ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶಿಗಿಂತ ತ್ರಿವೇಣಿ ಸಂಗಮ ಶ್ರೇಷ್ಠ

ದಕ್ಷಿಣ ಭಾರತದ ಕುಂಭಮೇಳಕ್ಕೆ ಕ್ಷಣಗಣನೆ;
Last Updated 17 ಫೆಬ್ರುವರಿ 2019, 9:32 IST
ಅಕ್ಷರ ಗಾತ್ರ

ತಿ.ನರಸೀಪುರ: ದಕ್ಷಿಣ ಭಾರತದ ಕುಂಭಮೇಳ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದ ತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿ 11ನೇ ಕುಂಭಮೇಳಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರದಿಂದ (ಫೆ.17) ಮೂರು ದಿನಗಳವರೆಗೆ ಕುಂಭಮೇಳ ನಡೆಯಲಿದೆ.

ಸನಾತನ ಧರ್ಮ, ಸಂಸ್ಕೃತಿಗಳ ತವರು ಉತ್ತರ ಭಾರತದ ಪ್ರಯಾಗ, ಹರಿದ್ವಾರ, ಉಜ್ಜಯಿನಿ, ನಾಸಿಕ ಭಾಗದ ನದಿ ಸಂಗಮ ಕ್ಷೇತ್ರದಲ್ಲಿ ಶತಮಾನಗಳಿಂದ ಕುಂಭಮೇಳ ಉತ್ಸವ ಆಚರಣೆಯಲ್ಲಿದೆ. ಈ ಮೇಳಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ.

ಕುಂಭಮೇಳದ ಹುಟ್ಟು: ದೇವತೆಗಳು, ಅಸುರರ ನಡುವೆ ಸಮುದ್ರ ಮಥನ ನಡೆದ ವೇಳೆ ಕ್ಷೀರಸಾಗರದ ಗರ್ಭದಲ್ಲಿರುವ ಅಮೃತ ಕಳಶವನ್ನು ದೇವತೆಗಳ ವೈದ್ಯ ಧನ್ವಂತರಿ ಮೇಲೆತ್ತಿ ತರುವಾಗ ಅದನ್ನು ಅಪಹರಿಸಲು ಅಸುರರು ಯತ್ನಿಸುತ್ತಾರೆ. ಆಗ ಅಮೃತ ಬಿಂದು ಈ ಪುಣ್ಯ ಕ್ಷೇತ್ರಗಳಲ್ಲಿ ಬಿಳುತ್ತದೆ. ಈ ಘರ್ಷಣೆಯಲ್ಲಿ ಅಮೃತ ಕಳಶ ಕೆಳಗೆ ಬೀಳುವುದನ್ನು ಚಂದ್ರನು ತಡೆಗಟ್ಟಿದರೆ, ಅದು ಒಡೆದು ಹೋಗುವುದನ್ನು ಸೂರ್ಯನು ತಡೆಗಟ್ಟಿದ. ಬೃಹಸ್ಪತಿ ಕುಂಭದ ರಕ್ಷಣೆ ಮಾಡಿದ. ಹೀಗಾಗಿ ಮೂರು ಗ್ರಹಗಳ ವಿಶಿಷ್ಟ ಸ್ಥಿತಿಯಿಂದಾಗಿ ಕುಂಭ ಒಡೆಯುವ ಬದಲು ಬಿಂದುಗಳು ಚೆಲ್ಲಿದ ಪರಿಣಾಮ ಕುಂಭಮೇಳ ಎಂಬ ಹೆಸರು ಬಂದಿದೆ.

ಗುರು ಗ್ರಹವು ಕುಂಭರಾಶಿಗೆ ಬಂದಾಗ ಸ್ನಾನ ಮೇಳ ನಡೆಯುತ್ತದೆ. ಕುಂಭಯೋಗದಲ್ಲಿ ತ್ರಿವೇಣಿ ಸಂಗಮ ದಲ್ಲಿ ಪುಣ್ಯ ಸ್ನಾನ ಮಾಡಿದರೆ ಸಹಸ್ರ ಗೋವುಗಳನ್ನು ದಾನ ಮಾಡಿದಷ್ಟು ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇದೆ. ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಕುಂಭಮೇಳವನ್ನು ದಕ್ಷಿಣ ಭಾರತದ ಜನರಿಗೂ ಸಿಗುವಂತೆ ಮಾಡುವ ನಿಟ್ಟಿನಲ್ಲಿ ನಾಡಿನ ಪೀಠಾಧಿಪತಿಗಳಾದ ಕೈಲಾಸಾಶ್ರಮದ ತಿರುಚ್ಚಿ ಮಹಾ ಸ್ವಾಮೀಜಿ, ಆದಿಚುಂಚನಗಿರಿ ಮಠದ ಬಾಲ ಗಂಗಾಧರನಾಥ ಸ್ವಾಮೀಜಿ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಓಂಕಾರಾಶ್ರಮದ ಶಿವಪುರಿ ಸ್ವಾಮೀಜಿ ಅವರು ನಿರ್ಧರಿಸಿ 1989ರಲ್ಲಿ ಪ್ರಥಮ ಬಾರಿಗೆ ತಿ.ನರಸೀಪುರ ಪಟ್ಟಣದ ಕಾವೇರಿ, ಕಪಿಲಾ ಸ್ಫಟಿಕ ಸರೋವರಗಳ ಸಂಗಮದಲ್ಲಿ ಪ್ರಾರಂಭಿಸಿದ್ದರು.

ಸುಮಾರು 10 ಎಕರೆ ಪ್ರದೇಶಗಳಲ್ಲಿ ಧಾರ್ಮಿಕ ಕುಟೀರಗಳು, ಸಭಾ ಮಂಟಪ, ಹೋಮ, ಯಾಗ ಯಜ್ಞಾದಿಗಳ ಜತೆಗೆ ಮಹೋದಯ ಪುಣ್ಯಕಾಲದಲ್ಲಿ ಮೇಳ ಸ್ನಾನವನ್ನು ಆಯೋಜಿಸಲಾಗಿತ್ತು. 1992, 1995, 1998, 2001, 2004, 2007, 2010, 2013, 2016ರಲ್ಲಿ ಕುಂಭಮೇಳಗಳು ನಡೆದಿದ್ದವು. ಈ ವರ್ಷ 11ನೇ ಕುಂಭಮೇಳ ನಡೆಯುತ್ತಿದೆ.

ತಿ.ನರಸೀಪುರವೇ ಏಕೆ?: ಉತ್ತರ ಭಾರತದ ಪ್ರಯಾಗದಲ್ಲಿ ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತಿಯ ತ್ರಿವೇಣಿ ಸಂಗಮವಿದೆ. ವಿಷ್ಣು ಪ್ರತಿಷ್ಠಾ ವಟಾ ವೃಕ್ಷ ಹಾಗೂ ರುದ್ರಪಾದವಿದೆ. ಅದೇ ರೀತಿ ತಿರುಮಕೂಡಲಿನಲ್ಲಿ ಕಪಿಲಾ, ಕಾವೇರಿ ಹಾಗೂ ಗುಪ್ತಗಾಮಿನಿಸ್ಫಟಿಕ ಸರೋವರ ತ್ರಿವೇಣಿ ಸಂಗಮವಿದೆ. ಬ್ರಹ್ಮ ಪ್ರತಿಷ್ಠಾ ಅಶ್ವಥ ವೃಕ್ಷವಿದೆ. ಇಲ್ಲಿ ರುದ್ರಪಾದವಿದೆ. ವಿಷ್ಣುಪಾದವು ನೀರಿನಲ್ಲಿ ಲೀನವಾಗಿದೆ ಎಂಬ ನಂಬಿಕೆ ಇದೆ. ಮತ್ತೊಂದು ವಿಶೇಷವೆಂದರೆ ಪುಣ್ಯ ಸ್ನಾನ ಕೈಗೊಳ್ಳುವ ಮುನ್ನಾ ದೈವಾನುಮತಿ ದೊರಕುತ್ತದೆ ಎಂಬ ಪ್ರತೀತಿ ಇದೆ. ಗರುಡವೊಂದು ವೃಕ್ಷದಿಂದ ಹಾರಿ ಮೂರು ಪ್ರದಕ್ಷಿಣೆ ಹಾಕಿದರೆ ಅದು ಸ್ನಾನಕ್ಕೆ ಸೂಚನೆ. ಮೊದಲಿಗೆ ಸಾಧು ಸಂತರು ಸ್ನಾನ ಕೈಗೊಂಡ ನಂತರ ಭಕ್ತರು ಪುಣ್ಯಸ್ನಾನ ಮಾಡುತ್ತಾರೆ. ಇಂತಹ ಹೋಲಿಕೆ ಕಂಡು ಬಂದ ಹಿನ್ನೆಲೆಯಲ್ಲಿ ತಿರಮಕೂಡಲಿನಲ್ಲಿ ಕಳೆದ ಮೂರು ದಶಕಗಳಿಂದ ಕುಂಭಮೇಳ ನಡೆಸಲಾಗುತ್ತಿದೆ.

ಇದು ಸಾಲದೆಂಬಂತೆ ಕಾಶಿಗಿಂತ ಒಂದು ಗುಲಗಂಜಿ ತೂಕ ಜಾಸ್ತಿ ಎಂಬ ಖ್ಯಾತಿ ಇರುವ ಗುಂಜಾನರಸಿಂಹಸ್ವಾಮಿ, ಅಗಸ್ತ್ಯ ಮುನಿಗಳು ಸ್ಥಾಪಿಸಿದ ಅಗಸ್ತ್ಯೇಶ್ವರ, ಕಾವೇರಿ ನದಿ ದಡದಲ್ಲಿ ಆನಂದೇಶ್ವರ, ತ್ರಿಕೋನಾಕಾರದಲ್ಲಿದ್ದರೆ, ಚೌಡೇಶ್ವರಿ, ಹನುಮಂತೇಶ್ವರ, ವ್ಯಾಸರಾಯ ಮಠದ ಸನ್ನಿಧಿಗಳು ಕ್ಷೇತ್ರವನ್ನು ಪವಿತ್ರ ಕ್ಷೇತ್ರ ಎನ್ನುವಂತೆ ಮಾಡಿರುವುದು ಪುರಾಣ ಇತಿಹಾಸಗಳಲ್ಲಿ ಕಂಡು ಬರುತ್ತದೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ:

ಫೆ.17, 18 ಹಾಗೂ 19ರಂದು ಪ್ರತಿದಿನ ಬೆಳಿಗ್ಗೆ ಸಂಕಲ್ಪ ಹೋಮ, ಅಗಸ್ತ್ಯೇಶ್ವರ ದೇಗುಲದಲ್ಲಿ ರುದ್ರಾಭಿಷೇಕ, ಪೂಜೆ.

ಫೆ.17: ಬೆಳಿಗ್ಗೆ 9 ಗಂಟೆಗೆ ತ್ರಯೋದಶಿ, ಅಗಸ್ತ್ಯೇಶ್ವರನ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ. ಸಂಜೆ 5ಕ್ಕೆ ಧರ್ಮಸಭೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಧ್ವಜಾರೋಹಣ.

ಫೆ.18: ಬೆಳಿಗ್ಗೆ 9 ಗಂಟೆಗೆ ಚತುದರ್ಶಿ, ನದಿಪಾತ್ರದಲ್ಲಿ ಪುಣ್ಯಾಹ, ನವಗ್ರಹಹೋಮ, ಸುದರ್ಶನ ಹೋಮ, ರುದ್ರ ಹೋಮ, ಪೂರ್ಣಾಹುತಿ. 11 ಗಂಟೆಗೆ ಧರ್ಮಸಭೆ, ಸಂಜೆ 4 ಗಂಟೆಗೆ ಮಹಾತ್ಮ ಸಂತರ ಮಹಾಮಂಡಲೇಶ್ವರರ ಸಂಗಮ ಕ್ಷೇತ್ರ ಪ್ರವೇಶ, ಪಟ್ಟಣದ ಗುಂಜಾನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ. ಸಂಜೆ 4 ಗಂಟೆಗೆ ರುದ್ರ ಹೋಮ, ಪೂರ್ಣಾಹುತಿ, 7 ಗಂಟೆಗೆ ಗಂಗಾಪೂಜೆ ವಾರಾಣಸಿ ಮಾದರಿಯಲ್ಲಿ ದೀಪಾರತಿ.

ಫೆ.19: ಬೆಳಿಗ್ಗೆ ನದಿ ಪಾತ್ರದಲ್ಲಿ ಚಂಡಿ ಹೋಮ, ಪೂರ್ಣಾಹುತಿ, ಕುಂಬೋದ್ವಾಸನ, ಸಪ್ತ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿ ಸಂಗಮದಲ್ಲಿ ಸಂಯೊಜನೆ. ಬೆಳಿಗ್ಗೆ 9.35ರಿಂದ 9.50ರವರೆಗೆ ಹಾಗೂ 11.30ರಿಂದ 12ರವರೆಗೆ ಮಹೋದಯ ಪುಣ್ಯ ಕಾಲದ ಮಹಾಮಾಘ ಸ್ನಾನ. ಧರ್ಮ ಸಭೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT