನಡೆಸಿ ದೇಶದಲ್ಲಿ ಹಿಂದೂ ಧ್ವಜವನ್ನು ಮೊದ‌ಲು ಹಾರಿಸಿದ್ದವರು ಅಹಲ್ಯಾ ಬಾಯಿ. ಕುರುಬ ಜನಾಂಗದವರಾದ ಅವರನ್ನು ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮರೆತಿರುವುದು ಚರಿತ್ರೆಯನ್ನು ಮುಚ್ಚಿ ಹಾಕುವ ಪ್ರಯತ್ನ’ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಕುರುಬರು ನಿಮಗೆ ಅಪಥ್ಯವಾಗುತ್ತಿದ್ದಾರೆಯೆ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಇದು ನೆನಪಾಗಲಿಲ್ಲವೇ?’ ಎಂದು ತಮ್ಮ ಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು.

’ಕಾಶಿಯಲ್ಲಿ ಅಹಲ್ಯಾ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು. ವಾರಾಣಸಿ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡಬೇಕು’ ಎಂದು ಆಗ್ರಹಿಸಿದರು.

‘ನಮ್ಮದೂ ದೊಡ್ಡ ಮಠವೇ ಸ್ವಾಮಿ. ರಾಜ್ಯದಲ್ಲಿ ನಾಲ್ಕು ಕಡೆ ಮಠಗಳಿವೆ. ಕಾಗಿನೆಲೆ ಪಕ್ಕಾ ಹಿಂದೂಗಳ ಮಠ. ಮೊದಲ ಸ್ವಾಮೀಜಿ ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮೀಜಿ ಪಕ್ಕಾ ಆರ್‌ಎಸ್‌ಎಸ್‌ನವರು. ಅಂಥವರನ್ನೇ ಮರೆತಿದ್ದೀರಾ’ ಎಂದು‌ ಪ್ರಶ್ನಿಸಿದರು.

’ರಾಜ್ಯದಲ್ಲಿ ಪ್ರತಿಪಕ್ಷವೇ ಇಲ್ಲ. ಸಿದ್ದರಾಮಯ್ಯ ಅವರು ಬಿ.ಬಿ.ಚಿಮ್ಮನಕಟ್ಟಿ, ಎಚ್.ಎಂ.ರೇವಣ್ಣ ಅವರ ಮನೆ ಹಾಳು ಮಾಡಿದರು. ಮೈಸೂರಿನ ಮಹಾರಾಜರು ಖಡ್ಗ ಹಿಡಿದು ಹೋರಾಡಿದ್ದರೆ, ಸಿದ್ದರಾಮಯ್ಯ ಬೊಗಳೆ ಬಿಟ್ಟುಕೊಂಡು ಹೋರಾಟದ‌ ಮಾತನಾಡುತ್ತಿದ್ದಾರೆ’ ಎಂದು ಲೇವಡಿ‌ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT