ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಂಪುಟಕ್ಕೆ‌ ಸೇರಿಸಿಕೊಳ್ಳುವುದು ಹೈಕಮಾಂಡ್‌ಗೆ ಬಿಟ್ಟಿದ್ದು: ಈಶ್ವರಪ್ಪ

Last Updated 22 ಜುಲೈ 2022, 4:09 IST
ಅಕ್ಷರ ಗಾತ್ರ

ಮೈಸೂರು: 'ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಮುಕ್ತನಾಗಿದ್ದೇನೆ. ನನ್ನನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು, ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು' ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, 'ನನ್ನದೇನೂ ತಪ್ಪಿಲ್ಲದಿದ್ದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಈಗ ಸತ್ಯಕ್ಕೆ ಜಯ ಸಿಕ್ಕಿದೆ' ಎಂದರು.

'ಈ ಪ್ರಕರಣದಿಂದ‌ ಆರೋಪ ಮುಕ್ತನಾಗಿ ಬರುತ್ತೇನೆಂದು ಆರಂಭದಲ್ಲೇ ಗೊತ್ತಿತ್ತು. ಏಕೆಂದರೆ, ನಾನ್ಯಾವ ತಪ್ಪನ್ನೂ ಮಾಡಿರಲಿಲ್ಲ. ಪಕ್ಷಕ್ಕೆ ಮುಜುಗರ ಆಗಬಾರದೆಂದು ರಾಜೀನಾಮೆ ಕೊಟ್ಟಿದ್ದೆ. ಪಕ್ಷಕ್ಕೆ ಆಗಿದ್ದ ಮುಜುಗರವೂ ಈಗ ನಿವಾರಣೆ ಆದಂತಾಗಿದೆ' ಎಂದು ಹೇಳಿದರು.

'ಪೊಲೀಸರು 'ಬಿ' ರಿಪೋರ್ಟ್ ಹಾಕಿದ ಮೇಲೂ ಕಾಂಗ್ರೆಸ್ ನಾಯಕರು ಪ್ರಕರಣದಲ್ಲಿ ನನ್ನ ಬಗ್ಗೆ ಟೀಕೆ ಮಾಡುತ್ತಿರುವುದು ಬೇಸರ ತರಿಸಿದೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ, ಪ್ರಕರಣದ ತನಿಖೆಗಳು ಹೇಗೆ ನಡೆಯುತ್ತವೆ ಎಂಬುದು ಗೊತ್ತಿದ್ದರೂ 'ಬಿ' ರಿಪೋರ್ಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದು ಬೇಸರ ಮೂಡಿಸಿದೆ. ಅವರು ಕಾನೂನು ಪಂಡಿತ ಆಗಿದ್ದರೂ ಸುಮ್ಮನೆ ಟೀಕೆ ಮಾಡುತ್ತಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಸೇರಿ ಕಾಂಗ್ರೆಸ್‌ಗೆ ಜಾತಿ ಪಟ್ಟ ಅಂಟಿಸಿದ್ದಾರೆ. ಶಿವಕುಮಾರ್ ಒಳ್ಳೆಯ ನಾಯಕ ಎಂದುಕೊಂಡಿದ್ದೆ. ನಾನು ಮುಖ್ಯಮಂತ್ರಿಯಾಗಲು ಒಕ್ಕಲಿಗ ಸಮುದಾಯ ಬೆನ್ನಿಗೆ ನಿಲ್ಲಬೇಕು ಎಂದು ಹೇಳುವ ಮೂಲಕ ಜಾತಿವಾದಿ ಆಗಿದ್ದಾರೆ. ಕುರುಬರ ನಾಯಕ ಎಂದು ಹೇಳಿರುವ ಸಿದ್ದರಾಮಯ್ಯ ಕೂಡ ಜಾತಿವಾದಿಯಾಗಿದ್ದಾರೆ‌. ಇವರಿಬ್ಬರಿಂದ ಕಾಂಗ್ರೆಸ್ ಪಕ್ಷವು ಜಾತಿಯ ಕೆಸರಿಗೆ‌ ಬಿದ್ದಿದೆ' ಎಂದು ಟೀಕಿಸಿದರು.

'ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿ.ಕೆ.ಹರಿಪ್ರಸಾದ್ ಮಾತ್ರ ಕಾಂಗ್ರೆಸ್‌ಗೆ ಗೌರವ ತರುವ ಮಾತನಾಡುತ್ತಿದ್ದಾರೆ' ಎಂದರು.

'ನಮ್ಮ ಸರ್ಕಾರದ ಯಾವ ಸಚಿವರ ಮೇಲೂ ಒಂದೇ ಒಂದು ಭ್ರಷ್ಟಾಚಾರದ ನಿರ್ದಿಷ್ಟ ಪ್ರಕರಣ ಇಲ್ಲ. ಶೇ 40ರಷ್ಟು ಲಂಚದ ಆರೋಪ ಮಾಡುವ ಕಾಂಗ್ರೆಸ್ ನಾಯಕರು ಯಾವುದಾದರೊಂದು ಪ್ರಕರಣವನ್ನು ತೋರಿಸಲಿ' ಎಂದು ಸವಾಲು ಹಾಕಿದರು.

'ಯಾರದ್ದೋ ಹೇಳಿಕೆ ಹಿಡಿದುಕೊಂಡು ಆರೋಪ ಮಾಡುವುದು ಸರಿಯಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT