ವರ್ಷ ಕಳೆದರೂ ತೆರೆಯದ ಮುಕ್ತ ವಿ.ವಿ ಕ್ಯಾಂಟೀನ್‌

7
ಮಾನ್ಯತೆ ಸಿಗುವ ವೇಳೆಗೆ ಪುನರಾರಂಭ ಸಾಧ್ಯತೆ

ವರ್ಷ ಕಳೆದರೂ ತೆರೆಯದ ಮುಕ್ತ ವಿ.ವಿ ಕ್ಯಾಂಟೀನ್‌

Published:
Updated:
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕ್ಯಾಂಟೀನ್

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕ್ಯಾಂಟೀನ್‌ ಬಾಗಿಲು ಮುಚ್ಚಿ ವರ್ಷದ ಮೇಲಾಗಿದೆ. ಇನ್ನೇನು ವಿ.ವಿ.ಗೆ ಮಾನ್ಯತೆ ಸಿಗುತ್ತಿದ್ದು, ಕ್ಯಾಂಟೀನ್‌ ಪುನರಾರಂಭಗೊಳ್ಳಬೇಕು ಎಂದು ವಿ.ವಿ.ಯ ಸಿಬ್ಬಂದಿ ಒತ್ತಾಯಿಸಿದ್ದಾರೆ.

2013–14ನೇ ಸಾಲಿನಿಂದ ವಿ.ವಿ.ಗೆ ಮಾನ್ಯತೆ ರದ್ದಾಗಿದ್ದು, ಅಂದಿನಿಂದ ವಿ.ವಿ.ಯಲ್ಲಿ ವಿದ್ಯಾರ್ಥಿಗಳು ಇಲ್ಲ. ಇದಕ್ಕೂ ಮುನ್ನ ವಿ.ವಿ.ಯ ಆವರಣ ವರ್ಷಪೂರ್ತಿ ಗಿಜಿಗುಡುತ್ತಿತ್ತು. ರಾಜ್ಯದ ವಿವಿಧ ಭಾಗಗಳಿಂದ ವಿ.ವಿ.ಗೆ ಬರುವ ವಿದ್ಯಾರ್ಥಿಗಳು ಇಲ್ಲಿನ ತಿಂಡಿ ತಿನಿಸು, ಚಹಾ– ಕಾಫಿಯನ್ನು ಆಶ್ರಯಿಸಿದ್ದರು. ಅಲ್ಲದೇ, ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೂ ಇಲ್ಲಿಗೆ ಹಸಿವು ತಣಿಸಿಕೊಳ್ಳಲು ಬರುತ್ತಿದ್ದರು.

ಆದರೆ, ಈಗ ವಿ.ವಿ.ಯೊಂದಿಗೆ ಈ ಕ್ಯಾಂಟೀನ್‌ ಸಹ ಮೌನವಾಗಿದೆ. ಕ್ಯಾಂಟೀನಿನ ಗುತ್ತಿಗೆಯ ಅವಧಿ ಮುಗಿದು, ಕೊಂಚ ಹೊತ್ತಿನ ಅವಧಿಗೆ ವಿಸ್ತರಣೆಯನ್ನೂ ಮಾಡಲಾಗಿತ್ತು. ನಂತರ, ವಿಸ್ತರಣೆಯ ಅವಧಿಯೂ ಮುಗಿದು ಕ್ಯಾಂಟೀನ್‌ ಬಾಗಿಲು ಮುಚ್ಚಿತು. ಇದೀಗ ವಿ.ವಿ.ಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್ಎಸ್‌) ಶಿಬಿರ ನಡೆಯುತ್ತಿದ್ದು, ಅಲ್ಲಿನ ಶಿಬಿರಾರ್ಥಿಗಳು ಕ್ಯಾಂಟೀನಿನ ಸೌಕರ್ಯಗಳನ್ನು ಬಳಸಿಕೊಂಡು ತಾವೇ ಆಹಾರ ತಯಾರಿಸಿಕೊಳ್ಳುತ್ತಿದ್ದಾರೆ.

ಆರಂಭಕ್ಕೆ ಕ್ಷಣಗಣನೆ:

ವಿ.ವಿ.ಗೆ 2018–19ನೇ ಸಾಲಿಗೆ ಮಾನ್ಯತೆ ನೀಡಲು ವಿಶ್ವವಿದ್ಯಾಲಯ ಅನುದಾನ ಆಯೋಗವು ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಇದೇ ವರ್ಷ ಕ್ಯಾಂಟೀನ್‌ ಶುರುವಾಗುವ ಸಾಧ್ಯತೆ ಇದೆ ಎಂದು ವಿ.ವಿ.ಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದವು. ವಿ.ವಿ.ಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿನಿತ್ಯ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗುತ್ತಾರೆ. ಅಲ್ಲದೇ, ಹಳೆಯ ಸಾಲುಗಳ ಪರೀಕ್ಷೆಗಳು ನಡೆಯಬೇಕಿದೆ. ಇದಕ್ಕಾಗಿ ವಿದ್ಯಾರ್ಥಿಗಳು ರಾಜ್ಯದ ವಿವಿಧೆಡೆಯಿಂದ ಬರುತ್ತಾರೆ. ‌ಇವರೆಲ್ಲರಿಗೂ ಆಹಾರ ಪೂರೈಕೆ ಸವಾಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆ ಪ್ರಕ್ರಿಯೆ ಆರಂಭವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ವಿ.ವಿ.ಯ ಸಿಬ್ಬಂದಿ ಕ್ಯಾಂಟೀನಿನ ಮೇಲೆ ಅವಲಂಬಿತರಾಗಿಲ್ಲ. ಬಹುತೇಕ ಸಿಬ್ಬಂದಿ ಮನೆಯಿಂದಲೇ ಊಟ ತರುತ್ತಿದ್ದಾರೆ. ಟೀ–ಕಾಫಿ ವಿ.ವಿ.ಯ ಅತಿಥಿಗೃಹದಲ್ಲಿ ಸಿಗುತ್ತಿದೆ. ಅಲ್ಲಿಯೂ ಹಣ ನೀಡಿಯೇ ತೆಗೆದುಕೊಳ್ಳಬೇಕು. ಕ್ಯಾಂಟೀನಿನ ಅಗತ್ಯ ಇರುವುದು ವಿದ್ಯಾರ್ಥಿಗಳಿಗೆ ಮಾತ್ರ ಎಂದು ಸಿಬ್ಬಂದಿ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !