ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ, ನ್ಯಾಯಾಂಗ, ಉದ್ಯಮದಲ್ಲಿ ಬೆಳೆಯಲಿ

ಶಾಸಕ ಯತೀಂದ್ರ ಸಿದ್ದರಾಮಯ್ಯ ಸಲಹೆ
Last Updated 25 ಡಿಸೆಂಬರ್ 2018, 12:35 IST
ಅಕ್ಷರ ಗಾತ್ರ

ಮೈಸೂರು: ರಾಜಕೀಯ, ನ್ಯಾಯಾಂಗ, ಉದ್ಯಮ ವ್ಯವಸ್ಥೆಯಲ್ಲಿ ಕುರುಬ ಸಮುದಾಯದವರು ಹೆಚ್ಚಾಗಿ ಗುರುತಿಸಿಕೊಳ್ಳಬೇಕು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕನಕದಾಸ ನೌಕರರ ಸಹಕಾರ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕನಕದಾಸರ 531ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈ ಮೂರೂ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರೆ ಸಮುದಾಯವು ಶಕ್ತಗೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಇತರ ಸಮುದಾಯಗಳ ಜತೆಗೆ ಗುರುತಿಸಿಕೊಳ್ಳುವುದು, ಸರಿಸಮಾನವಾಗಿ ನಿಲ್ಲುವುದು ಸಾಧ್ಯವಾಗುತ್ತದೆ. ಇದನ್ನು ಆದ್ಯತೆಯಾಗಿ ಸ್ವೀಕರಿಸಿ ಮುಂದುವರೆಯಬೇಕು. ವಿವಿಧ ಸಂಸ್ಥೆಗಳ ಸಂಘಟನೆಗಳು ಇದಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಅವರು ಹೇಳಿದರು.

ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದು ಎಲ್ಲ ಸಾಧನೆಗೂ ಅಡಿಪಾಯ. ಮಕ್ಕಳು ರಾಜಕಾರಣದಲ್ಲಿ ಗುರುತಿಸಿಕೊಳ್ಳಬೇಕಾದರೂ ಉತ್ತಮ ಶೈಕ್ಷಣಿಕ ಹಿನ್ನೆಲೆ ಇರಬೇಕು. ದೊಡ್ಡ ಹುದ್ದೆಗಳಿಗೆ ಏರಬೇಕಾದರೂ ಶಿಕ್ಷಣದ ಅಡಿಪಾಯ ಬೇಕೇ ಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಕನಕದಾಸರು ಜ್ಞಾನದ ಮಹತ್ವವವನ್ನು ತಮ್ಮ ತತ್ವಪದಗಳಲ್ಲಿ ತಿಳಿಸಿದ್ದಾರೆ. ಅದನ್ನು ಇಂದಿನ ಕಾಲಕ್ಕೆ ಅನ್ವಯಿಸಿಕೊಳ್ಳುವುದಾದರೆ ಶಿಕ್ಷಣವು ಎಲ್ಲಕ್ಕಿಂತ ಶ್ರೇಷ್ಠ ಎಂದಾಗುತ್ತದೆ. ಸಮಾಜದಲ್ಲಿ ಸಮಾನತೆಯ ಪ್ರತಿಷ್ಠಾಪನೆಯಾಗಬೇಕು, ಎಲ್ಲರೂ ಗೌರವದಿಂದ ಬದುಕಬೇಕು ಎಂದು ಕನಕದಾಸರು ಸಾರಿದ್ದರು. ಹಾಗಾಗಿ, ನಾಡಿನ ಎಲ್ಲೆಡೆ ಕನಕದಾಸರ ಜಯಂತಿ ನಡೆಯಬೇಕು. ನಾಡಿಗಾಗಿ ದುಡಿದ ಎಲ್ಲ ಮಹನೀಯರ ಜಯಂತಿಗಳೂ ಗೌರವದಿಂದ ನಡೆಯಬೇಕು ಎಂದು ತಿಳಿಸಿದರು.

ಸಾಹಿತಿ ಕಬ್ಬಿನಾಲೆ ವಸಂತ ಭಾರಧ್ವಾಜ್ ಮಾತನಾಡಿ, ಕನಕದಾಸರದು ಅಪ್ಪಟ ಮಡಿವಂತರಿಗೂ, ಬುದ್ಧಿಜೀವಿಗಳಿಗೂ ನಿಲುಕದ ಮೇರು ವ್ಯಕ್ತಿತ್ವ. ಅವರ ಸಾಹಿತ್ಯದಲ್ಲಿ ಆಧುನಿಕ ಚಿಂತನೆ ಇದೆ. ಸಮ ಸಮಾಜದ ನಿರ್ಮಾಣದ ಆಶಯವಿದೆ. ಆದರೆ, ಇಂದು ಸಮಾಜವು ಜಾತಿ ವಿಘಟನೆಯ ದಾರಿಯಲ್ಲಿ ಸಾಗುತ್ತಿದೆ. ಇದಕ್ಕೆ ಪರಿಹಾರ ಕನಕದಾಸರಂತಹ ಶ್ರೇಷ್ಠರಲ್ಲಿ ಇದೆ ಎಂದು ವಿಶ್ಲೇಷಿಸಿದರು.

ಇದೇ ವೇಳೆ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಕೆ.ಎನ್.ಇಂಗಳಗಿ, ನಿವೃತ್ತ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ವಾಸು, ರಾಜ್ಯಪ್ರಶಸ್ತಿ ಪುರಸ್ಕೃತರಾದ ಚಿಕ್ಕಮಲ್ಲೇಗೌಡ, ಕಾಮೇಗೌಡ, ಪಾಲಿಕೆ ಸದಸ್ಯ ಜಿ.ಎಸ್.ಸತ್ಯರಾಜ್ ಅವರನ್ನು ಸನ್ಮಾನಿಸಲಾಯಿತು. ಸಂಘದ ವತಿಯಿಂದ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕೆ.ಆರ್.ನಗರ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಮೇಯರ್ ಪುಷ್ಪಲತಾ ಜಗನ್ನಾಥ್, ಕಾಂಗ್ರೆಸ್ ಮುಖಂಡ ಸಿ.ಎಚ್.ವಿಜಯಶಂಕರ್, ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್, ಕೆಎಸ್ಆರ್‌ಟಿಸಿ ಕಾಮಗಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಎಚ್.ಎಂ.ನಾಗರಾಜಮೂರ್ತಿ, ಮೈಸೂರು ತಾಲ್ಲೂಕು ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ನಗರಪಾಲಿಕೆ ಸದಸ್ಯರಾದ ಜೆ.ಗೋಪಿ, ನಮ್ರತಾ ರಮೇಶ್, ನಿರ್ಮಲಾ ಹರೀಶ್, ಸಂಘದ ಅಧ್ಯಕ್ಷ ಕೆ.ಎನ್.ಕೃಷ್ಣೇಗೌಡ ಭಾಗವಹಿಸಿದ್ದರು.

ಕಲಾ ಮೆರವಣಿಗೆ:ಸಭೆಗೆ ಮುನ್ನ ಕನಕದಾಸರ ಮೂರ್ತಿಯಿದ್ದ ರಥದ ಮೆರವಣಿಗೆ ನಡೆಯಿತು. ಜಾನಪದ ಕಲಾತಂಡಗಳ ಕಲಾ ವೈಭವ ಗಮನಸೆಳೆಯಿತು. ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್ ಚಾಲನೆ ನೀಡಿದರು. ವೀರಗಾಸೆ, ಪಟದ ಕುಣಿತ, ಡೊಳ್ಳು ಕುಣಿತ ಆಕರ್ಷಕವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT