ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಎಫ್‌ನಿಂದ ಹಾಲಿಗೆ ‘ಎ’ ಮತ್ತು ‘ಡಿ’ ವಿಟಮಿನ್‌ ಸೇರ್ಪಡೆ

ಜಾಗೃತಿಗೆ ಚಾಲನೆ
Last Updated 8 ನವೆಂಬರ್ 2019, 10:26 IST
ಅಕ್ಷರ ಗಾತ್ರ

ಮೈಸೂರು: ನಂದಿನಿ ಹಾಲಿಗೆ ವಿಟಮಿನ್ ‘ಎ’ ಮತ್ತು ‘ಡಿ’ ಸೇರ್ಪಡೆಗೊಳಿಸುವ ಮೂಲಕ, ಹಾಲನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಕೆಲಸ ಕರ್ನಾಟಕ ಹಾಲು ಮಹಾ ಮಂಡಳ (ಕೆಎಂಎಫ್‌)ದಿಂದ ನಡೆಯುತ್ತಿದೆ.

ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಹಾಗೂ ಟಾಟಾ ಟ್ರಸ್ಟ್‌ ಸಹಭಾಗಿತ್ವದಲ್ಲಿ ‘ಎ’ ಮತ್ತು ‘ಡಿ’ ಜೀವಸತ್ವ ಸೇರ್ಪಡೆ ಕಾರ್ಯ ನಡೆಯುತ್ತಿದ್ದು, ಜನರ ಆರೋಗ್ಯವರ್ಧನೆಗೆ ಇದು ಸಹಕಾರಿಯಾಗಲಿದೆ. ಈ ಅಂಶವನ್ನು ಗ್ರಾಹಕರಿಗೆ ಮನದಟ್ಟು ಮಾಡಿಕೊಡಲು ಮೈಮುಲ್‌ ಜಾಗೃತಿ ಜಾಥಾ ಹಮ್ಮಿಕೊಂಡಿದೆ.

ಕೆಎಂಎಫ್‌ನ 14 ಹಾಲು ಒಕ್ಕೂಟಗಳಲ್ಲೂ ವಿಟಮಿನ್‌ ಮಿಶ್ರಣಗೊಂಡ 36 ಲಕ್ಷ ಲೀಟರ್ ಹಾಲನ್ನು ನಿತ್ಯ ರಾಜ್ಯ ಮತ್ತು ಹೊರರಾಜ್ಯದಲ್ಲೂ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ.

50 ಸಾವಿರ ಲೀಟರ್‌ಗೆ 10 ಎಂಎಲ್‌: ‘ಪಾಶ್ಚರೀಕರಿಸಿದ ಹಾಲಿಗೆ ದ್ರವರೂಪದ ವಿಟಮಿನ್ ಅಂಶವನ್ನು ಸೇರ್ಪಡೆ ಮಾಡಲಾಗುತ್ತದೆ. 50 ಸಾವಿರ ಲೀಟರ್ ಹಾಲಿಗೆ 10 ಮಿ.ಲೀ ವಿಟಮಿನ್‌ ದ್ರಾವಣ ಸಾಕು. ಈ ಹಾಲನ್ನು ಪ್ಯಾಕಿಂಗ್‌ ಮಾಡಿ ಮಾರಾಟ ಮಾಡಲಾಗುವುದು’ ಎಂದು ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ (ಮೈಮುಲ್) ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕ ಎನ್‌.ಜಿ.ಫಣಿರಾಜ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ವಿಟಮಿನ್ ಮಿಶ್ರಣಗೊಂಡ 100 ಮಿ.ಲೀ ಹಾಲಿನಲ್ಲಿ 27 ಮೈಕ್ರೊ ಯೂನಿಟ್‌ನಷ್ಟು ‘ಎ’ ವಿಟಮಿನ್ ಹೆಚ್ಚಾದರೆ, 1 ಮೈಕ್ರೊ ಯುನಿಟ್‌ನಷ್ಟು ವಿಟಮಿನ್ ‘ಡಿ’ ಹೆಚ್ಚಾಗಲಿದೆ. ಇದರ ಜತೆಗೆ ಹಾಲಿನಲ್ಲಿ ನೈಸರ್ಗಿಕವಾಗಿರುವ ಸಕಲ ಪೌಷ್ಟಿಕಾಂಶ, ವಿಟಮಿನ್‌ಗಳೂ ಇರಲಿವೆ’ ಎಂದು ಅವರು ತಿಳಿಸಿದರು.

‘ಮೈಸೂರು ಡೇರಿಯಲ್ಲಿ ನಿತ್ಯವೂ 2.20 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಇದರಲ್ಲಿ 2 ಲಕ್ಷ ಲೀಟರ್ ಹಾಲಿಗೆ ವಿಟಮಿನ್ ಎ, ಡಿ ಸೇರ್ಪಡೆ ಮಾಡುತ್ತಿದ್ದೇವೆ. ನಮ್ಮಲ್ಲಿನ ಐದು ತರಹದ ಹಾಲಿನಲ್ಲಿ ಟೋನ್ಡ್‌, ಹೋಮೋಜಿನೈಸ್ಡ್‌ ಟೋನ್ಡ್‌, ಶುಭಂ, ನಂದಿನಿ ಸ್ಪೆಷಲ್‌ ಹಾಲಿಗೆ ಮಾತ್ರ ಈ ಮಿಶ್ರಣ ಮಾಡಲಾಗುತ್ತಿದೆ’ ಎಂದು ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಕೆ.ರಾಜಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT