ಗುರುವಾರ , ಆಗಸ್ಟ್ 11, 2022
21 °C
‘ಮಹಿಳಾ ಕಾಂಗ್ರೆಸ್ ನಡಿಗೆ ಅನ್ನದಾತರ ಬಳಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ.ಪುಷ್ಪಾ ಅಮರನಾಥ್‌

ರೈತ ಹೋರಾಟಕ್ಕೆ ಕೆಪಿಸಿಸಿ ಮಹಿಳಾ ಘಟಕ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ‘ಸರ್ಕಾರಗಳ ರೈತ ವಿರೋಧಿ ಕಾಯ್ದೆ ವಿರೋಧಿಸಿ ನಡೆದಿರುವ ಚಳವಳಿಗೆ ಕೆಪಿಸಿಸಿ ಮಹಿಳಾ ಘಟಕವು ‘ಮಹಿಳಾ ಕಾಂಗ್ರೆಸ್ ನಡಿಗೆ ಅನ್ನದಾತರ ಬಳಿಗೆ’ ಕಾರ್ಯಕ್ರಮದ ಮೂಲಕ ನೈತಿಕ ಬೆಂಬಲ ವ್ಯಕ್ತಪಡಿಸಿದೆ’ ಎಂದು ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಡಾ.‍ಪುಷ್ಪಾ ಅಮರನಾಥ್ ಹೇಳಿದರು.

ತಾಲ್ಲೂಕಿನ ನಾಗಮಂಗಲ ಗ್ರಾಮದ ಶಿವಕುಮಾರ್ ಅವರ ಹೊಲದಲ್ಲಿ ರಾಗಿ ಬೆಳೆ ಕಟಾವು ಮಾಡುವ ಮೂಲಕ ಬೆಂಬಲದ ಹೋರಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದ 36 ಸಂಘಟನಾ ಜಿಲ್ಲೆಗಳಲ್ಲಿ ಸ್ಥಳೀಯ ಜಿಲ್ಲಾ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಹೊಲ ಗದ್ದೆಗಳಿಗೆ ತೆರಳಿ ಕೃಷಿಕರಿಗೆ ಪೂರ ಕವಾದ ಶ್ರಮದಾನದಲ್ಲಿ ಭಾಗವಹಿ ಸುವರು. ಈ ಮೂಲಕ ರೈತರಿಗೆ ಬೆಂಬಲ ಸೂಚಿಸುವರು ಎಂದು ಹೇಳಿದರು.

ಹುಣಸೂರು ಮಹಿಳಾ ಘಟಕದಿಂದ 33 ಸದಸ್ಯೆಯರು ಬೆಳಿಗ್ಗೆ 9ರಿಂದ ಧನ್ಯಕುಮಾರ್ ಅವರ ಹೊಲದಲ್ಲಿ ಟೊಮೆಟೊ, ಶ್ರೀನಿವಾಸ್ ಹೊಲದಲ್ಲಿ ಅವರೆಕಾಯಿ ಬಿಡಿಸಲು ಶ್ರಮದಾನ ಮಾಡಲಾಗಿದೆ. ಈ ಬೆಂಬಲದಿಂದ ರೈತರ ಚಳವಳಿಗೆ ಮತ್ತಷ್ಟು ಶಕ್ತಿ
ಸಿಗಲಿದೆ ಎಂದು ಅವರು ಹೇಳಿದರು.

ಸನ್ಮಾನ: ತಾಲ್ಲೂಕಿನ ಆಯ್ದ 10 ಕೃಷಿ ದಂಪತಿಯನ್ನು ಕೆಪಿಸಿಸಿ ಮಹಿಳಾ ಘಟಕದಿಂದ ಗುರುತಿಸಿ ಪ್ರಗತಿಪರ ರೈತ ದಂಪತಿ ಎಂದು ಗೌರವಿಸಲಾಗುವುದು ಎಂದರು.

ವಿರೋಧ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರೈತರ ವಿರುದ್ಧ ಜಾರಿಗೊಳಿಸಿರುವ ಕಾಯ್ದೆಗಳನ್ನು ಸಂಪೂರ್ಣ ಹಿಂಪಡೆ ಯಬೇಕು. ರೈತರಿಗೆ ಅನುಕೂಲ ಕಲ್ಪಿಸುವ ಕಾಯ್ದೆಯನ್ನು ಜಾರಿಗೊಳಿಸಿ
ಅನ್ನದಾತನ ಬೆನ್ನಿಗೆ ಊರುಗೋಲಾಗುವ ಬದಲು ಮೋದಿ ಸರ್ಕಾರ ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆಸಿದೆ ಎಂದು ಕಿಡಿಕಾರಿದರು.

ದೆಹಲಿಯಲ್ಲಿ ರೈತರು ಹಲವು ದಿನಗಳಿಂದ ಚಳಿಯಲ್ಲೇ ಬೀಡು ಬಿಟ್ಟಿದ್ದರೂ ಕೇಂದ್ರ ಸರ್ಕಾರ ರೈತರ ಸಮಸ್ಯೆ ಆಲಿಸಿ ಪರಿಹಾರ ಕಂಡುಕೊಳ್ಳುವ ಉತ್ಸುಕತೆ ತೋರಿಲ್ಲ. ಸಂ‍ಪುಟ ಸಚಿವರು, ಕೃಷಿ ಸಚಿವರು ಅಧಿಕಾರಿಗಳು ಒಂದರ ಮೇಲೆ ಒಂದು ಸಭೆ ನಡೆಸುತ್ತಿದ್ದಾರೆ. ಈ ಸಭೆಗಳು ವಿಫಲವಾಗಿದ್ದರೂ ಮೋದಿ ಮೌನವಾಗಿದ್ದಾರೆ ಎಂದರು.

ಶಾಸಕ ಮಂಜುನಾಥ್ ಮಾತನಾಡಿ, ಮಹಿಳಾ ಘಟಕದ ಈ ನಿರ್ಧಾರವು ಶ್ಲಾಘನೀಯ ಎಂದರು.

ಕೆಪಿಸಿಸಿ ಮಹಿಳಾ ಘಟಕ ಉಪಾಧ್ಯಕ್ಷೆ ಲತಾ ಮೋಹನ್, ಮೈಸೂರು ನಗರ ಘಟಕದ ಅಧ್ಯಕ್ಷೆ ಪುಷ್ಪವಲ್ಲಿ, ಡಾ.ಸುಜಾತಾ, ನಗರಸಭೆ ಅಧ್ಯಕ್ಷ ಅನುಷಾ ರಾಘು, ನಗರಸಭೆ ಸದಸ್ಯೆ ಗೀತಾ ನಿಂಗರಾಜು, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.