ಸಿಕ್ಕಿದ ಮಾನ್ಯತೆ, ತೀರದ ಸಮಸ್ಯೆ

7
ಕೆಎಸ್‌ಒಯು ಪದವಿ ಪಡೆದವರ ಭವಿಷ್ಯ ಈಗಲೂ ಅತಂತ್ರ; ಹೋರಾಟಕ್ಕೆ ಸಜ್ಜಾಗುತ್ತಿದೆ ವೇದಿಕೆ

ಸಿಕ್ಕಿದ ಮಾನ್ಯತೆ, ತೀರದ ಸಮಸ್ಯೆ

Published:
Updated:
Deccan Herald

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಒಯು) ಕ್ಕೆ 2018–19ನೇ ಸಾಲಿಗೇನೋ ಮಾನ್ಯತೆ ಸಿಕ್ಕಿದೆ. ಆದರೆ, 2012ರಿಂದ 2016ರೊಳಗೆ ಪದವಿ ಪಡೆದಿರುವವರ ಭವಿಷ್ಯ ಈಗಲೂ ಅತಂತ್ರವಾಗಿದೆ.

2012–13, 2013–14, 2015–16ನೇ ಸಾಲಿನಲ್ಲಿ ಕೆಎಸ್ಒಯುವಿನಲ್ಲಿ ಬಹುತೇಕ ಎಲ್ಲ ಸಾಂಪ್ರದಾಯಿಕ ಕೋರ್ಸ್‌ಗಳು ನಡೆದಿವೆ. ಈ ಮೂರೂ ಸಾಲುಗಳಿಂದ ಒಟ್ಟು 95 ಸಾವಿರ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಆದರೆ, ಸಾಲುಗಳ ಮಾನ್ಯತೆಯನ್ನು ಯುಜಿಸಿ ರದ್ದುಪಡಿಸಿದ್ದ ಕಾರಣ, ಈ ಎಲ್ಲರ ಪದವಿಗಳಿಗೆ ಬೆಲೆ ಇಲ್ಲದಾಗಿದೆ.

ಹಾಗಾಗಿ, ಈ 95 ಸಾವಿರ ಮಂದಿಯ ಭವಿಷ್ಯ ಈಗಲೂ ಅತಂತ್ರವೇ ಆಗಿದೆ. ಉದ್ಯೊಗ ಸಿಗದೇ, ಪದೋನ್ನತಿ ಕಾಣದೇ ಕಂಗಲಾಗಾಗಿದ್ದಾರೆ. ಕೆಎಸ್‌ಒಯುಗೆ ಮಾನ್ಯತೆ ಸಿಗುತ್ತಿದೆ ಎಂಬ ಸಂತಸ ಕೆಎಸ್‌ಒಯು ಅಧಿಕಾರಿ ಹಾಗೂ ಸಿಬ್ಬಂದಿ ಮಟ್ಟಕ್ಕಷ್ಟೇ ಸೀಮಿತವಾಗಿದ್ದು, ವಿ.ವಿ.ಯನ್ನೇ ನಂಬಿಕೊಂಡು ಓದಿದ ವಿದ್ಯಾರ್ಥಿಗಳ ಬೇಸರ ಮುಂದುವರಿದಿದೆ.

ಸಜ್ಜಾಗುತ್ತಿದೆ ವೇದಿಕೆ:

5 ವರ್ಷದಿಂದಲೂ ಮಾನ್ಯತೆಗಾಗಿ ಹೋರಾಟ ನಡೆಸಿ ಬೇಸತ್ತಿರುವ ವಿದ್ಯಾರ್ಥಿಗಳು ಇದೀಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಸಿದ್ಧತೆ ನಡೆಸಿದ್ದಾರೆ. ‘ನಮಗೆ ಮಾನ್ಯತೆ ಸಿಗದೇ ಇರುವ ಕಾರಣ, ನಾವು ಸಮಾಜದ ಮುಖ್ಯವಾಹಿನಿಗೆ ಸೇರಲಾಗುತ್ತಿಲ್ಲ. ಯುಜಿಸಿಯು ನಮ್ಮ ಸಾಲಿಗೆ ಮಾನ್ಯತೆ ನೀಡದೇ ಅನ್ಯಾಯ ಮಾಡಿದೆ. ನಾವು ತಾಂತ್ರಿಕೇತರ ಕೋರ್ಸ್‌ಗಳ ವಿದ್ಯಾರ್ಥಿಗಳು. ನಮಗೆ ಮಾನ್ಯತೆ ನೀಡಲೇಬೇಕು. ಹೀಗೆಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಹೀಗಿದ್ದೂ ಮಾನ್ಯತೆ ಕೊಡದೇ ಇದ್ದಲ್ಲಿ ಸುಪ್ರೀಂ ಕೋರ್ಟಿನ ಮೆಟ್ಟಿಲನ್ನೇ ಹತ್ತಬೇಕಾಗುತ್ತದೆ’ ಎಂದು ವಿದ್ಯಾರ್ಥಿ ಮುಖಂಡ ವೈ.ಲೋಹಿತ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.‌

‘ತಾಂತ್ರಿಕೇತರ ಕೋರ್ಸ್‌ ಪದವಿ ಪಡೆದಿರುವವರಿಗೆ ಮಾನ್ಯತೆ ಕೊಡಲಿ. ಅಕ್ರಮವಾಗಿದೆ ಎಂಬ ಆರೋಪವಿರುವುದು ತಾಂತ್ರಿಕ ಕೋರ್ಸುಗಳಿಗೆ ಮಾತ್ರ. ಹೀಗಿರುವಾಗ ನಮಗೇಗೆ ಶಿಕ್ಷೆ. ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳದೇ ವಿದ್ಯಾರ್ಥಿಗಳ ಮೇಲೆ ಗಧಾಪ್ರಹಾರ ಮಾಡುವುದು ಎಷ್ಟರಮಟ್ಟಿಗೆ ಸರಿ?’ ಎಂದು ಪ್ರಶ್ನಿಸಿದರು.

ರಾಜ್ಯದೊಳಗೆ ಮಾನ್ಯತೆ:

ಈ ಸಾಲುಗಳಲ್ಲಿ ಪದವಿ ಪಡೆದಿರುವವರಿಗೆ ರಾಜ್ಯದ ಮಿತಿಯೊಳಗೆ ಮಾನ್ಯತೆ ನೀಡುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿತ್ತು. ಅಂತೆಯೇ, ರಾಜ್ಯ ಸರ್ಕಾರವು ಯಾವುದೇ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದರೂ ಸಲ್ಲಿಸುವ ಅವಕಾಶ ಇದೆ. ಆದರೆ, ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಅರ್ಜಿ ಹಾಕಿಕೊಳ್ಳುವಂತೆ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಅತೀವ ಅನ್ಯಾಯವಾಗಲಿದೆ ಎಂದು 2012–13ನೇ ಸಾಲಿನಲ್ಲಿ ಪದವಿ ಪಡೆದಿರುವ ಬೀರಲಿಂಗ ಹೇಳಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !