ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌–ಜೆಡಿಎಸ್‌ ಒಡೆದ ಮನೆ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಟೀಕೆ
Last Updated 9 ಏಪ್ರಿಲ್ 2019, 15:32 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದಲ್ಲಿರುವ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರ ಒಡೆದ ಮನೆಯಾಗಿದ್ದು, ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಟೀಕಿಸಿದರು.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೂ ಮುನ್ನ ಅವರು ಮಾತನಾಡಿದರು.

ರಾಜ್ಯದಲ್ಲಿರುವುದು ‘20 ಪರ್ಸೆಂಟ್‌’ ಸರ್ಕಾರ. ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗಾಗಿ ರೈತರ ₹ 46 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಎಚ್‌.ಡಿ.ಕುಮಾರಸ್ವಾಮಿ ಜನರಿಗೆ ಮೋಸ ಮಾಡಿದ್ದಾರೆ. ಇದುವರೆಗೆ ₹ 4.600 ಕೋಟಿ ಸಾಲ ಕೂಡಾ ಮನ್ನಾ ಮಾಡಿಲ್ಲ. ಇದು ದ್ರೋಹವಲ್ಲದೆ ಇನ್ನೇನು ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ಚೀನಾ, ಅಮೆರಿಕ ದೇಶಗಳು ಅಚ್ಚರಿಪಡುವ ರೀತಿಯಲ್ಲಿ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಣೆ ಮಾಡಿದ್ದಾರೆ. ಆದ್ದರಿಂದ ಇನ್ನೊಂದು ಅವಧಿಗೆ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಸಂಸದ ಹಾಗೂ ಮೈಸೂರು–ಕೊಡಗು ಕ್ಷೇತ್ರದ ಅಭ್ಯರ್ಥಿ ಪ್ರತಾಪಸಿಂಹ ಮಾತನಾಡಿ, ’ಐದು ವರ್ಷಗಳ ಹಿಂದೆ ನಾನು ಗೆದ್ದು ಬಂದಾಗ ಎರಡು ಆಯ್ಕೆಗಳಿದ್ದವು. ಹಬ್ಬ, ಜಾತ್ರೆ, ಜಯಂತಿಗಳಲ್ಲಿ ಪಾಲ್ಗೊಂಡು ಸಾಂಪ್ರದಾಯಿಕ ರಾಜಕಾರಣ ಮಾಡುವುದು ಹಾಗೂ ಅಭಿವೃದ್ಧಿ ರಾಜಕಾರಣ ಮಾಡುವುದು. ನಾನು ಅಭಿವೃದ್ಧಿ ರಾಜಕಾರಣ ಮಾಡಿದ್ದೇನೆ’ ಎಂದು ಹೇಳಿದರು.

‘ಕಳೆದ ಐದು ವರ್ಷಗಳಲ್ಲಿ ಹಲವು ಯೋಜನೆಗಳನ್ನು ತಂದಿದ್ದೇನೆ. ರಾಜ್ಯದ 28 ಸಂಸದರಲ್ಲಿ ಯಾರೊಬ್ಬರೂ ಎರಡಕ್ಕಿಂತ ಹೆಚ್ಚು ಹೊಸ ರೈಲುಗಳನ್ನು ತಂದಿಲ್ಲ. ನಾನು ಆರು ಹೊಸ ರೈಲುಗಳನ್ನು ತಂದಿದ್ದೇನೆ. 2004 ರಿಂದ 2014ರ ವರೆಗೆ ಮೈಸೂರಿಗೆ ಯಾರೂ ಹೊಸ ರೈಲು ತಂದಿರಲಿಲ್ಲ’ ಎಂದರು.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಟೀಕೆಗೆ ಪ್ರತಿಕ್ರಿಯಿಸಿ, ‘ಚಾಮುಂಡೇಶ್ವರಿ ಕ್ಷೇತ್ರವನ್ನು ಹಲವು ಸಲ ಪ್ರತಿನಿಧಿಸಿದರೂ ಸಿದ್ದರಾಮಯ್ಯ ಅವರಿಗೆ ಅಲ್ಲಿನ ನೀರಿನ ಸಮಸ್ಯೆ ನೀಗಿಸಲು ಆಗಿಲ್ಲ. ಅವರಿಂದ ನಾನು ಅಭಿವೃದ್ದಿಯ ಪಾಠ ಕಲಿಯಬೇಕಿಲ್ಲ’ ಎಂದು ತಿರುಗೇಟು ನೀಡಿದರು.

ಅವರು ಬಾದಾಮಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸದತ್ತ ಗಮನ ನೀಡಲಿ. ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಮಾಡಿದ ಅನ್ಯಾಯವನ್ನು ಅಲ್ಲಿನ ಮತದಾರರಿಗೂ ಮಾಡುವುದು ಬೇಡ. ದ್ವೇಷದ ರಾಜಕಾರಣ ಬಿಡಲಿ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ ಮಾತನಾಡಿ, ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ಕಳಂಕರಹಿತ, ಯಾವುದೇ ಭ್ರಷ್ಟಾಚಾರದ ವಾಸನೆ ಇಲ್ಲದ ಸರ್ಕಾರ ಸರ್ಕಾರ ಕೊಟ್ಟಿದ್ದಾರೆ. ಅವರ ಆಡಳಿತ ನಮ್ಮ ದೇಶದ ರಾಜಕೀಯ ದಿಕ್ಕನ್ನೇ ಬದಲಿಸಿದೆ ಎಂದು ಶ್ಲಾಘಿಸಿದರು.

ಭಾರತವು ದೊಡ್ಡ ದೇಶ. ಇಂತಹ ದೇಶವನ್ನು ಮುನ್ನಡೆಸಲು ಶಕ್ತಿಶಾಲಿಯಾದ ನಾಯಕನ ಅಗತ್ಯವಿದೆ. ಮೋದಿ ಅವರಂತಹ ನಾಯಕ ಸಿಕ್ಕಿರುವುದು ನಮ್ಮ ಅದೃಷ್ಟ. ಅವರಿಗೆ ದೇಶದ ಚಿಂತೆ ಬಿಟ್ಟು ಬೇರೆ ಯಾವುದೇ ಚಿಂತೆ ಇಲ್ಲ ಎಂದರು.

ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ಮಾತನಾಡಿ, 25 ವರ್ಷಗಳ ಬಳಿಕ ಮೋದಿ ಅವರ ನೇತೃತ್ವದಲ್ಲಿ ಈ ದೇಶಕ್ಕೆ ಸುಭದ್ರ ಸರ್ಕಾರ ಸಿಕ್ಕಿದೆ. ಮತ್ತೊಮ್ಮೆ ಅವರ ಕೈಬಲಪಡಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ರಾಜ್ಯ ಚುನಾವಣಾ ಸಹ ಉಸ್ತುವಾರಿ ಕಿರಣ್‌ ಮಹೇಶ್ವರಿ, ಶಾಸಕರಾದ ಎಸ್‌.ಎ.ರಾಮದಾಸ್, ಎಲ್‌.ನಾಗೇಂದ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶಿವಣ್ಣ, ನಗರ ಘಟಕದ ಅಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್, ಇತರ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT