ಪ್ರವಾಸಿಗರ ಕೊರತೆ: ಪ್ಯಾಕೇಜ್‌ ರದ್ದು ಪಡಿಸಿದ ಕೆಎಸ್‌ಟಿಡಿಸಿ

7
ಕೊಡಗಿನಲ್ಲಿ ಪ್ರವಾಹದ ಬಳಿಕ ತಗ್ಗಿದ ಪ್ರವಾಸೋದ್ಯಮ

ಪ್ರವಾಸಿಗರ ಕೊರತೆ: ಪ್ಯಾಕೇಜ್‌ ರದ್ದು ಪಡಿಸಿದ ಕೆಎಸ್‌ಟಿಡಿಸಿ

Published:
Updated:

ಮೈಸೂರು: ಕೊಡಗಿನಲ್ಲಾಗಿದ್ದ ಪ್ರವಾಹದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ನೆಲಕಚ್ಚಿದೆ. ಪ್ರವಾಸಿಗರ ಸಂಖ್ಯೆ ತೀರಾ ಕ್ಷೀಣಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ (ಕೆಎಸ್‌ಟಿಡಿಸಿ) ವು ಮೈಸೂರಿನಿಂದ ಹಮ್ಮಿಕೊಳ್ಳುತ್ತಿದ್ದ ಬಹುತೇಕ ಎಲ್ಲ ಪ್ಯಾಕೇಜ್‌ಗಳನ್ನು ರದ್ದುಪಡಿಸಿದೆ.

ಮೈಸೂರಿನಿಂದ ಒಂದು ದಿನದ, ಎರಡು ದಿನದಿಂದ ನಾಲ್ಕು ದಿನಗಳ ಪ್ರವಾಸ ಪ್ಯಾಕೇಜ್‌ಗಳನ್ನು ನಿಗಮವು ಆಯೋಜಿಸುತ್ತಿತ್ತು. ವೆಬ್‌ಸೈಟ್‌ ಮೂಲಕ ಅಥವಾ ನೇರವಾಗಿ ಮೈಸೂರಿನ ಕಚೇರಿಯಲ್ಲಿ ಶುಲ್ಕ ಪಾವತಿಸಿ ಪ್ಯಾಕೇಜ್‌ಗಳಲ್ಲಿ ಹೋಗಬಹುದಿತ್ತು. ಇದಕ್ಕಾಗಿ ನಿಗಮವು ವಿಶೇಷ ಬಸ್‌ಗಳನ್ನು ಹೊಂದಿದೆ. ಆದರೆ, ಪ್ರವಾಸಿಗರ ಸಂಖ್ಯೆ ಬೆರಳೆಣಿಕೆ ಆಗುತ್ತಿರುವ ಕಾರಣ, ಪ್ಯಾಕೇಜ್‌ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.

ಪ್ರವಾಹವೇ ಮುಖ್ಯ ಕಾರಣ: ಕೊಡಗಿನಲ್ಲಿ ಪ್ರವಾಹ ಉಂಟಾಗಿದ್ದೇ ಪ್ರವಾಸೋದ್ಯಮ ಕುಸಿಯಲು ಮುಖ್ಯ ಕಾರಣವಾಗಿದೆ ಎಂದು ಮೈಸೂರು ವಿಭಾಗದ ನಿಗಮದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು. ಮೈಸೂರಿಗೆ ಬರುವ ಪ್ರವಾಸಿಗರು ಕೊಡಗನ್ನೂ ಮನಸಿನಲ್ಲಿಟ್ಟುಕೊಂಡೇ ಬರುತ್ತಾರೆ. ಆದರೆ, ಕೊಡಗಿನಲ್ಲಿ ಉಂಟಾದ ಪ್ರವಾಹದ ಹಿನ್ನೆಲೆ ನಕಾರಾತ್ಮಕ ಸಂದೇಶ ರವಾನೆಯಾಗಿರುವ ಕಾರಣ, ಪ್ರವಾಸಿಗರು ಮೈಸೂರಿನತ್ತ ಬರುತ್ತಿಲ್ಲ. ಹಾಗಾಗಿ, ಪ್ಯಾಕೇಜ್‌ಗಳನ್ನು ಮೈಸೂರಿನಿಂದ ಕಾಯ್ದಿರಿಸುತ್ತಿಲ್ಲ. ಮೈಸೂರು ಮಾರ್ಗವಾಗಿ ಕೆಲವು ಪ್ಯಾಕೇಜ್‌ಗಳು ಬೆಂಗಳೂರಿನಿಂದ ಬುಕ್‌ ಆಗುತ್ತಿವೆ ಎಂದು ಹೇಳಿದರು.

‘ಮೈಸೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ಬಹುದಿನಗಳ ಪ್ಯಾಕೇಜ್‌ ಈಗಲೂ ಇವೆ. ಆದರೆ, ಕಾಯ್ದಿರಿಸಲಾಗುತ್ತಿಲ್ಲ. ಪ್ರವಾಸಿಗರ ಸಂಖ್ಯೆ ಹೆಚ್ಚಿದರೆ ಮತ್ತೆ ಶುರು ಮಾಡುತ್ತೇವೆ. ಹೊಸ ವರ್ಷದಿಂದ ಮತ್ತೆ ಚೇತರಿಕೆ ಕಾಣಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ತಿಳಿಸಿದರು.

ಕೆಎಸ್‌ಟಿಡಿಸಿ ಮೂಲಕ ಪ್ಯಾಕೇಜ್‌ ಕಾಯ್ದಿರಿಸಿದರೆ ಕೆಎಸ್‌ಆರ್‌ಟಿಸಿಯ ಬಸ್‌ಗಳನ್ನೂ ಬಳಸಿಕೊಳ್ಳಲಾಗುತ್ತದೆ. ಕೆಲವು ಪ್ಯಾಕೇಜ್‌ಗಳಲ್ಲಿ ಹೋಟೆಲ್‌ ಕೊಠಡಿ ಕಾಯ್ದಿರಿಸಲಾಗಿರುತ್ತದೆ. ಕೆಲವು ಪ್ಯಾಕೇಜ್‌ಗಳಲ್ಲಿ ಕೇವಲ ಪ್ರಯಾಣವನ್ನು ಭರಿಸಲಾಗುತ್ತದೆ. ಸದ್ಯಕ್ಕೆ ಈ ಯಾವ ಪ್ಯಾಕೇಜ್ ಇಲ್ಲ ಎಂದು ಮಾಹಿತಿ ನೀಡಿದರು.

‘ಕೊಡಗಿನಲ್ಲಿ ಪ್ರವಾಸಿ ತಾಣಗಳು ಚೆನ್ನಾಗಿಯೇ ಇವೆ. ಆದರೆ, ಪ್ರವಾಹದ ಹಿನ್ನೆಲೆಯಲ್ಲಿ ಹಾಳಾಗಿವೆ ಎಂದು ಅಪಪ್ರಚಾರವಾಗಿದೆ. ಈ ಭಾವನೆ ಸರಿಹೋಗಲು ಇನ್ನೂ ಕೆಲವು ಕಾಲ ಹಿಡಿಯಬಹುದು. ನಿಗಮವು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಸಾಮಾಜಿಕ ಜಾಲತಾಣಗಳು, ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಬಳಸಿಕೊಂಡು ಅರಿವು ಮೂಡಿಸುವ ಪ್ರಯತ್ನ ಮಾಡಲಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !