ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮರೇಶ್‌– ಜಯಂತಿ ಸಂಗೀತ ‘ಸಾಂಗತ್ಯ’!

ವಾಣಿವಿಲಾಸ ಮೊಹಲ್ಲಾ 8ನೇ ಕ್ರಾಸ್‌: ವೀಣೆ, ವಯಲಿನ್‌ ನಾದದ ಮೋಡಿ
Last Updated 7 ಸೆಪ್ಟೆಂಬರ್ 2022, 3:53 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ಸಂಗೀತದ ಪ್ರಧಾನ ತಂತಿ ವಾದ್ಯಗಳಾದ ‘ವಯಲಿನ್‌’, ‘ವೀಣೆ’ಯಲ್ಲಿ ವಿದ್ವಾನ್‌ ಕುಮರೇಶ್‌ ಹಾಗೂ ವಿದುಷಿ ಜಯಂತಿ ಕುಮರೇಶ್‌ ನಾದ ಸುಧೆ ಹರಿಸಿದರು.

ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ನಡೆಯುತ್ತಿರುವ 61ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ಕುಮರೇಶ್‌–ಜಯಂತಿ ದಂಪತಿ ವಾದ್ಯಗಳ ಸಂಗೀತ ‘ಸಾಂಗತ್ಯ’ವನ್ನು ಅನಾವರಣಗೊಳಿಸಿದರು.

ಕೊಳಲು– ವೀಣೆ, ವಯಲಿನ್‌– ಕೊಳಲು ಸಾಂಗತ್ಯದಲ್ಲಿ ಕರ್ನಾಟಕ ಸಂಗೀತದ ಕಛೇರಿಗಳನ್ನು ಹಲವು ಕಲಾವಿದರು ನೀಡಿದ್ದಾರೆ. ಆದರೆ, ವಯಲಿನ್‌–ವೀಣೆ ಎರಡೂ ತಂತಿ ವಾದ್ಯಗಳು. ಅವುಗಳಲ್ಲಿಯೇ ದಶಕಗಳಿಂದ ಅಪರೂಪದ ಪ್ರಯೋಗಗಳನ್ನು ನಡೆಸಿರುವುದು ದಂಪತಿ ವಿಶೇಷ!

ಭೈರವಿ ರಾಗದಪಚ್ಚಿಮಿರಿಯಂ ಆದಿಪ್ಪಯ್ಯರ್‌ ಅವರಅಟತಾಳ ವರ್ಣ ‘ವಿರಿಬೋಣಿ’ಯನ್ನು ನುಡಿಸುವ ಮೂಲಕ ಕಛೇರಿಯನ್ನು ಸಂಗೀತ ‘ಜೋಡಿ’ ಆರಂಭಿಸಿತು. ಜಯಂತಿ ಅವರೇ ಅಭಿವೃದ್ಧಿಪಡಿಸಿದ ‘ಸರಸ್ವತಿ ವೀಣೆ’ಯಲ್ಲಿ ಹೊಮ್ಮಿದ ನಾದವು ಸಹೃದಯರನ್ನು ಭಾವ ಪರವಶರನ್ನಾಗಿಸಿದರೆ, ‘ವಯಲಿನ್‌’ ಭಾವದ ತೀವ್ರತೆಯನ್ನು ಹೆಚ್ಚಿಸುತ್ತಿತ್ತು.

ನಂತರ ‘ಕಲ್ಯಾಣಿ’ ರಾಗದ ರೂಪಕ ತಾಳದಮುತ್ತುಸ್ವಾಮಿ ದೀಕ್ಷಿತರ ಕೃತಿ ‘ಗಣಪತೇ ಮಹಾಮತೇ ಗೌರಿಸುತ ಮಾಂಪಾಹೀ’ಯನ್ನು ನುಡಿಸಿದರು.ಮೃದಂಗದಲ್ಲಿ ಅನಂತ ಆರ್‌. ಕೃಷ್ಣನ್‌, ಘಟಂನಲ್ಲಿ ಗಿರಿಧರ ಉಡುಪ ಸಾಥ್ ನೀಡಿದರು. ಸವಿಸ್ತಾರವಾದ ರಾಗಾಲಾಪನೆಯ ಜೊತೆಗೆ‍ಪಕ್ಕವಾದ್ಯಕಾರರಿಗೂ ಜುಗಲ್‌ಬಂದಿ ಅವಕಾಶವನ್ನು ದಂಪತಿ ನೀಡಿದರು.

ಶಂಕರಾಚಾರ್ಯರ ‘ಸೌಂದರ್ಯ ಲಹರಿ’ ಕೃತಿಯ ಭಾಗವೊಂದನ್ನು ‘ಖರಹರಪ್ರಿಯ’ ರಾಗದಲ್ಲಿ ನುಡಿಸಿದ ಜೋಡಿ, ‘ನಳಿನಕಾಂತಿ’ ರಾಗದಲ್ಲಿ ರಾಗತಾನಪಲ್ಲವಿ, ‘ಬಿಹಾಗ್’ ರಾಗದಲ್ಲಿ ಜಾನಪದ ಮಟ್ಟೊಂದನ್ನು ಪ್ರಸ್ತುತಪಡಿಸಿದರು. ನಂತರ ‘ಮಧ್ಯಮಾವತಿ’ ರಾಗದ ಶ್ಯಾಮಾಶಾಸ್ತ್ರಿ ಅವರ‘ಕಾಮಾಕ್ಷಿ’ ಕೃತಿಯನ್ನು ನುಡಿಸಿದರು.

ಅದಕ್ಕೂ ಮುನ್ನ ಧನ್ಯಾ ಹಾಗೂ ಶ್ರೀನಿವಾಸ ಫಣಿ ಅವರು ‘ಕಂದರ್ಪ ಹರನಿಂದ ಬೆಂದುದು’ ಕಾವ್ಯವಾಚನ ಮಾಡಿದರು.

ಭಾರ್ಗವಿ ವೆಂಕಟರಾಂ ಕಛೇರಿ ಇಂದು: ಸೆ.7ರಂದು ಸಂಜೆ 6.45ಕ್ಕೆ ವಿದುಷಿ ಭಾರ್ಗವಿ ವೆಂಕಟರಾಂ ಅವರ ಕರ್ನಾಟಕ ಸಂಗೀತ ಗಾಯನವಿದ್ದು, ವಿದ್ವಾನ್‌ ಕೆ.ವಿ.ಪ್ರಸಾದ್‌– ಮೃದಂಗ, ವಿದ್ವಾನ್‌ ಜಿ.ಎಸ್‌.ರಾಮಾನುಜನ್‌– ಘಟಂ ಹಾಗೂ ವಿದ್ವಾನ್‌ ಎಚ್‌.ಕೆ.ವೆಂಕಟರಾಮ್‌– ವಯಲಿನ್‌ನಲ್ಲಿ ಸಾಥ್‌ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT