ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯದತ್ತ ಹೆಜ್ಜೆ ಹಾಕುತ್ತಿರುವ ನೌಕರರು

ಕೆಎಸ್‌ಆರ್‌ಟಿಸಿ ನಗರ ಘಟಕದಿಂದ 71, ಗ್ರಾಮಾಂತರ ಘಟಕದಿಂದ 58 ಬಸ್‌ಗಳು ರಸ್ತೆಗೆ
Last Updated 11 ಏಪ್ರಿಲ್ 2021, 7:32 IST
ಅಕ್ಷರ ಗಾತ್ರ

ಮೈಸೂರು: ಹಲವು ಮಂದಿ ಕೆಎಸ್‌ಆರ್‌ಟಿಸಿ ನೌಕರರು ಶನಿವಾರ ಕರ್ತವ್ಯಕ್ಕೆ ಹಾಜರಾಗಿದ್ದು, ಬಸ್‌ಗಳ ಸಂಚಾರವೂ ಹೆಚ್ಚಾಗಿದೆ. ‌

ಗ್ರಾಮಾಂತರ ಘಟಕದಲ್ಲಿ 200ಕ್ಕೂ ಅಧಿಕ ಚಾಲಕರು ಮತ್ತು ನಿರ್ವಾಹಕರು ಹಾಗೂ 100ಕ್ಕೂ ಅಧಿಕ ಮಂದಿ ಮೆಕ್ಯಾನಿಕ್‌ಗಳು ಕರ್ತವ್ಯಕ್ಕೆ ಬಂದಿದ್ದಾರೆ. ನಗರ ಘಟಕದಲ್ಲೂ 150 ಮಂದಿ ಚಾಲಕರು ಮತ್ತು ನಿರ್ವಾಹಕರು ಕೆಲಸಕ್ಕೆ ಹಾಜರಾಗಿದ್ದಾರೆ. ಹೀಗಾಗಿ, ಸಂಚಾರ ಆರಂಭಿಸಿದ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ.

ನಗರ ಘಟಕದಿಂದ 71 ಬಸ್‌ಗಳು ರಸ್ತೆಗಿಳಿದರೆ, ಗ್ರಾಮಾಂತರ ಘಟಕದಿಂದ 58 ಬಸ್‌ಗಳು ಸಂಚಾರ ಆರಂಭಿಸಿವೆ. ಇನ್ನಷ್ಟು ಮಂದಿ ಭಾನುವಾರ ಕರ್ತವ್ಯಕ್ಕೆ ಹಾಜರಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.‌

ಕೆಎಸ್‌ಆರ್‌ಟಿಸಿ ಬಸ್‌ಗಳ ಜತೆ ಖಾಸಗಿ ಬಸ್‌ಗಳ ಓಡಾಟವೂ ಶನಿವಾರ ಹೆಚ್ಚಾಗಿದೆ. ಗ್ರಾಮಾಂತರ ಘಟಕದಿಂದ 410 ಖಾಸಗಿ ಬಸ್‌ಗಳು ರಾಜ್ಯದ ವಿವಿಧ ಭಾಗಗಳಿಗೆ ಸಂಚಾರ ನಡೆಸಿವೆ. ನಗರ ಘಟಕದಲ್ಲೂ ಮ್ಯಾಕ್ಸಿಕ್ಯಾಬ್‌ಗಳು ಸೇರಿದಂತೆ ಖಾಸಗಿ ವಾಹನಗಳು ಸಂಚರಿಸಿವೆ.‌

ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಪ್ರತಿಕ್ರಿಯಿಸಿ, ‘ನಗರ ಘಟಕದ ಅಧ್ಯಕ್ಷ ರೇವಣ್ಣ ಅವರ ನೇತೃತ್ವದಲ್ಲಿ ನಾನೂ ಸೇರಿದಂತೆ ಮುಂಚೂಣಿ ನಾಯಕರು ಕರ್ತವ್ಯಕ್ಕೆ ಹಾಜರಾಗಿದ್ದೇವೆ. ಇದರಿಂದ ನಗರ ಘಟಕದ ಕೆಎಸ್‌ಆರ್‌ಟಿಸಿ ಬಸ್‌ ಸೇವೆಯಲ್ಲಿ ಹೆಚ್ಚಳವಾಗಿದೆ. ಭಾನುವಾರ ಮತ್ತಷ್ಟು ಮಂದಿ ಕರ್ತವ್ಯಕ್ಕೆ ಬರುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ನೌಕರರ ಕೂಟದ ಗೌರವ ಅಧ್ಯಕ್ಷ ಸಿ.ಡಿ.ವಿಶ್ವನಾಥ್ ಪ್ರತಿಕ್ರಿಯಿಸಿ, ‘ಕಾರ್ಮಿಕರ ಹಿತಾಸಕ್ತಿಯನ್ನು ಗಾಳಿಗೆ ತೂರಿ ಸಂಘಟನೆಯೊಂದರ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಪಟ್ಟವರು ಮಾತ್ರವೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ’ ಎಂದು ಹೇಳಿದ್ದಾರೆ.

‘ನೂರಾರು ಮಂದಿ ನೌಕರರನ್ನು ವರ್ಗಾವಣೆ ಮಾಡಲಾಗಿದೆ. ಇದರಿಂದ ಹೆದರಿದ ನೌಕರರು ಕರ್ತವ್ಯಕ್ಕೆ ಬರುತ್ತಿದ್ದಾರೆ. ಆದರೆ, ಇಂತಹ ಬೆದರಿಕೆ ತಂತ್ರಗಳು ಫಲಿಸುವುದಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT