ಗುರುವಾರ , ಆಗಸ್ಟ್ 11, 2022
21 °C
ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿದ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕಸ್ ಫೆಡರೇಷನ್‌ ಮುಖಂಡರು

ಗೊಂದಲದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆಯ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳಲ್ಲೇ ಒಡಕು ಮೂಡಿದ್ದು, ಕೆಲವು ಸಂಘಟನೆಗಳ ಸದಸ್ಯರು ಪೊಲೀಸ್ ಭದ್ರತೆ ನೀಡಿದರೆ ಕಾರ್ಯನಿರ್ವಹಿಸಲು ಸಿದ್ಧ ಎಂದು ತಿಳಿಸಿದ್ದಾರೆ.

ಈಗಾಗಲೇ ಭಾನುವಾರ ರಾತ್ರಿ 10 ಗಂಟೆಯವರೆಗೆ 7ಕ್ಕೂ ಹೆಚ್ಚು ಬಸ್‌ಗಳು ರಾಜ್ಯದ ವಿವಿಧ ಭಾಗಗಳಿಗೆ ಪೊಲೀಸ್ ಭದ್ರತೆಯಲ್ಲಿ ತೆರಳಿವೆ. ಇನ್ನಷ್ಟು ಬಸ್‌ ಸಂಚರಿಸಲು ಸಿದ್ಧ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕಸ್ ಫೆಡರೇಷನ್ನಿನ ಮೈಸೂರು ನಗರ ಸಾರಿಗೆ ವಿಭಾಗದ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಪ್ರತಿಕ್ರಿಯಿಸಿ, ‘ನಾವು ಕೆಲಸ ಮಾಡಲು ಸಿದ್ಧ. ಪೊಲೀಸ್ ಭದ್ರತೆ ನೀಡಬೇಕು’ ಎಂದು ತಿಳಿಸಿದ್ದಾರೆ.

ಆದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಒಕ್ಕೂಟದ ಜಿಲ್ಲಾ ಮುಖಂಡ ವಿಶ್ವನಾಥ್ ಪ್ರತಿಕ್ರಿಯಿಸಿ, ‘ಮುಷ್ಕರ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಸತತ 3ನೇ ದಿನವಾದ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಲಿಲ್ಲ. ಇದನ್ನೇ ನಂಬಿಕೊಂಡಿರುವ ಬಡ ಮತ್ತು ಮಧ್ಯಮ ವರ್ಗದ ಜನರು ಬೇರೆ ಊರುಗಳಿಗೆ ಸಂಚಾರ ನಡೆಸಲಾಗದೇ ಪರದಾಡಿದರು. ಅನಿವಾರ್ಯವಿದ್ದವರು ಖಾಸಗಿ ವಾಹನಗಳತ್ತ ಮುಖ ಮಾಡಿದರು.

ನಗರ ಬಸ್‌ ನಿಲ್ದಾಣದಲ್ಲೂ ಜನರು ಇರಲಿಲ್ಲ. ಒಂದು ಬಸ್ ಸಹ ಸಂಚಾರ ಆರಂಭಿಸಲಿಲ್ಲ. ಇಡೀ ನಿಲ್ದಾಣ ಬಿಕೋ ಎನ್ನುತ್ತಿತ್ತು.

ಪ್ರತಿಭಟನೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಒಕ್ಕೂಟದ ನೇತೃತ್ವದಲ್ಲಿ ಸಿಬ್ಬಂದಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ‘ನಮ್ಮನ್ನೂ ಸರ್ಕಾರಿ ನೌಕರರು ಎಂದು ಪರಿಗಣಿಸಿ’ ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಒಕ್ಕೂಟದ ಮೈಸೂರು ವಿಭಾಗದ ಮುಖಂಡ ವಿಶ್ವನಾಥ್, ‘ಗುರುವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ಯಲ್ಲಿ ಸರ್ಕಾರ ನಮ್ಮನ್ನು ಅಕ್ಷರಶಃ ನಾಯಿಗಳಂತೆ ಎಳೆದೊಯ್ದು ಬಂಧಿಸಿತು. ಅಂದೇ ಮಾತುಕತೆ ನಡೆಸಿದ್ದರೆ, ಕನಿಷ್ಠ ಮನವಿ ಸ್ವೀಕರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಒಕ್ಕೂಟದ ಮುಖಂಡರನ್ನು ಬಂಧಿಸಿದ್ದು, ಎಲ್ಲ ಸಿಬ್ಬಂದಿಯನ್ನು ಕೆರಳಿಸಿದೆ. ಸ್ವಇಚ್ಛೆಯಿಂದ ಪ್ರತಿಭಟನೆಗೆ ಬಂದಿದ್ದಾರೆ’ ಎಂದು ತಿಳಿಸಿದರು.

‘ಈಗಲೂ ನಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕೆಂಬುದು ನಮ್ಮ ಬೇಡಿಕೆ. ನಮಗೂ ಸರ್ಕಾರಿ ನೌಕರರಿಗೂ ಶೇ 45ರಷ್ಟು ವೇತನದಲ್ಲಿ ವ್ಯತ್ಯಾಸ ಇದೆ. ಇದು ಅನ್ಯಾಯ ಅಲ್ಲವೇ’ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡರಾದ ಪರಶುರಾಮ, ಶ್ರೀಕಂಠಪ್ರಸಾದ, ಕೀರ್ತಿಕುಮಾರ್, ಗಣೇಶ್, ಆನಂದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.