ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಸಿಗದ ಅನುದಾನ: ಕರ್ನಾಟಕ ಸೇನಾ ಪಡೆ ಖಂಡನೆ

ಕೇಂದ್ರದ ಬಜೆಟ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ಗೆ ಸೆಸ್‌: ಕರ್ನಾಟಕ ಸೇನಾ ಪಡೆ ಖಂಡನೆ
Last Updated 2 ಫೆಬ್ರುವರಿ 2021, 15:50 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ಗೆ ಸೆಸ್‌ ವಿಧಿಸಿದ್ದನ್ನು ಖಂಡಿಸಿ; ರಾಜ್ಯದ ಅಭಿವೃದ್ಧಿಗೆ ಯಾವುದೇ ರೀತಿಯ ಹೆಚ್ಚಿನ ಅನುದಾನ ಘೋಷಿಸದ್ದನ್ನು ವಿರೋಧಿಸಿ ಮಂಗಳವಾರ ನಗರದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡ ಪ್ರತಿಭಟನಕಾರರು, ‘ಬೈಕ್‍ಗಳಿಗೆ ಶ್ರದ್ಧಾಂಜಲಿ, ಮತ್ತೆ ಮರಳಿ ಬೈಸಿಕಲ್’ ಎಂದು ಅಣುಕು ಪ್ರದರ್ಶಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾದಿಂದ ಜನರ ಆದಾಯವೇ ಕುಸಿದಿದ್ದು ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕೇಂದ್ರ ಸರ್ಕಾರ ಪೆಟ್ರೋಲ್– ಡೀಸೆಲ್‌ಗೆ ಸೆಸ್‌ ವಿಧಿಸಿದ್ದು ಜನ ಸಾಮಾನ್ಯರಿಗೆ ಶಾಕ್ ನೀಡಿದೆ. ಮುಂದೊಂದು ದಿನ ಇದು ಜನರ ಜೇಬು ಸುಡಲಿದೆ ಎಂದು ಪ್ರತಿಭಟನನಿತರು ತಮ್ಮೊಳಗಿನ ಅಸಮಾಧಾನ ಹೊರಹಾಕಿದರು.

ದೇಶದ ಜನರಿಟ್ಟಿದ್ದ ಅಪಾರ ನಂಬಿಕೆಯನ್ನು ಹುಸಿಯಾಗಿಸಿದ ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ಜನರಿಗೆ ಪೆಟ್ಟಿನ ಮೇಲೆ ಪೆಟ್ಟು ಕೊಡುತ್ತಿದ್ದಾರೆ. ಈ ಸಾಲಿನ ಬಜೆಟ್‍ನಲ್ಲಿ ದೇಶದ ಆರ್ಥಿಕತೆಯನ್ನು ಸರಿದೂಗಿಸಲು ಮತ್ತೆ ಪೆಟ್ರೋಲ್–ಡೀಸೆಲ್‌ಗೆ ಸೆಸ್‌ ವಿಧಿಸಿದ್ದು ಅಕ್ಷರಶಃ ಖಂಡನೀಯ ಎಂದು ಕಿಡಿಕಾರಿದರು.

ಬಜೆಟ್‍ನಲ್ಲಿ ರಾಜ್ಯಕ್ಕೆ ಯಾವುದೇ ವಿಶೇಷ ಒತ್ತು ನೀಡಿಲ್ಲ. ಅಭಿವೃದ್ಧಿಗೆ ಪೂರಕವಾದ ಯಾವುದೇ ಘೋಷಣೆಯೂ ಇಲ್ಲ. ಇದೇ ರೀತಿ ಕೇಂದ್ರ ಸರ್ಕಾರ ಪದೇ ಪದೇ ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆಯನ್ನು ಮುಂದುವರಿಸಿದರೆ ರೈತರು, ಸಾಮಾನ್ಯ ಜನರು ತಮ್ಮ ಬೈಕ್‌ಗಳನ್ನು ಸುಟ್ಟು ಹಾಕಿ ಶ್ರದ್ಧಾಂಜಲಿ ಮಾಡಿ ಮತ್ತೆ ಸೈಕಲ್‍ಗಳನ್ನು ಬಳಸಬೇಕಾಗುತ್ತದೆ.

ಒಂದೇ ದೇಶ, ಒಂದೇ ತೆರಿಗೆ ಎಂದು ಹೇಳುತ್ತಿರುವ ಪ್ರಧಾನ ಮಂತ್ರಿ, ಸರ್ಕಾರಕ್ಕೆ ಆದಾಯ ಬರುವ ಎಲ್ಲಾ ವಸ್ತುಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದು, ದೇಶದ ಜನರಿಗೆ ಅನುಕೂಲವಾಗುವ ಪೆಟ್ರೋಲ್‌–ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತರದಿರುವುದು ಯಾವ ನ್ಯಾಯ ಎಂದು ಪ್ರತಿಭಟನನಿರತರು ಪ್ರಶ್ನಿಸಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅತಿ ಅಗತ್ಯ ವಸ್ತುವಿನ ಬೆಲೆಗಳ ಏರಿಕೆ, ನೋಟ್‍ಬ್ಯಾನ್, ರೇರಾ ಕಾಯ್ದೆ, ಇನ್ನಿತರ ಜನ ವಿರೋಧಿ ನೀತಿಗಳನ್ನೇ ಜಾರಿಗೆ ತಂದು ಸಾಮಾನ್ಯರಿಗೆ ಬರೆ ಹಾಕುತ್ತಿದೆ. ಈಗ ದೇಶದ ನಾಗರಿಕರು, ವಿರೋಧ ಪಕ್ಷದವರು ಹಾಗೂ ಎಲ್ಲಾ ಜನಪ್ರತಿನಿಧಿಗಳು ಒಂದಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಬೇಕು. ಕಡ್ಡಾಯವಾಗಿ ಪೆಟ್ರೋಲ್, ಡೀಸೆಲ್‍ನ್ನು ಜಿಎಸ್‍ಟಿ ವ್ಯಾಪ್ತಿಗೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ಪೆಟ್ರೋಲ್ ಮತ್ತು ಡೀಸೆಲ್‍ನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದಾಗ ಮಾತ್ರ ನಿಜವಾದ ಅಚ್ಛೇ ದಿನಗಳು ಜನ ಸಾಮಾನ್ಯರಿಗೆ ಬರಲಿವೆ ಎಂದು ಪ್ರತಿಭಟನನಿರತರು ಹೇಳಿದರು.

ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪ್ರಜೀಶ್.ಪಿ, ಪಡುವಾರಹಳ್ಳಿ ರಾಮಕೃಷ್ಣ, ಎಳನೀರು ರಾಮಣ್ಣ, ಸುಬ್ಬೇಗೌಡ, ಡಾ.ಪುಷ್ಪಾ ಶಂಭುಕುಮಾರ್, ವಿಜಯೇಂದ್ರ, ಕುಮಾರಗೌಡ, ಅನಿಲ ಶಾಂತಮೂರ್ತಿ, ಡಾ.ಮೊಗಣ್ಣಾಚಾರ್, ಸ್ವಾಮಿ, ನಂದಕುಮಾರ್, ಮಿನಿ ಬಂಗಾರಪ್ಪ, ರಾಧಾಕೃಷ್ಣ, ದರ್ಶನ್‍ಗೌಡ, ನಂಜುಂಡಸ್ವಾಮಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಆನ್‌ಲೈನ್‌ ಮದ್ಯ ಮಾರಾಟಕ್ಕೆ ವಿರೋಧ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಮದ್ಯ ವರ್ತಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡ ಪ್ರತಿಭಟನಕಾರರು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಫೆಡರೇಷನ್ ಆಫ್ ಕರ್ನಾಟಕ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್, ರಾಜ್ಯದ ಸನ್ನದುದಾರರ ಕುಂದುಕೊರತೆ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದರೂ, ಕೆಲವೇ ಕೆಲವು ಸಮಸ್ಯೆ ಪರಿಹಾರಗೊಂಡಿವೆ. ಆದರೆ ಸಾರಾಯಿ ನಿಷೇಧದ ನಂತರ ಮದ್ಯ ವ್ಯಾಪಾರದ ಮೇಲೆ ಸರ್ಕಾರದ ಗದಾ ಪ್ರಹಾರ ನಡೆಯುತ್ತಲೇ ಇದ್ದು, ಈ ಉದ್ಯಮವನ್ನು ನಡೆಸುವುದು ಬಹಳ ಕಷ್ಟವಾಗಿದೆ.

ಕೋವಿಡ್-19ರ ಸಂದರ್ಭದಲ್ಲಿ ಮೂರ್ನಾಲ್ಕು ತಿಂಗಳು ವ್ಯಾಪಾರ–ವಹಿವಾಟು ನಡೆಸದೆ ನಷ್ಟದಲ್ಲಿದ್ದರೂ; ವಾರ್ಷಿಕ ಸನ್ನದು ಶುಲ್ಕವನ್ನು ಮುಂಗಡವಾಗಿ ಹಾಗೂ ಸಂಪೂರ್ಣವಾಗಿ ಪಾವತಿಸಿಕೊಂಡು ನಮ್ಮ ಉದ್ಯಮಕ್ಕೆ ಯಾವುದೇ ರೀತಿಯ ಸಹಾಯವನ್ನೂ ಮಾಡಿಲ್ಲ ಎಂದು ಪ್ರತಿಭಟನನಿರತರು ಕಿಡಿಕಾರಿದರು.

ಸರ್ಕಾರಕ್ಕೆ ಎಷ್ಟೇ ಮನವಿ ಸಲ್ಲಿಸಿದ್ದರೂ ಸ್ಪಂದನೆ ಸಿಗ್ತಿಲ್ಲ. ಬೇರೆ ದಾರಿಯಿಲ್ಲದೆ ಪ್ರತಿಭಟನೆ ನಡೆಸಿದ್ದೇವೆ. ಕೂಡಲೇ ಆನ್‍ಲೈನ್ ಮದ್ಯ ಮಾರಾಟ ಮಾಡುವ ಪ್ರಸ್ತಾವವನ್ನು ಕೈಬಿಟ್ಟು ಅಧಿಕೃತವಾಗಿ ಘೋಷಿಸಬೇಕು. ನಮ್ಮ ಮನವಿಗೆ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಎಸ್.ಗುರುಸ್ವಾಮಿ, ಉಪಾಧ್ಯಕ್ಷ ಆರ್.ಚೆನ್ನಕೇಶವ, ಪರಮೇಶ್, ನಾರಾಯಣಪ್ಪ, ಲಕ್ಷ್ಮಣ್.ಆರ್, ಶ್ರೀನಿವಾಸ್ ಎನ್.ನಾಗರಾಜು, ಎಸ್.ನಿಂಗರಾಜು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT