ಗುರುವಾರ , ಸೆಪ್ಟೆಂಬರ್ 23, 2021
21 °C
ವಿಶ್ವ ಸ್ತನ್ಯಪಾನ ಸಪ್ತಾಹ ಶುರು l ‘ಸ್ತನ್ಯಪಾನ ರಕ್ಷಣೆ ಯಾರ ಹೊಣೆ?’ ಈ ಬಾರಿಯ ಧ್ಯೇಯವಾಕ್ಯ

‘ಸ್ತನ್ಯಪಾನ ರಕ್ಷಣೆ’ಗೆ ಕೋವಿಡ್‌ ಸವಾಲು!

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ವಿಶ್ವ ಸ್ತನ್ಯಪಾನ ಸಪ್ತಾಹ ಆಗಸ್ಟ್ 1ರಿಂದ ಆರಂಭವಾಗಿದೆ. ಕೋವಿಡ್ ಕಾಲದಲ್ಲಿ ಸ್ತನ್ಯಪಾನ ಪ್ರಕ್ರಿಯೆ ನಿಲ್ಲದಂತೆ ತಾಯಿ–ಮಗುವನ್ನು ರಕ್ಷಿಸುವಲ್ಲಿ ಹೊಸ ಬಗೆಯ ಸವಾಲುಗಳು ಎದುರಾಗಿರುವುರಿಂದ ವಿಶ್ವಸಂಸ್ಥೆಯು ‘ಸ್ತನ್ಯಪಾನ ರಕ್ಷಣೆ’ಯನ್ನೇ ಗುರಿಯಾಗಿಸಿಕೊಂಡು ‘ಸ್ತನ್ಯಪಾನ ರಕ್ಷಣೆ ಯಾರ ಹೊಣೆ?’ ಎಂಬುದನ್ನೇ ಈ ಬಾರಿಯ ಧ್ಯೇಯವಾಕ್ಯವಾಗಿ ಘೋಷಿಸಿದೆ.

ಕೊರೊನಾ ಸೋಂಕಿತರು ಹಾಗೂ ಲಸಿಕೆ ಪಡೆದವರು ಮಗುವಿಗೆ ಹಾಲುಣಿಸಿದರೆ ಮಗುವಿನ ಆರೋಗ್ಯ ಕೆಡುತ್ತದೆ ಎಂಬ ಮೂಢನಂಬಿಕೆ ಸದ್ಯ ಎಲ್ಲೆಡೆ ಹಾಸುಹೊಕ್ಕಾಗಿರುವುದನ್ನು ವಿಶ್ವಸಂಸ್ಥೆ ಗಂಭೀರವಾಗಿ ಪರಿಗಣಿಸಿದೆ.

‘ಸೋಂಕಿತ ತಾಯಿಯು ಹೋಂ ಐಸೋಲೇಷನ್‌ನಲ್ಲಿದ್ದರೆ ಆತಂಕ ಪಡದೆ ಮುನ್ನಚ್ಚರಿಕೆಗಳನ್ನು ಅನುಸರಿಸಿ ಮಗುವಿಗೆ ಹಾಲು ನೀಡಬಹುದು’ ಎಂದು ಭಾರತೀಯ ಶಿಶು ವೈದ್ಯರ ಅಕಾಡೆಮಿ (ಐಎಪಿ)ಯ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಶಶಿಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಪರೂಪದ ಕೆಲವು ಕಾರಣಗಳನ್ನು ಹೊರತುಪಡಿಸಿದರೆ ಮಗುವಿಗೆ ತಾಯಿ ಹಾಲು ಕೊಡಬಾರದು ಎನ್ನುವುದಕ್ಕೆ ಯಾವುದೇ ಕಾರಣವಿಲ್ಲ. ಕೋವಿಡ್ ಸಂದರ್ಭದಲ್ಲಿ ವ್ಯಾಪಕವಾದ ಮೂಢನಂಬಿಕೆಗಳು ಜನರಲ್ಲಿವೆ. ಅವೆಲ್ಲವೂ ಸುಳ್ಳು. ಹೋಂ ಐಸೋಲೇಷನ್‌ನಲ್ಲಿರುವ ಕೋವಿಡ್ ಪೀಡಿತರು ಹಾಗೂ ಕೋವಿಡ್ ಲಸಿಕೆ ಪಡೆದವರು ಮಗುವಿಗೆ ಹಾಲೂಡಿಸಬಹುದು’ ಎಂದು ಹೇಳಿದರು.

‘ಹೆರಿಗೆಯಾದ ಮೊದಲ 3 ದಿನ ಕಾಲ ಬರುವ ಹಾಲು ಕೆಟ್ಟದ್ದೆಂದು ಕುಡಿಸದೇ ಇರುವುದು, ಮಗುವಿನ ಹೊಟ್ಟೆ ಸ್ವಚ್ಛವಾಗಲಿ ಎಂದು ಹರಳೆಣ್ಣೆ ಚೀಪಿಸುವುದು ಹಾಗೂ 6 ತಿಂಗಳವರೆಗೆ ಕೇವಲ ಎದೆಹಾಲೊಂದೇ ಸಾಕಾಗದು ಎಂದು ಪೂರಕ ಆಹಾರ ನೀಡುವುದು ತಪ್ಪು. ಮಗುವಿಗೆ 2 ವರ್ಷ ತುಂಬುವ ಮೊದಲೇ ಗರ್ಭಿಣಿಯಾಗುವುದುಕೂಡ ಎದೆಹಾಲೂಡಿಸಲು ಅಡ್ಡಿಯಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

’ಎದೆಹಾಲು ನೀಡುವುದರಿಂದ ಸೌಂದರ್ಯ ಹಾಳಾಗುತ್ತದೆ, ದೇಹದ ಸಂರಚನೆಯಲ್ಲಿ ಬದಲಾವಣೆಗಳಾಗುತ್ತವೆ ಎಂಬ ಆಧುನಿಕ ಮೂಢನಂಬಿಕೆಗೆ ಒಳಗಾದ ಬಹಳಷ್ಟು ಮಹಿಳೆಯರು ಒಂದು ವರ್ಷಕ್ಕೂ ಮುಂಚಿತವಾಗಿ ತಮ್ಮ ಮಗುವಿಗೆ ಎದೆಹಾಲು ನೀಡುವುದನ್ನು ನಿಲ್ಲಿಸುತ್ತಾರೆ, ಇಲ್ಲವೇ ಕಡಿಮೆ ಮಾಡುತ್ತಾರೆ. ಸ್ತನ್ಯಪಾನಕ್ಕೆ ಈ ನಂಬಿಕೆಯೂ ದೊಡ್ಡ ಸವಾಲೆನಿಸಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಜಾಹೀರಾತು ದುಷ್ಪರಿಣಾಮ: ವಿಶ್ವಸಂಸ್ಥೆಯಿಂದ ಅಂಗೀಕೃತವಾದ ‘ವರ್ಲ್ಡ್‌ ಅಲಯನ್ಸ್ ಫಾರ್ ಬ್ರೆಸ್ಟ್‌ ಫೀಡಿಂಗ್ ಆ್ಯಕ್ಷನ್’ ಸಂಸ್ಥೆ ಪ್ರಕಾರ ‘ಸ್ತನ್ಯಪಾನ ಕಡಿಮೆಯಾಗಲು ಜಾಹೀರಾತುಗಳೂ ಕಾರಣ’. ಅದರ ನಿಯಂತ್ರಣಕ್ಕೆಂದೇ ರೂಪಿಸಿರುವ, ಶಿಶು ಹಾಲು ಬದಲಿಗಳು, ಬಾಟಲಿ ಆಹಾರ ಮತ್ತು ಶಿಶು ಆಹಾರಗಳು (ನಿಯಂತ್ರಣ, ಉತ್ಪಾದನೆ, ಪೂರೈಕೆ ಮತ್ತು ವಿತರಣೆ) ಕಾಯ್ದೆ 1992 ಮತ್ತು ತಿದ್ದುಪಡಿ ಕಾಯ್ದೆ 2003)ರ ಉಲ್ಲಂಘನೆ ನಿರಂತರವಾಗಿದೆ. ‘ಜಾಹೀರಾತುಗಳಿಂದಾಗಿ ತಾಯಂದಿರು ಮಗುವಿಗೆ 6 ತಿಂಗಳಿಗೂ ಮುಂಚೆಯೇ ಸ್ತನ್ಯಪಾನದೊಂದಿಗೆ ಪೂರಕ ಆಹಾರ ನೀಡಲಾರಂಭಿಸುತ್ತಾರೆ’ ಎನ್ನುತ್ತದೆ ಸಂಸ್ಥೆ.

ಜಾಗೃತಿಗಾಗಿ ನಾಟಕ, ಉಪನ್ಯಾಸ: ಸ್ತನ್ಯಪಾನ ಜಾಗೃತಿ ಕುರಿತು ಭಾರತೀಯ ಶಿಶುವೈದ್ಯರ ಅಕಾಡೆಮಿಯು ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾರಂಭಿಸಿದೆ. 1ರಂದು ಚೆಲುವಾಂಬ ಆಸ್ಪತ್ರೆಯಲ್ಲಿ ಸಪ್ತಾಹವನ್ನು ಉದ್ಘಾಟಿಸಿ ಜಾಗೃತಿ ನಾಟಕ ಪ್ರದರ್ಶಿಸಲಾಯಿತು. 2ರಂದು ವಿ.ವಿಪುರಂನ ಹೆರಿಗೆ ಆಸ್ಪತ್ರೆಯಲ್ಲಿ ಉಪನ್ಯಾಸ ನಡೆದಿದೆ.

3ರಂದು ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಡಾ.ಭುವನೇಶ್ವರ್ ಉಪನ್ಯಾಸ ನೀಡಿದರೆ, 4ರಂದು ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಪ್ತಸಮಾಲೋಚನೆ ನಡೆಯಲಿದೆ. 5ರಂದು
ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ, 6ರಂದು ಮೈಸೂರಿನ ಮಿಷನ್ ಆಸ್ಪತ್ರೆ, 7ರಂದು ಸಿಗ್ಮಾ ಆಸ್ಪತ್ರೆಯಲ್ಲಿ ಜಾಗೃತಿ ಉಪನ್ಯಾಸಗಳು ಬೆಳಿಗ್ಗೆ 11.30ರಿಂದ 1.30ರವರೆಗೆ ನಡೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು