ಶನಿವಾರ, ಅಕ್ಟೋಬರ್ 19, 2019
27 °C
ದಸರಾ ಕವಿಗೋಷ್ಠಿಯ ವಿಸ್ಮಿತ ವಿಭಾಗದಲ್ಲಿ 15 ಕವಿಗಳಿಂದ ವಾಚನ

ಸ್ವಸ್ಥ ಸಮಾಜದ ಕಳಕಳಿಯ ಮಾರ್ದನಿ...

Published:
Updated:
Prajavani

ಮೈಸೂರು: ಜಗನ್ಮೋಹನ ಅರಮನೆಯ ಗೋಡೆಗಳಿಗೆ ಅಪ್ಪಳಿಸಿದ ಕವಿತೆಗಳು ಅಲೆ ಅಲೆಯಾಗಿ ಸಹೃದಯಿಗಳ ಕರ್ಣಗಳಿಗೆ ಮುದ ನೀಡುತ್ತಿದ್ದವು. ಒಂದೊಂದು ಕವನಗಳೂ ವಾಸ್ತವ ಸಂಗತಿಗಳನ್ನು ಅನಾವರಣಗೊಳಿಸಿದವು. ಬದುಕು, ಜೀವನ, ವೃತ್ತಿ, ಸಂಬಂಧ, ಪ್ರೀತಿ, ಕನ್ನಡ ನಾಡು–ನುಡಿ, ಗಾಂಧೀಜಿ, ಬೆಳಕು, ಸಾಮಾಜಿಕ ಕಳಕಳಿ ಕವನ ವಸ್ತುಗಳಾಗಿ ಸ್ವಸ್ಥ ಸಮಾಜದ ಕುರಿತ ಕಳಕಳಿಯನ್ನು ಪ್ರೇಕ್ಷಕರಲ್ಲಿ ಎಚ್ಚರಗೊಳಿಸಿದವು.

ದಸರಾ ಕವಿಗೋಷ್ಠಿ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಪಂಚ ಕವಿಗೋಷ್ಠಿಯ ವಿಸ್ಮಿತ ವಿಭಾಗದಲ್ಲಿ 15 ಕವಿಗಳು ಕವನ ವಾಚಿಸಿದರು.

ಗಾಂಧಿಜಯಂತಿಯ ಸಂದರ್ಭದಲ್ಲಿ ‘ಗಾಂಧಿ ತಾತ’ ಕವನದ ಮೂಲಕ ಕವಿಗೋಷ್ಠಿಗೆ ಆರಂಭಿಸಿದ ಅಂಶಿ ಪ್ರಸನ್ನಕುಮಾರ್‌, ಇಂದಿನ ರಾಜಕಾರಣಿಗಳ ಕುರಿತು ವಿಂಡಂಬನೆ ಮಾಡಿದರು. ‘ನೀ ಹೇಳಿ ಹೋಗಿದ್ದು ಇದೇ ಏನು ತಾತಾ? ಎಲ್ಲಿ ನಡೆಸಿದರು ನಿನ್ನ ಮಾತ? ಎಲ್ಲರಿಗೂ ಹಿಡಿದಿದೆ ಸ್ವಾರ್ಥದ ಭೂತ...’ ಎಂಬ ಸಾಲುಗಳ ಮೂಲಕ ವಾಸ್ತವಕ್ಕೆ ಕನ್ನಡಿ ಹಿಡಿದರು.

‘ಇನ್ನೆಲ್ಲಿಯ ಸೂರು’ ಎಂಬ ಶೀರ್ಷಿಕೆಯ ಕವನದ ಮೂಲಕ ಅಕ್ಷತಾ ಅವರು, ಪ್ರವಾಹ ಪರಿಸ್ಥಿತಿಯಿಂದ ಧಾರಿಣಿಯಲ್ಲಿ ಉಂಟಾದ ಅನಾಹುತಗಳ ಬಗ್ಗೆ, ನಿರಾಶ್ರಿತರ ಕೇಂದ್ರಗಳಲ್ಲಿ ಅನುರಣಿಸುತ್ತಿದ್ದ ನೋವನ್ನು ವಿವರಿಸಿದರು.

ಬಿ.ಟಿ.ಕವಿತಾ, ‘ಸ್ವಗತ’ ಕವನದಲ್ಲಿ ಸ್ವಾಭಿಮಾನದ ಹಣತೆಯನ್ನು ಹಚ್ಚುವಂತೆ, ಸಮಾಜದಲ್ಲಿ ಆತ್ಮವಿಶ್ವಾಸದ ಹೆಜ್ಜೆ ಇರಿಸಬೇಕಾದ ಅಗತ್ಯವನ್ನು ಮಾರ್ಮಿಕವಾಗಿ ತಿಳಿಸಿದರು.

ರಾಮ್ ಹಾಗೂ ಗಣೇಶ ಅಮೀನಗಡ ಅವರು ಪತ್ರಕರ್ತರ ಕುರಿತು ಕವನ ವಾಚಿಸಿದರು. ಕನ್ನಡ–ನಾಡು, ನುಡಿಯ ಕುರಿತು ಕನ್ನಡ ನಾಡಿನ ಹಿರಿಮೆ ಸಾರಿದವರು ಚಂದನ್‌ ಕುಮಾರ್‌ ಆಸ್ವಾಳ್‌. ಅವರು ‘ಕನ್ನಡಾಂಬೆ’ ಕವನ ಓದಿದರು. ಜಿ.ಕೆ.ರವೀಂದ್ರ ಕುಮಾರ್‌, ‘ಜೊತೆಗಷ್ಟು ಜೀವನ’ ಕವಿತೆಗೆ ಧ್ವನಿಯಾದರು.

ಬದುಕಿನಲ್ಲಿ ಸಾವಿನ ಅನಿವಾರ್ಯತೆ, ಅಂತಿಮ ಯಾತ್ರೆ, ಅಶ್ರುತರ್ಪಣ... ಜೀವನಕ್ಕೆ ಹಿಡಿದಿರುವ ದರ್ಪಣ... ಎಂದು ಡಾ.ಲೋಕೇಶ್ ಅವರು ‘ಮಸಣಯಾತ್ರೆ’ ಕವಿತೆ ಮೂಲಕ ಜೀವನದ ಕುರಿತು ಕವಿತೆ ಕಟ್ಟಿದರು.

ಸತ್ಯದ ಪ್ರತಿಪಾದಕ ಗಾಂಧೀಜಿ ಹಲವರ ಕಣ್ಣಲ್ಲಿ ಕಂಡ ಬಗೆಯನ್ನು ಅಕ್ಷರಗಳ ಮೂಲಕ ಹೆಣೆದು ‘ಬಾಪು’ ಹೆಸರಿನಲ್ಲಿ ಡಾ.ಆರ್.ಶಿವಪ್ಪ ಕವಿತೆ ವಾಚಿಸಿದರು.

ವೃತ್ತಿಯ ಕುರಿತು ಕವನ ಕಟ್ಟಿದ ಡಾ.ಸತೀಶ್‌ ಕುಮಾರ್‌ ಎಸ್.ಹೊಸಮನಿ, ಗ್ರಂಥಾಲಯದ ಮಹತ್ವವನ್ನು ‘ಗ್ರಂಥಾಲಯ’ ಕವನದ ಮೂಲಕ ಸಾರಿದರು.

ಕೃಷ್ಣನ ಕೊಳಲಿನ ಕುರಿತು ಕವನ ಕಟ್ಟಿದವರು ದಿಲೀಪ್‌. ಸಮಾಜದಲ್ಲಿ ವಿಷ ಬೀಜ ಬಿತ್ತುವವರನ್ನು ಖಂಡಿಸುತ್ತಾ ಪ್ರೀತಿ, ಮಮತೆಯ ಚುಗುರೊಡೆಯುವಂಥ ಬೆಳದಿಂಗಳನ್ನು ‘ಬಾರಯ್ಯ ಬೆಳದಿಂಗಳೇ’ ಕವಿತೆ ಮೂಲಕ ಯಶ್ವಂತ್ ಕೂರ್ಗಳ್ಳಿ ಆಹ್ವಾನಿಸಿದರು.

‘ರಸಋಷಿಗೆ ನಮನ’ ಕವನದ ಮೂಲಕ ರಘು ದಿಡ್ಡಳ್ಳಿ ಅವರು ಕುವೆಂಪು ಅವರನ್ನು ನೆನೆದರು. ರವಿಪ್ರಸಾದ್‌ ಅವರು ನಿರಶನ ಕವಿತೆ ಮೂಲಕ ಆಸೆಯ ಬಗ್ಗೆ, ಸಮಾಜದಲ್ಲಿನ ಕೊಳಕು ಮನಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದರು. ಕೆ.ಶೋಭಾ ಅವರು ಕವಿತೆಗೆ ಧ್ವನಿಯಾದರು. ಸದಾನಂದ ಯಳಗಂಟಿ ಅವರು ನೆರೆ ಬಂದು ಮುಳುಗಡೆಯಾದ ಸನ್ನಿವೇಶಕ್ಕೆ ಕವನದ ರೂಪ ನೀಡಿದರು.

ಕವಿ ಜೋಗಿ ಮಾತನಾಡಿ, ಸಮಾಜಮುಖಿಯಾದ ಕಾವ್ಯಗಳು ಹುಟ್ಟಬೇಕು. ಕವಿಗಳು ಸಂವೇದನಶೀಲ ಪದ್ಯ ಬರೆಯಬೇಕು ಎಂದರು.

ಕನ್ನಡ ಭಾಷೆಯ ಶ್ರೇಷ್ಠತೆಯ ಬಗ್ಗೆ ಪ್ರಸ್ತಾಪಿಸಿದ ಅವರು, ಇಂಗ್ಲಿಷ್‌ ಅನ್ನು ಸಂವಹನ ಭಾಷೆ ಎಂದಷ್ಟೇ ಹೇಳಬಹುದು. ಇಂಗ್ಲಿಷ್‌ನಲ್ಲಿ ಬರೆದ ಕವನ ಈ ನಾಡಿನ ಕವನವಾಗಲು ಸಾಧ್ಯವಾಗದು. ಈ ಕಾರಣದಿಂದ ಕನ್ನಡದ ಕವಿಗಳು ಬಹಳ ಮುಖ್ಯ ಎಂದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ ಅಧ್ಯಕ್ಷತೆ ವಹಿಸಿದ್ದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ದಸರಾ ಕವಿಗೋಷ್ಠಿಯ ಉಪ ವಿಶೇಷಾಧಿಕಾರಿ ಬಿ.ಮಂಜುನಾಥ್‌, ಕಾರ್ಯಾಧ್ಯಕ್ಷೆ ಡಾ.ಎನ್‌.ಕೆ.ಲೋಲಾಕ್ಷಿ, ಕಾರ್ಯದರ್ಶಿ ಸಿ.ಆರ್‌.ಕೃಷ್ಣಕುಮಾರ್‌, ಪಾಲಿಕೆ ಸದಸ್ಯೆ ಪ್ರಮೀಳಾ ಭರತ್‌ ಇದ್ದರು.

Post Comments (+)