ಕೆಎಸ್‌ಆರ್‌ಟಿಸಿ ನಿಯಮ; ವಿದ್ಯಾರ್ಥಿಗಳ ಪರದಾಟ

7
ಶಾಲೆ, ಕಾಲೇಜುಗಳಿಂದ ಊರಿಗೆ ತಲುಪುವಷ್ಟರಲ್ಲಿ ವಿದ್ಯಾರ್ಥಿಗಳು ಹೈರಾಣ

ಕೆಎಸ್‌ಆರ್‌ಟಿಸಿ ನಿಯಮ; ವಿದ್ಯಾರ್ಥಿಗಳ ಪರದಾಟ

Published:
Updated:
Deccan Herald

ಮೈಸೂರು: ಇಲ್ಲಿನ ರಾಮಸ್ವಾಮಿ ವೃತ್ತ ಹಾಗೂ ಬಲ್ಲಾಳ್ ವೃತ್ತಗಳಿಂದ ಅವರ ಊರಿಗೆ ತಲುಪುವಷ್ಟರಲ್ಲಿ ವಿದ್ಯಾರ್ಥಿಗಳು ಹೈರಾಣಾಗುತ್ತಾರೆ. ಕಾಲೇಜಿನ ಪಾಠಪ್ರವಚನಗಳಿಗಿಂತ ಕೆಎಸ್‌ಆರ್‌ಟಿಸಿ ಬಸ್‌ಗಳಿಂದಲೇ ಹೆಚ್ಚು ಅವರಿಗೆ ಸಮಸ್ಯೆ ಉಂಟಾಗುತ್ತಿದೆ.

ಮಧ್ಯಾಹ್ನದ ಹೊತ್ತಿಗೆ ರಾಮಸ್ವಾಮಿ ಹಾಗೂ ಬಲ್ಲಾಳ್ ವೃತ್ತಕ್ಕೆ ಬಂದರೆ ವಿದ್ಯಾರ್ಥಿಗಳ ಪರದಾಟ ತಿಳಿಯುತ್ತದೆ. ಬೋಗಾದಿ, ಗಂಗೋತ್ರಿ ಬಡಾವಣೆ, ದೀಪಾನಗರ, ಪ್ರೀತಿ ಬಡಾವಣೆ, ಮಲ್ಲಹಳ್ಳಿ, ಜಿ.ಬಿ.ಸರಗೂರು, ಮಾದಹಳ್ಳಿ, ಬೀರಿಹುಂಡಿ, ಕುಮಾರಬೀಡು, ಮರಟಿಕ್ಯಾತನಹಳ್ಳಿ, ಗೋಹಳ, ಜಟ್ಟಿ ಹುಂಡಿ... ಭಾಗದ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು ಬಸ್‌ ಹಿಡಿಯಬೇಕಾದರೆ ಸಾಕುಬೇಕಾಗುತ್ತದೆ.

ಇಲ್ಲಿಗೆ ಕನಿಷ್ಠ ಎಂದರೂ ಪ್ರತಿ 15ರಿಂದ 20 ನಿಮಿಷಕ್ಕೆ ಒಂದೊಂದು ಬಸ್‌ ಸೌಲಭ್ಯ ಇದೆ. ಪ್ರತಿ ಬಸ್‌ಗಳೂ ನಗರ ಬಸ್‌ನಿಲ್ದಾಣದಲ್ಲೇ ಭರ್ತಿಯಾಗಿ ಬಿಡುತ್ತವೆ. ರಾಮಸ್ವಾಮಿ ವೃತ್ತದಲ್ಲಿ ಇಳಿಯಬೇಕಾದ ಪ್ರಯಾಣಿಕರನ್ನು ವೃತ್ತದ ಸಿಗ್ನಲ್‌ನಲ್ಲೇ ಇಳಿಸಿ, ಬಸ್‌ನಿಲ್ದಾಣದಲ್ಲಿ ನಿಲ್ಲಿಸದೇ ಬಸ್‌ಗಳನ್ನು ಚಾಲಕರು ಮುಂದೆ ಚಲಾಯಿಸುತ್ತಾರೆ.

ಬಸ್‌ ಬರುವುದೂ ಹಸಿರು ದೀಪದ ಸಿಗ್ನಲ್ ಬರುವುದೂ ಏಕಕಾಲದಲ್ಲಿ ನಡೆದರೆ ಮಾತ್ರ ವಿದ್ಯಾರ್ಥಿಗಳಿಗೆ ಬಸ್ ಹತ್ತಲು ಸಾಧ್ಯವಾಗುತ್ತದೆ. ಅದೂ ಕಾಲಿಡಲು ಆಗದಷ್ಟು ಜನಸಂದಣಿ ನಡುವೆ ವಿದ್ಯಾರ್ಥಿಗಳು ಬಸ್ ಹತ್ತಬೇಕಾಗಿದೆ. ಇದರಿಂದ ವಿದ್ಯಾರ್ಥಿನಿಯರು ಹೆಚ್ಚು ಸಮಸ್ಯೆಗೆ ಒಳಗಾಗುತ್ತಾರೆ.

ಇದೇ ರೀತಿಯ ಸಮಸ್ಯೆ ಶಾರದಾ ವಿಲಾಸ ಕಾಲೇಜು, ಜೆಎಸ್ಎಸ್‌ ಪ್ರೌಢಶಾಲೆ, ಹಾರ್ಡ್ವಿಕ್ ಶಾಲೆ ಹಾಗೂ ಕಾಲೇಜಿನ ಮಕ್ಕಳಿಗೆ ಉಂಟಾಗುತ್ತಿದೆ. ಪ್ರತಿ ಸಂಜೆ ಬಲ್ಲಾಳ್ ವೃತ್ತದಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಗೆ ತೆರಳಲು ಬಸ್‌ಗಾಗಿ ಕಾದು ನಿಂತಿರುತ್ತಾರೆ.

ಸಮಸ್ಯೆಗೆ ಏನು ಕಾರಣ?
ಈ ಸಮಸ್ಯೆಗೆ ಮುಖ್ಯ ಕಾರಣ ಕೆಎಸ್‌ಆರ್‌ಟಿಸಿಯ ಬಿಗಿ ನಿಯಮಗಳು. ವಿದ್ಯಾರ್ಥಿಗಳ ವಾಸಸ್ಥಳದಿಂದ ಅವರ ಕಾಲೇಜು ಅಥವಾ ಶಾಲೆ ಇರುವ ಹತ್ತಿರದ ಬಸ್‌ನಿಲ್ದಾಣದವರೆಗೆ ಮಾತ್ರ ಪಾಸ್‌ ವಿತರಿಸಬೇಕು ಎಂಬ ನಿಯಮದಿಂದಲೇ ವಿದ್ಯಾರ್ಥಿಗಳಿಗೆ ಸಮಸ್ಯೆ ಸೃಷ್ಟಿಯಾಗಿದೆ. ಒಂದು ವೇಳೆ ಇವರಿಗೆ ನಗರ ಬಸ್‌ನಿಲ್ದಾಣದವರೆಗೂ ಪಾಸ್ ವಿತರಿಸಿದರೆ ವಿದ್ಯಾರ್ಥಿಗಳು ನಗರ ಬಸ್‌ನಿಲ್ದಾಣಕ್ಕೆ ತೆರಳಿ ಅಲ್ಲಿಂದಲೇ ಬಸ್‌ ಹತ್ತುತ್ತಾರೆ. ರಾಮಸ್ವಾಮಿ ಹಾಗೂ ಬಲ್ಲಾಳ್ ವೃತ್ತಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳು ಬಿಡಿಬಿಡಿಯಾಗಿ ನಗರ ಬಸ್‌ನಿಲ್ದಾಣಕ್ಕೆ ತೆರಳುವುದರಿಂದ ಅಲ್ಲೂ ಅಧಿಕ ಒತ್ತಡ ಸೃಷ್ಟಿಯಾಗುವುದಿಲ್ಲ. ಕಳೆದೆರಡು ವರ್ಷದ ಹಿಂದೆ ಈ ಸೌಲಭ್ಯ ಇತ್ತು. ಅಧಿಕಾರಿಗಳು ಏಕಾಏಕಿ ಬಿಗಿನಿಲುವು ತಳೆದಿರುವುದು ಕಂಟಕವಾಗಿದೆ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ.‌

ಆದರೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳುವುದು ಬೇರೆಯದೆ ಮಾತು. ವಿದ್ಯಾರ್ಥಿಗಳ ವಾಸಸ್ಥಳದಿಂದ ಕಾಲೇಜು ಅಥವಾ ಶಾಲೆ ಇರುವ ಸಮೀಪದ ನಿಲ್ದಾಣದವರೆಗೆ ಮಾತ್ರ ಪಾಸ್ ನೀಡಬೇಕು ಎಂಬುದು ಮೊದಲಿನಿಂದಲೂ ಇರುವ ನಿಯಮ. ಹಿಂದೆ ಇದ್ದ ಅಧಿಕಾರಿಗಳು ನಿಯಮಬಾಹಿರವಾಗಿ ನಗರ ಬಸ್‌ನಿಲ್ದಾಣದವರೆಗೆ ಪಾಸ್ ವಿತರಿಸಿದ್ದರು. ಈಗ ನಿಯಮವನ್ನು ಅನುಸರಿಸಲಾಗುತ್ತಿದೆ ಎಂದು ಹೇಳುತ್ತಾರೆ.

ಪರಿಹಾರ?

ಕೆಎಸ್‌ಆರ್‌ಟಿಸಿ ನಗರ ವಿಭಾಗದ ಅಧಿಕಾರಿಗಳ ಗಮನಕ್ಕೆ ಸಮಸ್ಯೆ ತಂದಾಗ ಅವರು ಸರಿಪಡಿಸುವ ಭರವಸೆ ನೀಡುತ್ತಾರೆ. ಇದೇ ಸಮಸ್ಯೆ ಹಳ್ಳಿ ಬೋಗಾದಿಯಲ್ಲೂ ಇತ್ತು. ಈಗ ಅಲ್ಲಿಗೆ ಒಬ್ಬ ಸಂಚಾರ ನಿಯಂತ್ರಕರನ್ನು ನೇಮಕ ಮಾಡಿದ ಮೇಲೆ ಸಮಸ್ಯೆ ಬಗೆಹರಿದಿದೆ. ಈಗ ರಾಮಸ್ವಾಮಿ ವೃತ್ತದಲ್ಲೂ ವಿದ್ಯಾರ್ಥಿಗಳ ಒತ್ತಡ ಹೆಚ್ಚು ಇರುವ ಸಮಯದಲ್ಲಿ ಸಂಚಾರ ನಿಯಂತ್ರಕರೊಬ್ಬರನ್ನು ನಿಯೋಜಿಸಲಾಗುವುದು. ಆಗ ಅವರು ಪ್ರತಿ ಬಸ್‌ ಅನ್ನು ನಿಲ್ದಾಣದಲ್ಲಿ ನಿಲ್ಲಿಸಿ ವಿದ್ಯಾರ್ಥಿಗಳು ಹತ್ತಲು ಸಹಕರಿಸುವರು. ಒಂದೆರಡು ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುತ್ತಾರೆ.

ಶೌಚಕ್ಕಾಗಿಯಾದರೂ ಪಾಸ್ ವಿತರಿಸಿ!

ರಾಮಸ್ವಾಮಿ ವೃತ್ತದಲ್ಲಿ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರ ಸ್ಥಿತಿ ಶೋಚನೀಯವಾಗಿದೆ. ಸಮೀಪದ ಮಹಾರಾಣಿ ಕಾಲೇಜಿನಲ್ಲಿ ಅಗತ್ಯಕ್ಕೆ ಬೇಕಾದಷ್ಟು ಶೌಚಾಲಯಗಳಿಲ್ಲ. ನಗರ ಬಸ್‌ ನಿಲ್ದಾಣದವರೆಗಾದರೂ ಪಾಸ್‌ ವಿತರಿಸಿದರೆ ಅಲ್ಲಿನ ಶೌಚಾಲಯವನ್ನಾದರೂ ಬಳಸಬಹುದು ಎಂಬುದು ವಿದ್ಯಾರ್ಥಿನಿಯರ ಬೇಡಿಕೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಯೊಬ್ಬರು ‘ನಾವು ಸೀಟು ಹಿಡಿಯಬೇಕು ಎಂಬ ಆಸೆಯಿಂದ ನಗರ ಬಸ್‌ ನಿಲ್ದಾಣದ ವರೆಗೆ ಪಾಸ್‌ ಕೇಳುತ್ತಿಲ್ಲ. ಇಂಥ ಪರಿಸ್ಥಿತಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಮಕ್ಕಳಿಗೆ ಬಂದಿದ್ದರೆ ಅವರು ಸುಮ್ಮನೇ ಕುಳಿತು ಕೊಳ್ಳುತ್ತಿದ್ದರೇ?’ ಎಂದು ನೊಂದು ನುಡಿದರು.

ರಾಮಸ್ವಾಮಿ ವೃತ್ತದ ಬಳಿ ವಿದ್ಯಾರ್ಥಿಗಳ ಸಂದಣಿ ಹೆಚ್ಚು ಇರುವ ಸಮಯದಲ್ಲಿ ಒಬ್ಬ ಸಂಚಾರ ನಿಯಂತ್ರಕರನ್ನು ನಿಯೋಜಿಸಿ, ಬಸ್‌ ನಿಲ್ಲಿಸಲು ಸೂಚನೆ ನೀಡಲಾಗುವುದು ಶ್ರೀನಿವಾಸ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ ನಗರ ಘಟಕ

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !