ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದಿಗೂ ಸೆಡ್ಡು ಹೊಡೆದ ‘ಅರ್ಜುನ’

Last Updated 13 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಮೈಸೂರು ಅರಮನೆ ಆವರಣದಲ್ಲಿ ಶುಕ್ರವಾರ, ನಗರ ಸಶಸ್ತ್ರ ಪೊಲೀಸ್‌ ಪಡೆಯ ಸಾರಥ್ಯದಲ್ಲಿ ಆರು ಫಿರಂಗಿಗಳು ಒಂದರ ಬೆನ್ನಿಗೆ ಒಂದರಂತೆ 21 ಮದ್ದಿನ ಕುಶಾಲುತೋಪುಗಳನ್ನು ಭಾರಿ ಶಬ್ದದೊಂದಿಗೆ ಬೆಂಕಿಯುಗುಳುತ್ತಾ ಸಿಡಿಸಿದವು.

ಅನತಿ ದೂರದಲ್ಲೇ ‘ಅರ್ಜುನ’ನ ಸಾರಥ್ಯದಲ್ಲಿ ನಿಂತಿದ್ದ ಬಲರಾಮ, ವಿಕ್ರಮ, ಗೋಪಿ, ವಿಜಯಾ, ಕಾವೇರಿ ಒಂದಿನಿತು ಕದಲದೆ, ಬೆದರದೆ ಭಾರಿ ಶಬ್ದಕ್ಕೆ ಸೆಡ್ಡು ಹೊಡೆದವು.

ಈ ದೃಶ್ಯಾವಳಿ ಸುತ್ತಲೂ ನೆರೆದಿದ್ದವರ ಎದೆಯಲ್ಲೊಮ್ಮೆ ಕಂಪನ ಮೂಡಿಸಿತು. ಎಲ್ಲರೂ ಕಿವಿಗೆ ಹತ್ತಿ ಇಟ್ಟುಕೊಂಡು, ಕೈಯಿಂದ ಕಿವಿಗಳನ್ನು ಮುಚ್ಚಿಕೊಂಡಿದ್ದರು. ಆದರೆ, ಗಜಪಡೆ ಮಾತ್ರ ರಾಜ ಗಾಂಭೀರ್ಯದಿಂದಲೇ ಒಂದೊಂದು ಸುತ್ತು ಮುಗಿದಂತೆ, ಮಾವುತರ ಮಾರ್ಗದರ್ಶನದಂತೆ ಫಿರಂಗಿಗಳತ್ತ
ಹೆಜ್ಜೆ ಹಾಕುತ್ತಿದ್ದುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿತು.

ವಿಜಯದಶಮಿಯಂದು ಜಂಬೂಸವಾರಿ ಮುಗಿದ ಬಳಿಕ, ಬನ್ನಿಮಂಟಪದ ಆವರಣದಲ್ಲಿ ಸಿಡಿಸಲಿರುವ ಸಿಡಿಮದ್ದಿನ ಶಬ್ದಕ್ಕೆ ದಸರಾ ಆನೆಗಳು, ಕುದುರೆಗಳು ಬೆದರದಿರಲಿ ಎಂದು ಸಿಡಿಮದ್ದು ಸಿಡಿಸುವ ಮೊದಲ ತಾಲೀಮು ನಡೆಸಲಾಗುತ್ತದೆ.

ಒಂದೊಂದು ಸಿಡಿಮದ್ದು ಸಿಡಿದಂತೆ 25 ಕುದುರೆಗಳು ಅಶ್ವಾರೂಢ ಪೊಲೀಸರ ಸಮೇತ ನಿಂತಲ್ಲೇ ಕಂಪಿಸಿದವು. ಕೆಲ ಕುದುರೆಗಳು ಕೆನೆದವು. ಜಂಬೂ ಸವಾರಿಯ ವೈಭವದ ಮೆರುಗು ಹೆಚ್ಚಿಸಲಿಕ್ಕಾಗಿ ಈ ಬಾರಿ ಅರಮನೆ ಆವರಣದಲ್ಲಿ 13 ಆನೆಗಳು ಬೀಡುಬಿಟ್ಟಿದ್ದು, 11 ಆನೆಗಳು ತಾಲೀಮಿನಲ್ಲಿ ಭಾಗಿಯಾಗಿದ್ದವು.

ಗರ್ಭಿಣಿ ವರಲಕ್ಷ್ಮೀ ಹಾಗೂ ಹುಲಿ ಕಾರ್ಯಾಚರಣೆಗಾಗಿ ಗುಂಡ್ಲುಪೇಟೆ ಭಾಗಕ್ಕೆ ತೆರಳಿರುವ ಅಭಿಮನ್ಯು ತಾಲೀಮಿಗೆ ಗೈರಾಗಿದ್ದವು. ದಸರಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಹೊಸ ಆನೆಗಳಾದ ಈಶ್ವರ, ಜಯಪ್ರಕಾಶ, ಲಕ್ಷ್ಮೀ ಹಾಗೂ ಈ ಹಿಂದೆ ಭಾಗಿಯಾಗಿದ್ದ ದುರ್ಗಾ ಪರಮೇಶ್ವರಿ, ಧನಂಜಯ ಗಾಬರಿಗೊಳ್ಳಬಾರದು ಎಂದು ಈ ಐದು ಆನೆಗಳ ಕಾಲಿಗೆ ಸರಪಳಿ ಬಿಗಿದು ಮರಕ್ಕೆ ಕಟ್ಟಿಹಾಕಲಾಗಿತ್ತು.

ಒಂದೊಂದು ಸಿಡಿಮದ್ದು ಸಿಡಿದ ಸಂದರ್ಭ ಧ‌ನಂಜಯ ಗಲಿಬಿಲಿಗೊಂಡ. ಗಾಬರಿಗೊಂಡು ನಿಂತಲ್ಲೇ ನೈಸರ್ಗಿಕ ಕರೆಗಳನ್ನು ಪೂರೈಸಿಕೊಂಡಿತು. ಹಿಂದಿನ ವರ್ಷ ನಿರಾತಂಕವಾಗಿತ್ತು. ಈ ಬಾರಿ ಮಾವುತ ಇರದಿದ್ದರಿಂದ ಕಾವಾಡಿಯೇ ಆನೆಯನ್ನು ಮುನ್ನಡೆಸುತ್ತಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಸರಪಳಿಯಿಂದ ಈ ಆನೆಯನ್ನು ಮರಕ್ಕೆ ಕಟ್ಟಿಹಾಕಲಾಗಿತ್ತು.

ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗಿ, ನಗರ ಪರಿಸರಕ್ಕೆ ಹೊಂದಿಕೊಳ್ಳಲು ಹೆಣಗಾಡುತ್ತಿರುವ ಈಶ್ವರ ಮಾತ್ರ ಬೆದರಲಿಲ್ಲ. ಆರಂಭದಲ್ಲಿ ಒಂದೆರೆಡು ಸುತ್ತು ಮದ್ದು ಸಿಡಿದಾಗ ಕೊಂಚ ವಿಚಲಿತನಾದ. ನಂತರ ಸಹಜವಾಗಿಯೇ ವರ್ತಿಸಿದ. ಜಯಪ್ರಕಾಶ, ಲಕ್ಷ್ಮೀ ಸಹ ಹೆಚ್ಚೇನೂ ಗಾಬರಿಗೊಳ್ಳಲಿಲ್ಲ.

ಈ ಹಿಂದಿನ ಹಲವು ಜಂಬೂಸವಾರಿಗಳಲ್ಲಿ ಭಾಗಿಯಾಗಿದ್ದ ದುರ್ಗಾ ಪರಮೇಶ್ವರಿ ಪ್ರತಿ ಬಾರಿಯೂ ಶಬ್ದಕ್ಕೆ ಬೆದರುವುದರಿಂದ ಮುಂದಿನ ಎರಡು ಕಾಲಿಗೆ ಸರಪಳಿ ಬಿಗಿದು, ಮರಕ್ಕೆ ಕಟ್ಟಲಾಗಿತ್ತು. 21 ಕುಶಾಲತೋಪುಗಳು ಫಿರಂಗಿಗಳಿಂದ ಸಿಡಿದು ಮುಗಿಯುವ ಹೊತ್ತಿಗೆ, ಅರ್ಜುನ ಸಾರಥ್ಯದ ಆರು ಆನೆಗಳು ಸಮೀಪವೇ ನಿಂತಿದ್ದವು.

ಕುಶಾಲುತೋಪು ಹಾರಿಸುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮರಕ್ಕೆ ಕಟ್ಟಿದ್ದ ಐದು ಆನೆಗಳನ್ನು ಫಿರಂಗಿಗಳ ಬಳಿ ಕರೆದೊಯ್ದು ಸಿಡಿಮದ್ದಿನ ವಾಸನೆ ಪರಿಚಯಿಸಲಾಯಿತು. ನಂತರ 11 ಆನೆಗಳು ಸಾಲಾಗಿ ಅರಮನೆಯೊಳಗೆ ಹೊಕ್ಕವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT