ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಂಪೇಗೌಡರ ಕೊಡುಗೆ ಜಗತ್ತಿಗೆ ತಿಳಿಸಬೇಕಿದೆ’

ಕೆಂಪೇಗೌಡರ ಕುರಿತ ಸಂಶೋಧನೆ ಹೆಚ್ಚೆಚ್ಚು ನಡೆಯಲಿ; ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ
Last Updated 27 ಜೂನ್ 2019, 15:30 IST
ಅಕ್ಷರ ಗಾತ್ರ

ಮೈಸೂರು: ‘ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕೊಡುಗೆಯನ್ನು ಜಗತ್ತಿಗೆ ಪಸರಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಜಿಲ್ಲಾಡಳಿತ ನಗರದಲ್ಲಿ ಗುರುವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದ ಅವರು, ‘ಕೆಂಪೇಗೌಡರ ಅಭಿವೃದ್ಧಿ ಕೆಲಸಗಳ ಕುರಿತ ಸಂಶೋಧನೆ ಹೆಚ್ಚೆಚ್ಚು ನಡೆಯುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ಮೂರು ವರ್ಷದ ಹಿಂದೆ ನಗರದ ಮಹಾರಾಜ ಕಾಲೇಜು ಆವರಣದಲ್ಲಿ ಬೃಹತ್ ಸಮಾವೇಶ ನಡೆಸಿ ಕೆಂಪೇಗೌಡ ಜಯಂತಿ ಆಚರಿಸುವಂತೆ ಆಗ್ರಹಿಸಲಾಗಿತ್ತು. ಅದೇ ಸಂದರ್ಭ ಕೆಂಪೇಗೌಡ ಪ್ರಾಧಿಕಾರ ರಚನೆಗೂ ಹಕ್ಕೊತ್ತಾಯ ಮಂಡಿಸಲಾಗಿತ್ತು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಬೇಡಿಕೆಗೆ ಸ್ಪಂದಿಸಿ, ಸರ್ಕಾರದಿಂದಲೇ ಜಯಂತಿ ಆಚರಣೆ ಘೋಷಿಸುವ ಜತೆ, ಪ್ರಾಧಿಕಾರ ರಚಿಸಿ ₹ 10 ಕೋಟಿ ಅನುದಾನವನ್ನು ನೀಡಿದ್ದರು’ ಎಂದು ಹೇಳಿದರು.

‘ನವದೆಹಲಿಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ಉತ್ಸವವನ್ನು ನಡೆಸಲಾಯಿತು. ಆ ಸಂದರ್ಭ ನನಗೆ ಸನ್ಮಾನ ಮಾಡಲಾಯಿತು. ಆ ಸನ್ಮಾನ ನನಗೆ ಸಂದಿದ್ದಲ್ಲ. ಮೈಸೂರಿಗರಿಗೆ ದೊರೆತಿದ್ದು’ ಎಂದು ಸಚಿವರು ಹೇಳಿದರು.

ತಮ್ಮ ಉದ್ಘಾಟನಾ ಭಾಷಣದಲ್ಲಿ ಸಚಿವ ಜಿ.ಟಿ.ದೇವೇಗೌಡ ಗೌಡರ ಇತಿಹಾಸ ಸೇರಿದಂತೆ ಕೆಂಪೇಗೌಡರ ಐತಿಹ್ಯ ಕುರಿತ ಲೇಖನವೊಂದನ್ನು ವಾಚಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಂಗದ ನಿರ್ದೇಶಕ ಎಂ.ಜಿ.ಮಂಜುನಾಥ್ ತಮ್ಮ ಉಪನ್ಯಾಸದಲ್ಲಿ ‘ಕೆಂಪೇಗೌಡರು ಯುದ್ಧಪ್ರಿಯ ರಾಜನಾಗಿರಲಿಲ್ಲ. ಧರ್ಮ ಪ್ರಭುವಾಗಿದ್ದರು. ತಮ್ಮ ಸಾಮಾಜಿಕ ಸೇವೆಯಿಂದಲೇ ನಾಡಿನಾದ್ಯಂಥ ಮನೆ ಮಾತಾದವರು. ಶ್ರೇಷ್ಠ ಸಾಧಕರು. ಉತ್ತಮ ರಾಜತಾಂತ್ರಿಕರು. ನಿಪುಣ, ಮುತ್ಸದ್ಧಿಯಾಗಿದ್ದರು’ ಎಂದು ಹೇಳಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ ‘ಕೆಂಪೇಗೌಡರ ಕೊಡುಗೆ ರಾಜ್ಯಕ್ಕೆ ಅಪಾರವಾಗಿದೆ. ಬೆಂಗಳೂರು ಇಂದು ಅಪಾರ ಸಂಪತ್ತನ್ನು ಹೊಂದಿಕೊಂಡು, ರಾಜಧಾನಿಯಾಗಿ ಕೋಟಿ ಜನರಿಗೆ ನೆರಳು ಕೊಡಲು ಕೆಂಪೇಗೌಡರ ಶ್ರಮ ಕಾರಣವಾಗಿದೆ, ರಾಜ್ಯದ ಜನತೆ ಅವರನ್ನು ಎಂದೆಂದೂ ಮರೆಯಬಾರದು’ ಎಂದರು.

ಮೈಸೂರಿನ ಆದಿಚುಂಚನಗಿರಿ ಶಾಖಾ ಮಠದ ಸೋಮನಾಥಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಸೂರು ಮಹಾನಗರ ಪಾಲಿಕೆ ಮೇಯರ್‌ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ಉಪ ಮೇಯರ್‌ ಶಫೀ ಅಹಮದ್, ಮೈಸೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ, ಅರ್ಪಿತಾ ಪ್ರತಾಪ್ ಸಿಂಹ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ.ರಾಜಣ್ಣ, ಜಿಲ್ಲಾ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT