ಬುಧವಾರ, ಆಗಸ್ಟ್ 10, 2022
24 °C
ಅಮಾನ್ಯ ಆದಾಯ ‍ಪ್ರಮಾಣಪತ್ರದಿಂದ ತೊಂದರೆ

ಸಿಇಟಿ: ಅಸಲಿ ದಾಖಲೆ ಹೊಂದಿರಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಕೆ–ಸಿಇಟಿ ಕೌನ್ಸೆಲಿಂಗ್‌ಗೆ ಅಸಲಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಧಿಸೂಚನೆಗಳನ್ನು ಗಮನಿಸಲು ಜಾಲತಾಣಕ್ಕೆ ಆಗಾಗ ಭೇಟಿ ನೀಡುತ್ತಿರಬೇಕು’ ಎಂದು ಸಿಇಟಿ ಕೋಶದ ತಜ್ಞ ಉದಯ್ ಶಂಕರ್ ಹೇಳಿದರು.

ನಗರದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ‘ಓಪನ್ ಡೇ–2022’ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ನಿಯಮಿತ ಮತ್ತು ದೈನಂದಿನ ಅಪ್‌ಡೇಟ್‌ಗಳಿಗಾಗಿ ಪೋಷಕರು ಹಾಗೂ ವಿದ್ಯಾರ್ಥಿಗಳು ಕೆಇಎ ಜಾಲತಾಣ ವೀಕ್ಷಿಸುವುದು ಬಹಳ ಮುಖ್ಯವಾಗುತ್ತದೆ. ಇದು ಪ್ರಕ್ರಿಯೆ ಸುಗಮವಾಗಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಾಹಿತಿ ಕೊರತೆಯಿಂದಾಗಿ ವಿದ್ಯಾರ್ಥಿಗಳು ತಮ್ಮ ಸೀಟುಗಳನ್ನು ಕಳೆದುಕೊಳ್ಳುವುದು ಸೇರಿದಂತೆ ಹಲವು ಅನಾನುಕೂಲತೆಗಳನ್ನು ಉಂಟಾದ ಅನೇಕ ನಿದರ್ಶನಗಳಿವೆ. ಇದಕ್ಕೆ ಅವಕಾಶ ಆಗದಂತೆ ನೋಡಿಕೊಳ್ಳಬೇಕು’ ಎಂದರು.

‘ಸಿಇಟಿ ಫಲಿತಾಂಶ ಪ್ರಕಟವಾದ ನಂತರ ಎನ್‌ಸಿಸಿ, ಎನ್ಎಸ್‌ಎಸ್‌, ಕ್ರೀಡೆ, ಸೇನೆ, ಸ್ಕೌಟ್ಸ್‌ ಮತ್ತು ಗೈಡ್ಸ್ ಅಡಿಯಲ್ಲಿ ಸೀಟುಗಳಿಗೆ ಅರ್ಜಿ ಸಲ್ಲಿಸುವವರಿಗೆ, ವಿಶೇಷ ವರ್ಗದ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಪ್ರಾರಂಭವಾಗುತ್ತದೆ. ಆಗ ಎಲ್ಲ ಮೂಲ ಪ್ರಮಾಣಪತ್ರಗಳನ್ನೂ ಸಲ್ಲಿಸಬೇಕು. ಅವುಗಳನ್ನು ಬೆಂಗಳೂರಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಅದನ್ನು ಪರಿಶೀಲನೆಗಾಗಿ ಆಯಾ ಇಲಾಖೆಗಳಿಗೆ ಕಳುಹಿಸಲಾಗುತ್ತದೆ. ಇಲಾಖೆಯಿಂದ ಅನುಮೋದನೆ ಪಡೆದ ನಂತರ ಅವರು ದಾಖಲೆಗಳ ಪರಿಶೀಲನೆಗೆ ಬರುವ ಮೊದಲು ಅದನ್ನು ಆನ್‌ಲೈನ್‌ನಲ್ಲಿ ನಮೂದಿಸಲಾಗುತ್ತದೆ’ ಎಂದು ವಿವರಿಸಿದರು.

ಪಾಲಕರು, ವಿದ್ಯಾರ್ಥಿಗಳಿಗೆ ಸಲಹೆ:

‘ದಾಖಲೆ ಪರಿಶೀಲನೆಗೆ ಬರುವ ವಿದ್ಯಾರ್ಥಿಗಳು ಕಾಲೇಜಿನಲ್ಲಿ ನೀಡಿದ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪ್ರಾಂಶುಪಾಲರು ಮತ್ತು ಡಿಡಿಪಿಯು ದೃಢೀಕರಿಸಿದ ಪಿಯು ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಬಿಇಒ ಸಹಿ ಇರುವ ವ್ಯಾಸಂಗ ಪ್ರಮಾಣಪತ್ರ ಹಾಗೂ ಗ್ರಾಮೀಣ ವ್ಯಾಸಂಗ ‍ಪ್ರಮಾಣಪತ್ರ ಹೊಂದಿರಬೇಕು. ಆಗ ಪರಿಶೀಲನೆ ಸಮಯದಲ್ಲಿ ತೊಂದರೆ ಆಗುವುದಿಲ್ಲ. ನಾವು ಎದುರಿಸುವ ಇತರ ಸಾಮಾನ್ಯ ಸಮಸ್ಯೆ ಎಂದರೆ ಆದಾಯ ಪ್ರಮಾಣಪತ್ರದ್ದು. ಪಾಲಕರು ಮತ್ತು ವಿದ್ಯಾರ್ಥಿಗಳು ಆದಾಯ ಪ್ರಮಾಣಪತ್ರಗಳನ್ನು ಪರಿಶೀಲಿಸಿಕೊಳ್ಳಬೇಕು. ಹೆಚ್ಚಿನ ಜಾತಿ ಪ್ರಮಾಣಪತ್ರಗಳು ಜೀವಿತಾವಧಿಯಲ್ಲಿ ಮಾನ್ಯವಾಗಿದ್ದರೂ ಅದು ಆದಾಯ ಪ್ರಮಾಣಪತ್ರಕ್ಕೆ ಅನ್ವಯಿಸುವುದಿಲ್ಲ. ಅದು 5 ವರ್ಷಗಳಿಗೆ ಮಾತ್ರವೇ ಮಾನ್ಯವಾಗಿರುತ್ತದೆ. ಹೀಗಾಗಿ, ಎಚ್ಚರ ವಹಿಸಬೇಕು’ ಎಂದು ಸಲಹೆ ನೀಡಿದರು.

‘ದಾಖಲೆಗಳ ಪರಿಶೀಲನೆ ವೇಳೆ ಅನೇಕರು ಅಮಾನ್ಯ ಆದಾಯ ಪ್ರಮಾಣಪತ್ರದೊಂದಿಗೆ ಬರುತ್ತಾರೆ. ಆಗ ಸಮಸ್ಯೆ ಎದುರಾಗುತ್ತದೆ. ಆದಾಯ ಪ್ರಮಾಣಪತ್ರ ಪಡೆಯಲು ಕನಿಷ್ಠ 15ರಿಂದ 20 ದಿನಗಳು ಬೇಕಾಗುತ್ತದೆ. ಹೀಗಾಗಿ, ಮುಂಚಿತವಾಗಿಯೇ ದಾಖಲೆಗಳನ್ನು ಇಟ್ಟುಕೊಂಡಿರಬೇಕು’ ಎಂದು ಹೇಳಿದರು.

‘ಮೈಸೂರಿನಲ್ಲಿ 2013ರಿಂದ ಕರ್ನಾಟಕದ 5 ನೋಡೆಲ್ ಕೇಂದ್ರಗಳಲ್ಲಿ ಒಂದಾಗಿರುವ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಈ ವರ್ಷವೂ ನೋಡಲ್ ಕೇಂದ್ರವಾಗುವ ಸಾಧ್ಯತೆಗಳಿವೆ’ ಎಂದರು.

ಕಾಲೇಜಿನ ಪ್ರಾಂಶುಪಾಲ ಸದಾಶಿವೇಗೌಡ ಮಾತನಾಡಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣನವರ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು