ಶುಕ್ರವಾರ, ಮಾರ್ಚ್ 31, 2023
25 °C
ಧರ್ಮಾಧಾರಿತವಾದ ಹಿಮ್ಮುಖ ಚಲನೆಯ ನೀತಿ; ಆರೋಪ

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ವಿರೋಧ ವ್ಯಕ್ತಪಡಿಸಿದರು.

ಈ ನೀತಿಯು ಕೇಸರೀಕರಣ ಹಾಗೂ ಧರ್ಮಾಧಾರಿತವಾಗಿದ್ದು, 2 ಸಾವಿರ ವರ್ಷಗಳ ಹಿಂದಕ್ಕೆ ಶಿಕ್ಷಣವನ್ನು ಕೊಂಡೊಯ್ಯಲು ಪ್ರೇರೇಪಿಸುತ್ತಿದೆ. ಇದೊಂದು ಹಿಮ್ಮುಖ ಚಲನೆಯ ನೀತಿ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಸಂಸತ್ತು, ವಿಧಾನಸಭೆ, ವಿಶ್ವವಿದ್ಯಾಲಯಗಳಲ್ಲಿ ಚರ್ಚೆ ಮಾಡದೇ ತರಾತುರಿಯಲ್ಲಿ ಜಾರಿಗೊಳಿಸಲು ಹೊರಟಿರುವುದು ಸರಿಯಲ್ಲ. ಪಕ್ಷಾತೀತವಾಗಿ ಶಿಕ್ಷಣ ತಜ್ಞರ ಸಮಿತಿ ನೇಮಿಸಿ ಹೊಸ ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.

ನೀತಿ ರೂಪಿಸಿದ ಸಮಿತಿಯ ಮುಖ್ಯಸ್ಥ ಕಸ್ತೂರಿರಂಗನ್ ಅವರ ಬಗ್ಗೆ ಗೌರವ ಇದೆ. ಆದರೆ, ಇನ್ನುಳಿದ ಸದಸ್ಯರ ಪೈಕಿ ಎಂ.ಕೆ.ಶ್ರೀಧರ್ ಆರ್‌ಎಸ್‌ಎಸ್‌ನವರು. ರಾಜೇಂದ್ರ ಪ್ರತಾಪಗುಪ್ತ ಬಿಜೆಪಿ ಪ್ರಣಾಳಿಕೆ ಬರೆದವರು. ಭ್ರಷ್ಟಾಚಾರದ ಆರೋಪದಲ್ಲಿ ಇವರನ್ನು ಜೆ.ಪಿ.ನಡ್ಡಾ ವಜಾ ಮಾಡಿದ್ದರು. ಇಂತಹ ಸಮಿತಿ ರೂಪಿಸಿದ ನೀತಿ ಸ್ವೀಕಾರಾರ್ಹವಲ್ಲ ಎಂದರು.

ನಾಗಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಣಾಳಿಕೆಯಂತಿರುವ ಈ ನೀತಿ ಬಡವರ, ರೈತರ, ದಲಿತರ ವಿರೋಧಿಯಾಗಿದೆ. ಆಧುನಿಕ ಶಿಕ್ಷಣ ಪದ್ಧತಿಗೆ ವಿರುದ್ಧವಾಗಿದೆ ಎಂದರು.

ಸಚಿವ ಸೋಮಶೇಖರ್ ವಿಫಲ

ಮೈಸೂರಿನಲ್ಲಿ ಅತ್ಯಾಚಾರ, ದರೋಡೆ, ಪತ್ರಕರ್ತರ ಮೇಲೆ ಹಲ್ಲೆ, ದೇಗುಲಗಳ ಧ್ವಂಸ, ಐಎಎಸ್‌ ಅಧಿಕಾರಿಗಳ ಕಿತ್ತಾಟ ಸೇರಿದಂತೆ ನಾನಾ ಪ್ರಕರಣಗಳು ನಡೆದಿವೆ. ಪರಸ್ಪರ ಕಿತ್ತಾಡಿಕೊಂಡ ರೋಹಿಣಿ ಸಿಂಧೂರಿ, ಶಿಲ್ಪಾನಾಗ್ ಅವರು ಸಂಧಾನಕ್ಕಾಗಿ ಸ್ವಾಮೀಜಿ ಮೊರೆ ಹೋಗಬೇಕಾಯಿತು. ಇವೆಲ್ಲವೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ವೈಫಲ್ಯತೆಗೆ ಸಾಕ್ಷಿ. ಇವರಿಗೆ ಅನುಭವದ ಕೊರತೆ ಇದೆ ಎಂದು ಟೀಕಿಸಿದರು.

ಕಳೆದ 4 ವರ್ಷಗಳಿಂದ ಸತತವಾಗಿ ತಂಬಾಕು ಬೆಲೆ ಕುಸಿಯುತ್ತಿದೆ. ತಂಬಾಕು ಮಂಡಳಿ ಹಾಗೂ ಸರ್ಕಾರ ಬೆಳೆಗಾರರಿಗೆ ಪ್ಯಾಕೇಜ್‌ ಘೋಷಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು