ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ನಿಯಮ ಮೀರುತ್ತಿರುವ ಕೆಎಸ್‌ಒಯು; ಶಿವರಾಮು ಆರೋಪ

Last Updated 2 ಜುಲೈ 2021, 9:42 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 2012–13ನೇ ಸಾಲಿನ ಹೊರರಾಜ್ಯದ ಶೈಕ್ಷಣಿಕ ಸಹಯೋಗ ಕೇಂದ್ರಗಳ (ಅಕಾಡೆಮಿಕ್ ಕೊಲಾಬರೇಟಿವ್ ಇನ್‌ಸ್ಟಿಟ್ಯೂಟ್‌) ಮೂಲಕ ನೋಂದಾಯಿತರಾದ ವಿವಿಧ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ನಿರ್ಧರಿಸಿರುವುದು ವಿವಾದಕ್ಕೆಡೆ ಮಾಡಿದೆ.

‘ಮಾನ್ಯತೆ ಕಳೆದುಕೊಳ್ಳಲು ಕಾರಣವಾದ ಶೈಕ್ಷಣಿಕ ಸಹಯೋಗ ಕೇಂದ್ರಗಳ ಮೂಲಕವೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರು ಏಪ್ರಿಲ್ 8ರಂದು ಸುತ್ತೋಲೆ ಹೊರಡಿಸಿದ್ದಾರೆ. ಆದರೆ, ಯುಜಿಸಿ ಮರು ಮಾನ್ಯತೆ ನೀಡುವಾಗ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಬಾರದು ಎಂದು ಹೇಳಿದೆ. ಇದು ಯುಜಿಸಿ ನಿಯಮಗಳ ಸ್ಪಷ್ಟ ಉಲ್ಲಂಘನೆ’ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಹಾಗೂ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಎಸ್.ಶಿವರಾಮು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.‌

ವಿಪರ್ಯಾಸ ಎಂದರೆ, ಇದೇ ಶೈಕ್ಷಣಿಕ ಸಹಯೋಗ ಕೇಂದ್ರಗಳ ವಿರುದ್ಧ ವಿಶ್ವವಿದ್ಯಾಲಯವು ನಿಯಮ ಮೀರಿ ಚಟುವಟಿಕೆ ನಡೆಸುತ್ತಿರುವ ಕುರಿತು 2019ರಲ್ಲಿ ಇಲ್ಲಿನ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದೆ. ಈ ಕುರಿತು ನ್ಯಾಯಾಲಯಗಳಲ್ಲೂ ಪ್ರಕರಣಗಳಿವೆ. ಒಂದು ವೇಳೆ ಪದವಿ ಪ್ರಮಾಣಪತ್ರ ನೀಡಿದರೆ ಯುಜಿಸಿಯಿಂದ ಕೆಎಸ್‌ಒಯು ಮತ್ತೆ ಮಾನ್ಯತೆ ಕಳೆದುಕೊಳ್ಳುವ ಅಪಾಯ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಭೂ ಮಾಫಿಯಾ ಹಾಗೂ ಶಿಕ್ಷಣ ಮಾಫಿಯಾ ವಿರುದ್ಧ ಹೋರಾಡುತ್ತಿರುವ ನನಗೆ ಕೆಲವು ಬೆದರಿಕೆ ಕರೆಗಳು ಬರುತ್ತಿವೆ. ಸದ್ಯದಲ್ಲೇ ಈ ಕುರಿತು ಪೊಲೀಸ್ ಕಮಿಷನರ್‌ ಅವರಿಗೆ ಮನವಿ ಮಾಡಿ ಪೊಲೀಸ್ ರಕ್ಷಣೆ ಕೋರಲಾಗುವುದು’ ಎಂದರು.

ಯುಜಿಸಿಯಿಂದ ಅನುಮತಿ ದೊರಕಿದೆ– ಕುಲಪತಿ ಎಸ್.ವಿದ್ಯಾಶಂಕರ್

ಆರೋಪ ಕುರಿತು ‘ಪ್ರಜಾವಾಣಿ’ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅವರನ್ನು ಸಂಪರ್ಕಿಸಿದಾಗ ಅವರು, ಆರೋಪ ಸತ್ಯಕ್ಕೆ ದೂರ ಎಂದು ಪ್ರತಿಕ್ರಿಯಿಸಿದರು.

‘ನಾವು ಪದವಿಪ್ರಮಾಣ ಪತ್ರ ನೀಡುತ್ತಿರುವುದು 2012 ಹಾಗೂ ಅದಕ್ಕೂ ಹಿಂದೆ ದಾಖಲಾಗಿರುವ ತಾಂತ್ರಿಕೇತರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಮಾತ್ರ. ಇವರಿಗೆ ಪದವಿ ಪ್ರಮಾಣ ಪತ್ರ ನೀಡಬೇಕು ಎಂದು ಯುಜಿಸಿಯೇ ಅನುಮತಿ ನೀಡಿ, ಪತ್ರವನ್ನೂ ಬರೆದಿದೆ. ಇದರ ಆಧಾರದ ಮೇಲೆಯೇ ಪ್ರಮಾಣಪತ್ರ ವಿತರಿಸಲಾಗುತ್ತಿದೆ. ಇದರಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT