ಸಂವಿಧಾನ ಬದಲಿಸಲು ಮುಂದಾಗಿದ್ದ ಬಿಜೆಪಿ ಪರ ಶ್ರೀನಿವಾಸ್ ಪ್ರಸಾದ್ ವಕಾಲತ್ತು

ಗುರುವಾರ , ಏಪ್ರಿಲ್ 25, 2019
31 °C
ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಕೆ.ಎಚ್. ಮುನಿಯಪ್ಪ ಅಭಿಮತ; ಬಿಜೆಪಿ ವಿರುದ್ಧ ಆಕ್ರೋಶ

ಸಂವಿಧಾನ ಬದಲಿಸಲು ಮುಂದಾಗಿದ್ದ ಬಿಜೆಪಿ ಪರ ಶ್ರೀನಿವಾಸ್ ಪ್ರಸಾದ್ ವಕಾಲತ್ತು

Published:
Updated:
Prajavani

ನಂಜನಗೂಡು: ತಾವೇ ಬೆಳೆಸಿದ ಶಿಷ್ಯನ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ವಿ.ಶ್ರೀನಿವಾಸಪ್ರಸಾದ್ ಸ್ಪರ್ಧಿಸಬಾರದಿತ್ತು. ಅವರ ಈ ನಡೆ, ಮಗನಿಗೆ ಹೆಣ್ಣು ನೋಡಲು ಹೋದ ಅಪ್ಪ ತಾನೇ ಆ ಹೆಣ್ಣನ್ನು ಮದುವೆಯಾದಂತಿದೆ ಎಂದು ಸಂಸದ ಕೆ.ಎಚ್.ಮುನಿಯಪ್ಪ ವ್ಯಂಗ್ಯವಾಡಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಶ್ರೀನಿವಾಸ ಪ್ರಸಾದ್‌ ಅವರು ಕಾಂಗ್ರೆಸ್‌ನಲ್ಲೇ ಇದ್ದಿದ್ದರೆ ರಾಜ್ಯಸಭೆಗೆ ಹೋಗಬಹುದಿತ್ತು. ಆದರೆ, ಅವರು ಸಮಯ ಬಂದಾಗ ಒಂದೊಂದು ಪಕ್ಷಕ್ಕೆ ಹೋಗುತ್ತಿದ್ದಾರೆ. ಸಂವಿಧಾನವನ್ನೇ ಬದಲಿಸಲು ಮುಂದಾಗಿದ್ದ ಬಿಜೆಪಿ ಪರ ವಕಾಲತ್ತು ವಹಿಸುತ್ತಿರುವುದು ಅವರ ನಾಯಕತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಅವರು ಅಧಿಕಾರಕ್ಕಾಗಿ ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಹೇಳಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ತಿಂಗಳಿಗೆ ₹6 ಸಾವಿರದಂತೆ ವಾರ್ಷಿಕ ₹72 ಸಾವಿರ ನೀಡುವ ಮೂಲಕ ಬಡತನ ನಿರ್ಮೂಲನೆ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ. ಅತ್ಯುತ್ತಮ ಸಂಸದ ಎಂದು ಹೆಸರು ಗಳಿಸಿರುವ ಆರ್‌.ಧ್ರುವನಾರಾಯಣ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಮುಖಂಡ ಡಾ.ತಿಮ್ಮಯ್ಯ ಮಾತನಾಡಿ, ‘ಪರಿಶಿಷ್ಟ ಜಾತಿಯ ಎಡಗೈ ಸಮಾಜವನ್ನು ಬಿಜೆಪಿ ಪರ ಎಂದು ಬಿಂಬಿಸುವ ಮೂಲಕ ಕೆಲವರು ಸಮಾಜಕ್ಕೆ ಕಳಂಕ ತರುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮಾಜದವರು ಶೇ 95 ರಷ್ಟು ಮತವನ್ನು ಕಾಂಗ್ರೆಸ್‌ಗೆ ನೀಡಿದ್ದರು. 7 ಬಾರಿ ಲೋಕಸಭಾ ಸದಸ್ಯರಾಗಿ ದಾಖಲೆ ನಿರ್ಮಿಸಿರುವ ಕೆ.ಎಚ್.ಮುನಿಯಪ್ಪ ನಮ್ಮ ಸಮಾಜದ ಪ್ರಶ್ನಾತೀತ ನಾಯಕರು’ ಎಂದು ಹೇಳಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಕೆಪಿಸಿಸಿ ಸದಸ್ಯ ಅಕ್ಬರ್ ಅಲೀಂ, ಮುಖಂಡರಾದ ಮೂಗಶೆಟ್ಟಿ, ದೇವರಾಜು, ಗಂಗಾಧರ್, ಜಗದೀಶ್, ಸ್ವಾಮಿ, ಪಿ.ಶ್ರೀನಿವಾಸ್, ಎಂ.ಶ್ರೀಧರ್ ಉಪಸ್ಥಿತರಿದ್ದರು.

 

‘ಮೋದಿ ಪ್ರಧಾನಿ ಆದದ್ದು ದೇಶದ ದುರಂತ’

ವಾಜಪೇಯಿ, ಅಡ್ವಾಣಿ, ಮುರುಳಿ ಮನೋಹರ ಜೋಷಿಯಂತಹ ನಾಯಕರು ನರೇಂದ್ರ ಮೋದಿಯನ್ನು ಬೆಳೆಸಿದ್ದರು. ಆದರೆ, ಅವರನ್ನೇ ಮೂಲೆಗುಂಪು ಮಾಡಿದ್ದಾರೆ. ಮೋದಿ ಆಡಳಿತದ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ಹಲ್ಲೆಗಳು ಹೆಚ್ಚಾಗಿವೆ. ಜಿಎಸ್‌ಟಿ ಜಾರಿಯಿಂದ ದೇಶದಲ್ಲಿ ಲಕ್ಷಾಂತರ ಸಣ್ಣ ಕೈಗಾರಿಕೆಗಳು ಮುಚ್ಚಿಹೋಗಿವೆ. 15 ದೊಡ್ಡ ಉದ್ಯಮಿಗಳ ₹2.5 ಲಕ್ಷ ಕೋಟಿ ಸಾಲಮನ್ನಾ ಮಾಡಲಾಗಿದೆ. ಆದರೆ, ರೈತರ ಸಾಲಮನ್ನಾ ಮಾಡಿಲ್ಲ. ಮೋದಿ ಪ್ರಧಾನಿಯಾದದ್ದು ಈ ದೇಶದ ದುರಂತ ಎಂದು ಕೆ.ಎಚ್‌.ಮುನಿಯಪ್ಪ ದೂರಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !