ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯ ಸರ್ಕಾರದಿಂದ ಗುರುದ್ರೋಹ’

ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಂದ ಉಪವಾಸ ಸತ್ಯಾಗ್ರಹ
Last Updated 5 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಶಾಲೆಗಳಲ್ಲಿ ಹೊಸ ವೃಂದ ಮತ್ತು ವೃಂದ ಬಲ ನಿರ್ಧರಿಸುವ ನಿಯಮ ಹಾಗೂ ವೃಂದ ಮತ್ತು ನೇಮಕಾತಿ ನಿಯಮ– 2017ಕ್ಕೆ ತಿದ್ದುಪಡಿ ತರುವಂತೆ ಒತ್ತಾಯಿಸಿ ರಾಜ್ಯದ ಪ್ರಾಥಮಿಕ ಶಾಲೆಗಳ ಪದವೀಧರ ಶಿಕ್ಷಕರು ಉಪವಾಸ ಸತ್ಯಾಗ್ರಹ ನಡೆಸಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ‘ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ’ದ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಂಕೇತಿಕ ಸತ್ಯಾಗ್ರಹದಲ್ಲಿ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಪಾಲ್ಗೊಂಡರು. ರಾಜ್ಯ ಸರ್ಕಾರ ಗುರುದ್ರೋಹವೆಸಗುತ್ತಿದೆ ಎಂದು ಕಿಡಿಕಾರಿದರು.‌

‘ಪ್ರಾಥಮಿಕ ಶಾಲೆಗಳ 80 ಸಾವಿರಕ್ಕೂ ಹೆಚ್ಚು ಶಿಕ್ಷಕರು ಬಿ.ಇಡಿ, ಬಿ.ಎಸ್ಸಿ, ಎಂ.ಎ, ಎಂ.ಎಸ್ಸಿ, ಪಿಎಚ್‌.ಡಿ, ಎಂ.ಫಿಲ್ ಪದವಿ ಹೊಂದಿದ್ದಾರೆ. 10ರಿಂದ 25 ವರ್ಷಗಳಷ್ಟು ಸೇವಾ ಅನುಭವ ಅವರಿಗಿದೆ. ಆದರೆ, ವೃಂದ ಬಲ ನಿರ್ಧರಿಸುವಾಗ ಅವರೆಲ್ಲರನ್ನೂ ಇಲಾಖೆ ಕಡೆಗಣಿಸಿದೆ. ಸಮಾನ ಕೆಲಸಕ್ಕೆ ಸಮಾನ ವೇತನವನ್ನೂ ನೀಡದೆ ಅನ್ಯಾಯವೆಸಗುತ್ತಿದೆ. ಹೊಸ ನಿಯಮದಿಂದಾಗಿ ಅರ್ಹ ಶಿಕ್ಷಕರಿಗೂ ಬಡ್ತಿ ಸಿಗುವುದಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ಪದವೀಧರ ಶಿಕ್ಷಕರಿಗೆ ಮುಂಬಡ್ತಿ ಸೌಲಭ್ಯ ಸಿಗುತ್ತಿಲ್ಲ. ಅರ್ಹತಾ ಪರೀಕ್ಷೆ ನೆಪದಲ್ಲಿ ವಿನಾಕಾರಣ ತೊಂದರೆ ನೀಡಲಾಗುತ್ತಿದೆ. ಇಲಾಖೆಯ ವರ್ತನೆಯನ್ನು ಖಂಡಿಸುವ ಶಿಕ್ಷಕರನ್ನು ವರ್ಗಾವಣೆಗೊಳಿಸಿ, ಅವರು ಕೆಲಸ ತೊರೆಯುವ ಪರಿಸ್ಥಿತಿ ಸೃಷ್ಟಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ನಿಯಮ ತಿದ್ದುಪಡಿಗೆ ಆಗ್ರಹಿಸಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ. ಈ ನಿಯಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲೂ ದಾವೆ ಹೂಡಲಿದ್ದೇವೆ’ ಎಂದು ಶಿಕ್ಷಕರು ಹೇಳಿದರು.

ಶಿಕ್ಷಕರ ಬೇಡಿಕೆಗಳು

* ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ವಿಶೇಷ ಬಡ್ತಿ ನೀಡಬೇಕು

* ಬಡ್ತಿಗೆ ನಿಗದಿಪಡಿಸಿರುವ ಸ್ಪರ್ಧಾತ್ಮಕ ಪರೀಕ್ಷೆ ರದ್ದುಪಡಿಸಬೇಕು

* ಗುಣಾತ್ಮಕ ಶಿಕ್ಷಣಕ್ಕಾಗಿ 6ರಿಂದ 8ನೇ ತರಗತಿಗೆ ಬೋಧಿಸಲು ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯದ ಹುದ್ದೆಗಳನ್ನು ಸೃಷ್ಟಿಸಬೇಕು

* 6ರಿಂದ 8ನೇ ತರಗತಿವರೆಗೆ ಇರುವ ಶಾಲೆಯ ಮುಖ್ಯ ಶಿಕ್ಷಕ ಹುದ್ದೆಯ ಹೆಸರನ್ನು  ಪದವೀಧರ ಮುಖ್ಯ ಶಿಕ್ಷಕ ಎಂದು ಬದಲಿಸಬೇಕು. ಹಿರಿಯ ಶಿಕ್ಷಕರಿಗೆ ಈ ಹುದ್ದೆಗಳನ್ನು ನೀಡಬೇಕು.

‘ಎಸ್ಮಾ ಜಾರಿಗೆ ಹೆದರುವುದಿಲ್ಲ’

‘ಸತ್ಯಾಗ್ರಹದಲ್ಲಿ ಪಾಲ್ಗೊಳ್ಳದಂತೆ ಇಲಾಖೆ ಉನ್ನತ ಅಧಿಕಾರಿಗಳು, ಶಿಕ್ಷಕರಿಗೆ ಸಂದೇಶ ಕಳುಹಿಸಿದ್ದಾರೆ. ಎಸ್ಮಾ ಜಾರಿಗೊಳಿಸುವುದಾಗಿ ಬೆದರಿಸಿದ್ದಾರೆ. ನಾವು ಗೂಂಡಾಗಿರಿ ಮಾಡುತ್ತಿಲ್ಲ. ಶಾಂತಿಯುತ ಸತ್ಯಾಗ್ರಹ ಮಾಡುತ್ತಿದ್ದೇವೆ. ಎಸ್ಮಾ ಜಾರಿಗೊಳಿಸಿದರೆ ಹೆದರುವುದಿಲ್ಲ’ ಎಂದು ಪ್ರತಿಭಟನಾಕಾರರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT