ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕರಹಳ್ಳಿ ಕೆರೆ ಏರಿಯ ಮೇಲೆ ಮೂಡಿದ ಬಿರುಕು

ಇಂದಿನಿಂದಲೇ ಶುರುವಾಗಲಿದೆ ದುರಸ್ತಿ ಕಾರ್ಯ; ಶೀಘ್ರವೇ ಪಾದಚಾರಿ ಮಾರ್ಗ ಮೇಲ್ದರ್ಜೆಗೆ
Last Updated 23 ಏಪ್ರಿಲ್ 2019, 14:42 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನ ಆಕರ್ಷಣೆಯ ಕೇಂದ್ರಗಳಲ್ಲಿ ಒಂದಾದ ಕುಕ್ಕರಹಳ್ಳಿ ಕೆರೆಯ ಏರಿಯ ಮೇಲೆ ಬಿರುಕು ಮೂಡಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಸೋಮವಾರ ಸಂಜೆ ಸುರಿದ ಮಳೆಗೆ ಏರಿಯ ಮೇಲೆ ಬಿರುಕು ಉಂಟಾಗಿರುವುದು ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ. ವಾಯುವಿಹಾರಕ್ಕೆಂದು ಬಂದ ನಾಗರಿಕರು ಏರಿಯ ಮೇಲೆ ಉಂಟಾಗಿದ್ದ ಹಳ್ಳಗಳನ್ನು ಕಂಡು ಹೌಹಾರಿದರು. ಕಳೆದ ಹಲವು ದಿನಗಳಿಂದ ಮಳೆಯಾಗುತ್ತಿದ್ದು, ಇದರಿಂದ ಏರಿ ದುರ್ಬಲವಾಗಿದೆ. ಕೂಡಲೇ ಈ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದರು.

ಕುಕ್ಕರಹಳ್ಳಿ ಕೆರೆಗೆ ಅಂಟಿಕೊಂಡಂತೆ ಇರುವ ಬೋಗಾದಿ ರಸ್ತೆ ಕಡೆಗಿನ ಏರಿಗೆ ಸಾಕಷ್ಟು ವಯಸ್ಸಾಗಿದೆ. ಕಾಲಾಂತರದಲ್ಲಿ ಏರಿಯನ್ನು ಸಾಕಷ್ಟು ಬಾರಿ ಕಾಯಕಲ್ಪಕ್ಕೆ ಒಳಪಡಿಸಲಾಗಿದೆ. ಏರಿಯ ಮೇಲ್ಭಾಗವನ್ನು ಬಲಪಡಿಸಿ, ಏರಿಯ ಅಕ್ಕ– ಪಕ್ಕ ಬಲಪಡಿಸಲಾಗಿದೆ. ಪ್ರೊ.ಕೆ.ಎಸ್‌.ರಂಗಪ್ಪ ಅವರು ಕುಲಪತಿಯಾಗಿದ್ದ ಅವಧಿಯಲ್ಲಿ ಏರಿಯ ಮೇಲೆ ಸುರಕ್ಷಾ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ. ಏರಿಗೆ ಬಲವಾದ ಬೇಲಿಯನ್ನೂ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ.

ಏರಿಯಲ್ಲಿ ಬಿರುಕು ಮೂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಏರಿ ಪರಿಶೀಲಿಸಿದ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ‘ಏರಿಯನ್ನು ಬುಧವಾರದಿಂದಲೇ ದುರಸ್ತಿಪಡಿಸಲಾಗುವುದು. ನಾಗರಿಕರು ಆತಂಕಪಡುವ ಅಗತ್ಯವಿಲ್ಲ. ಏರಿಕೆಯು ಸುರಕ್ಷಿತವಾಗಿದೆ’ ಎಂದು ತಿಳಿಸಿದರು.

ಪಾದಚಾರಿ ಮಾರ್ಗ ಬಲಪಡಿಸಲು ಆದ್ಯತೆ
ಕುಕ್ಕರಹಳ್ಳಿ ಕೆರೆಯಲ್ಲಿ ಒಟ್ಟು 3.5 ಕಿಲೋಮೀಟರ್ ಸುತ್ತಳತೆಯ ಪಾದಚಾರಿ ಮಾರ್ಗವಿದೆ. ಇದರಲ್ಲಿ 1.5 ಕಿಲೋಮೀಟರ್‌ನಷ್ಟು ಉದ್ದದ ಏರಿಯೇ ಇದೆ. ಇದರ ಅಭಿವೃದ್ಧಿ ಕಾರ್ಯಕ್ಕಾಗಿ ಸಿದ್ಧತೆ ಶುರುವಾಗಿದೆ.

‘ಇದಕ್ಕಾಗಿ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಪರಿಸರಪ್ರಿಯರು, ತಜ್ಞರನ್ನು ಸೇರಿಸಿಕೊಳ್ಳಲಾಗಿದೆ. ಮೈಸೂರು ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರು ಹಾಗೂ ಇತರ ತಜ್ಞ ಸಿಬ್ಬಂದಿ ಬೆನ್ನೆಲುಬಾಗಿ ಇರುತ್ತಾರೆ. ವೈಜ್ಞಾನಿಕವಾಗಿ, ಕೆರೆಯ ಪರಿಸರಕ್ಕೆ ಹಾನಿಯಾಗದ ಹಾಗೆ ಎಚ್ಚರಿಕೆ ವಹಿಸಲಾಗುತ್ತದೆ. ಕೆರೆಯ ಏರಿಎಲ್ಲೆಲ್ಲಿ ದುರ್ಬಲವಾಗಿ ಎನ್ನುವುದನ್ನು ಗುರುತಿಸಿ ಅಲ್ಲಿ ಭದ್ರಪಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಂತೆಯೇ, 3.5 ಕಿಲೋಮೀಟರ್‌ ಉದ್ದದ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಿ ನಾಗರಿಕ ಸೌಲಭ್ಯ ನೀಡುವುದಕ್ಕೆ ಆದ್ಯತೆ ನೀಡಲಾಗುತ್ತಿದೆ’ ಎಂದು ಪ್ರೊ.ಗಾಂಧಿ ತಿಳಿಸಿದರು.

ಕೆರೆಯ ಹೂಳನ್ನು ತೆಗೆಯಲುಜಿಲ್ಲಾಡಳಿತವು ಈ ಹಿಂದೆ ₹ 2 ಕೋಟಿ ನೀಡಿತ್ತು. ಆ ಹಣ ಇನ್ನೂ ಬಳಕೆಯಾಗದೇ ಹಾಗೆಯೇ ಉಳಿದಿದೆ. ಅಲ್ಲದೇ, ಪ್ರವಾಸೋದ್ಯಮ ಇಲಾಖೆಯು ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸುವುದಾಗಿ ಅಧಿಕೃತ ಪತ್ರವ್ಯವಹಾರ ನಡೆಸಿದೆ. ಈಗಾಗಲೇ ಇಲಾಖೆಯ ಸಿಬ್ಬಂದಿ ಕೆರೆಯನ್ನು ಹಲವು ಬಾರಿ ವೀಕ್ಷಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣದಿಂದಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿರಲಿಲ್ಲ. ಈಗ ತುರ್ತು ಪರಿಸ್ಥಿತಿ ಇರುವ ಕಾರಣ ವಿನಾಯಿತಿ ಸಿಕ್ಕಿದೆ. ಹಾಗಾಗಿ, ಶೀಘ್ರವೇ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT