ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ‘ಕೋದಂಡರಾಮ ಮಂದಿರ’

ಗ್ರಾಮಸ್ಥರೊಂದಿಗೆ ಕೈಜೋಡಿಸಿದ ಸಿದ್ದರಾಮಯ್ಯ ಕುಟುಂಬ
Last Updated 23 ಫೆಬ್ರುವರಿ 2021, 1:36 IST
ಅಕ್ಷರ ಗಾತ್ರ

ಮೈಸೂರು: ತಾಲ್ಲೂಕಿನ ಸಿದ್ದರಾಮನಹುಂಡಿಯಲ್ಲಿನ ಸುಮಾರು ನೂರು ವರ್ಷದಷ್ಟು ಹಳೆಯ ಕೋದಂಡರಾಮ ಮಂದಿರವನ್ನು ಗ್ರಾಮಸ್ಥರು ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಂಬದವರು ಜೀರ್ಣೋದ್ಧಾರ ಮಾಡುತ್ತಿದ್ದು, ಕಾಮಗಾರಿ ಅಂತಿಮ ಹಂತ ತಲುಪಿದೆ.

ಅಂದಾಜು ₹ 60 ಲಕ್ಷ ವೆಚ್ಚದಲ್ಲಿ ಮಂದಿರ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಗ್ರಾಮದ 9 ಮಂದಿಯನ್ನು ಯಜಮಾನರನ್ನಾಗಿ ನೇಮಿಸಲಾಗಿದೆ. ಎಲ್ಲರಿಂದಲೂ ವಂತಿಗೆ ಸಂಗ್ರಹಿಸಲಾಗಿದೆ. ‌ತಮಿಳುನಾಡಿನಿಂದ ಬಂದಿರುವ ನುರಿತ ಕುಶಲಕರ್ಮಿಗಳು, ಸ್ಥಳೀಯ ಕೆಲಸಗಾರರೊಂದಿಗೆ ಮಂದಿರ ಕಾರ್ಯದಲ್ಲಿ ತೊಡಗಿದ್ದಾರೆ.

ದೇವಾಲಯದ ಒಳಾಂಗಣ
ದೇವಾಲಯದ ಒಳಾಂಗಣ

ಗರ್ಭಗುಡಿ, ಪ್ರಾಂಗಣ ಹಾಗೂ ಹೊರಾಂಗಣವನ್ನು ಈಗಾಗಲೇ ನಿರ್ಮಿಸಲಾಗಿದೆ. ಗರ್ಭಗುಡಿಯ ಸುತ್ತ 10 ವಿವಿಧ ದೇವರುಗಳ ಮೂರ್ತಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ದೇವರಮೂರ್ತಿಯ ಪ್ರಭಾವಳಿಗಳ ರಚನಾ ಕಾರ್ಯ ನಡೆದಿದೆ.

‘ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮೇಶ್ವರ, ಚಾಮುಂಡೇಶ್ವರಿ, ರಾಮಮಂದಿರ ಸೇರಿದಂತೆ 4 ದೇಗುಲಗಳಿವೆ. ಇವುಗಳಲ್ಲಿ ರಾಮಮಂದಿರವು ಸಹ ಹಳೆಯ ದೇಗುಲವಾಗಿದ್ದು, ಶಿಥಿಲಾವಸ್ಥೆ ತಲುಪಿತ್ತು. ಇದರ ಜೀರ್ಣೋದ್ಧಾರ ಮಾಡಬೇಕೆಂದು ನಿಶ್ಚಯಿಸಿದ ಗ್ರಾಮಸ್ಥರು ಹಣವನ್ನು ಸಂಗ್ರಹಿಸಿದರು. ಇದಕ್ಕೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ದೊಡ್ಡಮೊತ್ತದ ದೇಣಿಗೆ ನೀಡಿದ್ದಾರೆ’ ಎಂದು ಗ್ರಾಮಸ್ಥರಾದ ಉದಯ್ ತಿಳಿಸಿದರು.

ದೇವಾಲಯದ ಒಳಾಂಗಣ
ದೇವಾಲಯದ ಒಳಾಂಗಣ

ಇಲ್ಲಿ ನಡೆಯುವ ರಾಮನವಮಿಯು, ಹೋಬಳಿಯಲ್ಲೇ ಹೆಚ್ಚು ಮಹತ್ವ ಗಳಿಸಿದೆ. 9 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ರಾಮನವಮಿಯಲ್ಲಿ ಓಕುಳಿಯಾಟ ಸೇರಿದಂತೆ ಹಲವು ವಿಧದ ಕಾರ್ಯಕ್ರಮಗಳು ನಡೆಯುತ್ತವೆ. ರಾತ್ರಿ ವೇಳೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಾಮದೇವರ ಭಾವಚಿತ್ರವನ್ನು ಮೆರವಣಿಗೆ ನಡೆಸಲಾಗುತ್ತದೆ. ಈ ಬಾರಿಯ ರಾಮನವಮಿಯ ಹೊತ್ತಿಗೆ ರಾಮಮಂದಿರ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ, ಎಂಜಿನಿಯರ್ ಪುನೀತ್, ‘ಗರ್ಭಗುಡಿಯಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯ ಇರುವ ಮೂರ್ತಿ ಸೇರಿದಂತೆ ಸುತ್ತಲೂ ದಶಾವತಾರದ ಮೂರ್ತಿಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಯಾವ ಯಾವ ದೇವರ ಮೂರ್ತಿಗಳನ್ನಿಡಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ’ ಎಂದು ತಿಳಿಸಿದರು.

ಹೆಂಚಿನ ಚಾವಣಿ ಹೊಂದಿದ್ದ ಹಳೆಯ ಕೋದಂಡರಾಮ ಮಂದಿರವನ್ನು ಕೆಡವಿ, ನೂತನವಾಗಿ ರಾಮಮಂದಿರ ನಿರ್ಮಿಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರು ವಿಶೇಷ ಕಾಳಜಿ ವಹಿಸಿದ್ದಾರೆ ಎಂದು ಬಹುತೇಕ ಗ್ರಾಮಸ್ಥರು ಹೇಳುತ್ತಾರೆ. ‘ಲಾಕ್‌ಡೌನ್‌’ನಿಂದಾಗಿ ಕಳೆದ ವರ್ಷ ಕೆಲಸ ಮಂದಗತಿಯಲ್ಲಿ ಸಾಗಿತ್ತು. ಈ ಬಾರಿ ರಾಮನವಮಿಗೆ ರಾಮಮಂದಿರ ಸಿದ್ಧವಾಗಲಿದೆ ಎಂಬುದು ಗ್ರಾಮದ ನಿಖಿಲ್‌ಕುಮಾರ್ ಅನಿಸಿಕೆ.

ಹಳೆಯ ರಾಮ ಮಂದಿರ ಹೆಂಚಿನ ಮನೆಯಲ್ಲಿ ಇತ್ತು. ಈಗ ಗ್ರಾಮಸ್ಥರು ಹಾಗೂ ಸಿದ್ದರಾಮಯ್ಯ ಕುಟುಂಬದವರು ವಿಶೇಷ ಕಾಳಜಿ ವಹಿಸಿದ್ದರಿಂದ ನೂತನ ರಾಮಮಂದಿರ ನಿರ್ಮಾಣವಾಗುತ್ತಿದೆ ಎನ್ನುತ್ತಾರೆ ಗ್ರಾಮದ ಯಜಮಾನರಲ್ಲೊಬ್ಬರಾದ ನಾಗರಾಜು ಹಾಗೂ ಗ್ರಾಮಸ್ಥ ರಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT